ಆತ್ಮೀಯರೆ ಇಂದು ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಇವರ ಜನ್ಮ ದಿನ ಎಂಬುದನ್ನು ಕೆಲವು ಕವಿತೆಗಳು , ಲೇಖನಗಳು ನೆನಪಿಸುತ್ತಿವೆ. ಅವರಿಗೆ ಕೃತಜ್ಞತೆಗಳು. ನಿಜಕ್ಕೂ ಸಾವಿತ್ರಿಯವರ ಜನ್ಮ ದಿನವನ್ನು ಸರಕಾರವು ಆಚರಿಸಲು ಕರೆ ನೀಡಿದ್ದು ಅಭಿಮಾನದ ಸಂಗತಿಯಾಗಿದೆ .
ಆ ಕಾಲ ಘಟ್ಟದಲ್ಲಿ , ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಅವರ ಸ್ವಾವಲಂಬಿ ಬದುಕಿಗೆ ಪುಲೆ ದಂಪತಿಗಳು ಶ್ರಮ ಪಟ್ಟಿದ್ದು ಸಣ್ಣ ಸಂಗತಿಯಲ್ಲ. ಶೂದ್ರ ಮತ್ತು ಶೂದ್ರಾತಿ ಶೂದ್ರರ ವಿದ್ಯಾಭ್ಯಾಸಕ್ಕೆ ಅದರಲ್ಲೂ ಹೆಣ್ಣು ಮಕ್ಕಳ ಸ್ವಾಲಂಬಿ ಜೀವನಕ್ಕೆ ಪರಿಶ್ರಮ ಪಟ್ಟಿದ್ದು , ಕೆಲವು ಕಿಡಿಗೇಡಿಗಳ ನಿಂದನೆ ಮತ್ತು ಹಲ್ಲೆಗಳನ್ನು ಸಹಿಸಿ ಮೆಟ್ಟಿ ನಿಂತಿದ್ದು ಸಣ್ಣ ಸಂಗತಿಯಲ್ಲ. ಅಂದು ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳಿಂದ ಬ್ರಿಟಿಷ ಸರಕಾರ ಹಾಗೂ ಸ್ವಾತಂತ್ರ್ಯ ನಂತರದ ಭಾರತ ಸರಕಾರಗಳು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದು ಗಮನಾರ್ಹ. ಹೆಣ್ಣು ಮಕ್ಕಳ ವಿಧವಾ ವಿವಾಹ ಹಾಗೂ ಅತ್ಯಾಚಾರಕ್ಕೆ ಒಳಗಾಗಿಯೋ ಮೋಸಕ್ಕೆ ಒಳಗಾಗಿಯೋ ಗರ್ಭವತಿಯಾದ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿ ಸಲುಹಿದರು . ಇಂತಹವರಿಂದ ಜನಿಸಿದ ಮಕ್ಕಳಿಗೂ ಆಶ್ರಯ ನೀಡಲು ಶಿಶು ಕೇಂದ್ರಗಳನ್ನು ತೆರೆದರು. ಹೆಂಗಸರು ತೆಲೆ ಬೋಳಿಸುವುದನ್ನು ವಿರೋಧಿಸಿದರು. ಸತಿ ಸಹಗಮನ ಪದ್ಧತಿಯನ್ನು ತಡೆಗಟ್ಟಲು ಶ್ರಮಿಸಿದರು . ಒಂದೇ ಎರಡೇ .. ತಾವೇ ಬಾಲ್ಯ ವಿವಾಹಕ್ಕೆ ಒಳಪಟ್ಟು ಅನುಭವಿಸಿ ಬಾಲ್ಯದಾಟದ ಸ್ವಾತಂತ್ರವನ್ನು ಕಳೆದುಕೊಂಡ ನೋವು ಇತರರು ಅನುಭವಿಸಬಾರದೆಂಬ ಕಳಕಳಿಯಿಂದ ಬಾಲ್ಯ ವಿವಾಹವನ್ನು ತಡೆಗಟ್ಟಲು ಪ್ರಯತ್ನಿಸಿದರು. ಅನೇಕ ಶಾಲೆಗಳನ್ನು ತೆರೆದರು . ರಾತ್ರಿ ಶಾಲೆಗಳನ್ನು ನಡೆಸಿದರು. ಪತಿ ಜ್ಯೋತಿಬಾ ಬೇರೆ ಕಡೆಗೆ ಉದ್ಯೋಗಕ್ಕೆ ಹೋಗಿ ಸಂಸಾರ ನೌಕೆಗೆ ಖರ್ಚು ನಿಭಾಯಿಸುತ್ತಿದ್ದರೆ . ಸಾವಿತ್ರಿಯವರು ಉಚಿತವಾಗಿ ಶಿಕ್ಷಣ ದಾನ ಮಾಡುತ್ತಿದ್ದರು. ಇವರ ಸಾಮಾಜಿಕ ಹಾಗೂ ಶೈಕ್ಷಣಿಕ ಕಾಳಜಿಯನ್ನು ಗಮನಿಸಿದ ಬ್ರಿಟಿಷ ಸರಕಾರದ ಶಿಕ್ಷಣ ಇಲಾಖೆ ಇವರಿಗೆ " ಭಾರತದ ಮೊಟ್ಟ ಮೊದಲ ಶಿಕ್ಷಕಿ " ಎಂಬ ಬಿರುದು ನೀಡಿ ಗೌರವಿಸಿತು. ಇಂದಿನ ಸರಕಾರಗಳು ಶಾಲೆ ಬಿಡುವ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲು , ಹಾಜರಾತಿ ಕಡ್ಡಾಯ ಮಾಡಲು ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಅಂದಿನ ದಿನಗಳಲ್ಲಿಯೇ ಈ ದಂಪತಿಗಳು ಗೈರಾಗಿದ್ದ ಮಕ್ಕಳಿಗೆ ವಿಶೇಷ ಧನ ಸಹಾಯವನ್ನು ನೀಡಿ ಮಕ್ಕಳನ್ನು ಕರೆ ತರುತ್ತಿದ್ದ ಒಂದು ಯೋಜನೆಯಾದರೆ , ಶೇಕಡಾ 100 ಹಾಜರಾತಿ ಹೊಂದಿದ ಹಾಗೂ ಅತಿ ಬಡವ ವಿದ್ಯಾರ್ಥಿಗಳಿಗೆ ವಿಶೇಷ ಧನ ಸಹಾಯವನ್ನು ನೀಡಿ ಶಾಲೆಗೆ ಹಾಜರ್ ಆಗಲು ಪ್ರೋತ್ಸಾಹಿಸುತ್ತಿದ್ದರಂತೆ. ಇದು ನಿಜಕ್ಕೂ ಅಚ್ಚರಿ ಹಾಗೂ ಅಭಿಮಾನ ಪಡುವ ಸಂಗತಿ. ಇನ್ನೂ ಎಲ್ಲದಕ್ಕಿಂತಲೂ ಮಿಗಿಲಾದದ್ದು ಎಂದರೆ ಅವರು ವಾಸ ಮಾಡಿದ್ದು ಪುಣೆಯ ಹಿಂದುಳಿದ ಹರಿಜನ ಕೇರಿಯಲ್ಲಿ ಎಂಬುದು ಗಮನಾರ್ಹ. ಹೀಗೆ ಇವರು ಮಾಡಿದ್ದು , ನಡೆದಿದ್ದು ಎಲ್ಲವೂ ಕ್ರಾಂತಿಕಾರಿ ಹೆಜ್ಜೆಗಳೇ .. ಎಲ್ಲದಕ್ಕಿಂತಲೂ ಮಿಗಿಲು ಎಂದರೆ ಇಂದಿನ ಎಲ್ಲ ಹೆಣ್ಣು ಮಕ್ಕಳು ಇವರ ಜೀವನ ಪರಿಚಿತವಾದ ಪುಸ್ತಕಗಳನ್ನು ಒದಲೇಬೇಕು. ನನಗೆ ಗೊತ್ತಿದ್ದ ಹಾಗೆ ... ಖ್ಯಾತ ಸಾಹಿತಿ ಮಿತ್ರ *ಸರಜು ಕಾಟ್ಕರ್* ಇವರು ಇವರ ಕುರಿತು ಕಾದಂಬರಿ ರಚಿಸಿದ್ದು ಅದು ಚಲನ ಚಿತ್ರವೂ ಆಗಿದೆ. ಖ್ಯಾತ ಚಲನಚಿತ್ರ ನಟಿ ತಾರಾ ಸಾವಿತ್ರಿಬಾಯಿ ಪಾತ್ರದಲ್ಲಿ ನಟಿಸಿದ್ದು ಇದಕ್ಕೆ ರಾಜ್ಯ ಪ್ರಶಸ್ತಿಯೂ ದೊರೆತಿದೆ. ಈ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿಯೇ ಸುದ್ದಿ ಮಾಧ್ಯಮಗಳು ಅಲ್ಲಿಯ ಸರಕಾರವನ್ನು ಎಚ್ಚರಿಸಿದ್ದಲ್ಲದೆ ಈ ಚಿತ್ರವನ್ನು ಮರಾಠಿ ಭಾಷೆಯಲ್ಲಿ ತರಲು ಒತ್ತಾಯಿಸಿದ್ದು ಗಮನಾರ್ಹ.
ಇನ್ನೂ ಸಮೀಪದ ಶಿವಪೂರ ಗ್ರಾಮದ ನನ್ನ ಸನ್ಮಿತ್ರ *ಸಂದು ಚವಡಾಪುರ್** ಇವರೂ ಕೂಡ ಜ್ಯೋತಿಬಾ ಪುಲೆ ದಂಪತಿಗಳ ಕುರಿತು ಕೃತಿ ಬರೆದಿದ್ದಾರೆ. ಇನ್ನೂ ಧಾರವಾಡದ ನನ್ನ ಸನ್ಮಿತ್ರ ಲಡಾಯಿ ಪ್ರಕಾಶನ *ಬಸು* ಅವರು ಖ್ಯಾತ ಲೇಖಕಿ *ಹೆಚ್ ಅನುಪಮಾ* ಇವರು ರಚಿಸಿದ ಸಾವಿತ್ರಿ ಬಾಯಿ ಅವರ ಕುರಿತಾದ ಕೃತಿಯನ್ನು ಬಿಡುಗಡೆಗೊಳಿಸಿದ್ದು, ಇದು ಕೂಡ ಬಹು ಜನಪ್ರಿಯವಾಗಿದೆ. ಆಸಕ್ತ ಮಹಿಳೆಯಯರು , ಶಿಕ್ಷಕರು ಒದಲೇಬೇಕಾದ ಕೃತಿಗಳಾಗಿವೆ.
*ಲೇಖನ - ಈಶ್ವರ ಮಮದಾಪೂರ*