ಜನವರಿ 1ರಂದು‌ ನಾರಾಯಣ ‌ಗುರುಗಳ ಅಭಿಮಾನಿಗಳು, ಭಕ್ತರು ಹೊಸ ವರುಷಾಚರಣೆಯೊಂದಿಗೆ ಶಿವಗಿರಿ ಯಾತ್ರೆ ‌ಸಂಪನ್ನಗೊಳಿಸುತ್ತಾರೆ.

(pic credit: mygodpictures.com)

1927ರ‌ ಒಂದು ದಿನ ನಾರಾಯಣ ‌ಗುರುಗಳ ಅನುಯಾಯಿಗಳಾದ ಕವಿ ಕಿಟ್ಟನ್ ಮತ್ತು ವಲ್ಲಬಚೇರಿ ಗೋವಿಂದನ್ ಅವರು ‌ಗುರುಗಳ ಬಳಿ ಶಿವಗಿರಿ ‌ಯಾತ್ರೆಯ ಪ್ರಸ್ತಾಪವನ್ನು ಮುಂದಿಡುತ್ತಾರೆ. ಆಗ‌ ಗುರುಗಳು ಆಶ್ರಮದ‌ ಹೊರಗೆ ಬೆಂಚಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಶಿವಗಿರಿ ಯಾತ್ರೆ ಯಾಕೆ ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರ ಇರಲಿಲ್ಲ. ಗುರುಗಳೇ ತೀರ್ಥ‌ ಪ್ರಸಾದ ವಿತರಣೆಯ ವಿಶೇಷ ‌ದಿನವಾಗಿ ಆಚರಿಸುವಂತೆ ತಿಳಿಸಿದರು.

ಆಮೇಲೆ ‌ಯಾವ ದಿನ ಎಂಬ ಗುರುಗಳ ಪ್ರಶ್ನೆಗೆ ಅನುಯಾಯಿಗಳು ಮಲಯಾಳಂ ಹೊಸ ವರುಷದ‌ ವಿಶು‌ ದಿನ ಆದೀತು‌ ಎಂದು ಸೂಚಿಸುತ್ತಾರೆ. ಅದಕ್ಕೆ ‌ಅಡ್ಡ ತಲೆ ಆಡಿಸಿದ ಗುರುಗಳು ವಿಶು‌ ನಿಮಗೆ ಹೊಸ ವರುಷ, ಜಗತ್ತಿಗೆ ಯಾವುದು ಹೊಸ ವರುಷದ ದಿನ, ಜನವರಿ ಒಂದು ತಾನೇ ಅಂದು‌ ಶಿವಗಿರಿ ಯಾತ್ರೆ ಇಟ್ಟುಕೊಳ್ಳಲು ಸೂಚಿಸುತ್ತಾರೆ.

ಅರುವಿಪುರದಲ್ಲಿ ಮೊದಲ ಆಶ್ರಮ, ಆಮೇಲೆ ಶಿವಗಿರಿ ‌ಮೊದಲಾದ ಕ್ಷೇತ್ರ, ಸರ್ವ ಧರ್ಮಗಳ ‌ಆಲುವ ಆಶ್ರಮ, ಮೂರ್ತಿಯ ಬದಲು ಕನ್ನಡಿ ಇಟ್ಟ ಆಲಯ ಎಲ್ಲ ಕಡೆಯೂ ಗುರುಗಳ ಸುತ್ತ ಜನ ಜಾತ್ರೆ ಸೇರುತ್ತಿತ್ತು. ಗುರುಗಳಿಗೆ ಸರ್ವ ಧರ್ಮದ‌ ತನ್ನ ಆಲುವ ಆಶ್ರಮದಲ್ಲಿ ಉಳಿಯಲು ಇಚ್ಛೆಯಿತ್ತು. ಆದರೆ ಆಲುವ ಸದಾ ಪ್ರವಾಹದ ನೆಲೆ ಆಗಿದ್ದುದರಿಂದ ಶಿವಗಿರಿಯನ್ನು ಅವರು ತನ್ನ ಮುಖ್ಯ ನೆಲೆ ಮಾಡಿಕೊಂಡರು.

ಶಿವಗಿರಿಯಲ್ಲಿ ನಿತ್ಯ ‌ಜನ ಜಾತ್ರೆ, ಇದು ನಿಯೋಜಿತ ವಿಶೇಷ ಯಾತ್ರೆ.

ಮೂರು ವರುಷದಿಂದ ಜನವರಿ ಒಂದರ ಆಚೀಚೆಯ ದಿನಗಳನ್ನು ಇಟ್ಟುಕೊಂಡು ಶಿವಗಿರಿ ಯಾತ್ರೆ ‌ನಡೆಸುತ್ತಾರೆ. ಇತರ ದಿನವೂ ಬರುತ್ತಾರೆ. ಶಿವಗಿರಿ ಶಾರದೆಯ ಕ್ಷೇತ್ರ ‌ಎನಿಸಿದರೂ ಶಿವಗಿರಿಯಲ್ಲಿ‌ ಇರುವ ‌ನಾರಾಯಣ‌ ಗುರುಗಳ ಸಮಾಧಿಗೆ ಈ ಯಾತ್ರೆ ಕಾಲದಲ್ಲಿ ಭಕ್ತರು ‌ವಿಶೇಷವಾಗಿ ನಡೆದುಕೊಂಡು ‌ತೀರ್ಥ ಪ್ರಸಾದ ಪಡೆಯುತ್ತಾರೆ.

-ಪೇಜಾ ‌