ಉಡುಪಿ (ಆಗಸ್ಟ್ 4): ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ನರೇಗಾ ಕಾಮಗಾರಿಯನ್ನು ಅತ್ಯಂತ ಯಶ್ವಸಿಯಾಗಿ ಅನುಷ್ಠಾನಗೊಳಿಸುವಂತಾಗಬೇಕು.ಈಗಾಗಲೇ ಜಿಲ್ಲೆಯಲ್ಲಿ  ದಾಖಲೆ ಸಂಖ್ಯೆಯಲ್ಲಿ  ಯುವಕರು ನರೇಗಾ ಕಾರ್ಯಕ್ರಮದಡಿ ಕಾಮಗಾರಿಯನ್ನು ನಿರ್ವಹಿಸಲು ಉತ್ಸುಕರಾಗಿದ್ದು ಕಾರ್ಯಕ್ರಮದ ಕುರಿತು  ಮಾಹಿತಿ ನೀಡುವ ಕೆಲಸ ಆಗಬೇಕು ಎಂದು  ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

   ಅವರು ಮಂಗಳವಾರ, ಅಂಬಲಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಯಲ್ಲಿ ಮಾತನಡಿದರು.

   ಜಿಲ್ಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ ನರೇಗಾ ಕಾರ್ಯಕ್ರಮದಡಿ ಹಲವಾರು ಕೆಲಸ ಕಾರ್ಯಗಳನ್ನು ಅನುಷ್ಠಾನ ಗೊಳಿಸಿ ಜಿಲ್ಲೆಯು ಪ್ರಥಮ ಸ್ಥಾನ ಗಳಿಸುವಂತಾಗಿದ್ದು ಇದೇ ರೀತಿ ಮುಂದೆಯು  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಎಲ್ಲಾ ಪಂಚಾಯತ್ ಗಳು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಪವನ್ ಕುಮಾರ್,ತಾಲೂಕು ಸಂಯೋಜಕ ರಾಜು ಮೂಲ್ಯ,ತಾಲೂಕು ಪಂಚಾಯತ್ ಸದಸ್ಯ ರಾಜೇಂದ್ರ ಪಂದುಬೆಟ್ಟು,ಪ್ರಮೋದ್ ಕೆ.ಸಾಲ್ಯಾನ್, ಸೋಮನಾಥ್ ಬಿ.ಕೆ, ಉಷಾ, ಪುಷ್ಪ ಶೆಟ್ಟಿ ಉಪಸ್ಥಿತರಿದ್ದರು.