ಸಾಕಷ್ಟು ತೊರೆಗಳು, ಕೆರೆಗಳು, ನೀರಿನ ನೆಲೆಗಳು ಕಲುಷಿತಗೊಂಡು ಜನರನ್ನು ದೂರ ಮಾಡಿವೆ; ದುರ್ನಾತ ಬೀರುತ್ತಲಿವೆ. ಅದರಲ್ಲೂ ‌ನಗರ ಪ್ರದೇಶಗಳ ಗಟಾರಗಳು ಅಲ್ಲಿನ  ತೊರೆಗಳ ಗೆಳೆತನ ಮಾಡುವುದರಿಂದ ಮಾಲಿನ್ಯವನ್ನು ‌ಮೈಗಂಟಿಸಿಕೊಳ್ಳುತ್ತವೆ. ತೊರೆ ಹೋಗಲಿ ಸಾಕಷ್ಟು ದೊಡ್ಡ ನಗರಗಳ ನದಿಗಳ ಕತೆಯೂ ಅದೇ.

ಬೆಂಗಳೂರಿನ ವೃಷಭಾವತಿ, ಚೆನ್ನೈನ ಕೂವಮ್, ಮುಂಬಯಿಯ‌ ಸಾಪೋರ ಎಂದು ಈ ಪಟ್ಟಿ ‌ದೊಡ್ಡದು. ಮಂಗಳೂರು ನಗರವನ್ನು ಆವರಿಸಿರುವ ನೇತ್ರಾವತಿ, ಪಲ್ಗುಣಿ ನದಿಗಳು ಅಷ್ಟಾಗಿ ಮಾಲಿನ್ಯ ಉಂಡಿಲ್ಲ. ಆದರೆ ‌ನಗರದೊಳಗಿನ ಮಾಲೆಮಾರ್, ಕೊಡಿಯಾಲ ತೊರೆಗಳು ಒಂದೂವರೆ ದಶಕಕ್ಕೆ ಮುಂಚೆ ಕಲುಷಿತವಾಗಿರಲಿಲ್ಲ. ಮೀನು, ಮಿಂಚುಳ್ಳಿಗಳಂಥವುಗಳಿಗೆ‌ ಆಧಾರವಾಗಿಯೇ ಇದ್ದವು. ಉಜ್ಜೋಡಿಯಾಚಿನ ತೊರೆ‌ ಮೊದಲೆ ಮಲಿನವಾಗಿತ್ತು. ಕುದ್ರೋಳಿಯ‌ ತೊರೆಯಂತೂ ಬಹು ಹಿಂದೆಯೇ ಮಾಲಿನ್ಯ ಪಡೆದಿತ್ತು.

ಕುದ್ರೋಳಿಯ ನವೀನ್ ಮೊದಲಾದ ಹಿರಿಯರು ಕಿರಿಯರಿದ್ದಾಗ ಈ ತೊರೆಯಲ್ಲಿ ಸ್ನಾನ ಮಾಡಿದ್ದು, ಗಾಳ ಹಾಕಿದ್ದು, ಸಂಜೆ ತೂಟೆ ಹಿಡಿದು ಏಡಿ‌ ಹಿಡಿದದ್ದು, ಅಷ್ಟೇ ಅಲ್ಲ ಮರುವಾಯಿ ಪಡೆದದ್ದನ್ನೂ ನೆನಪಿಸಿಕೊಳ್ಳುತ್ತಾರೆ.

1908ರಲ್ಲಿ ನಾರಾಯಣ ಗುರುಗಳು ಬೆಂಗಳೂರಿಗೆ ‌ಬಂದವರು‌ ಬೋಳಾರ, ಕಂಕನಾಡಿಯಲ್ಲಿ‌ ನೋಡಿದ ಜಾಗ ತಿರಸ್ಕರಿಸಿ ಕುದ್ರೋಳಿಯಲ್ಲಿ ಕೊರಗಪ್ಪನವರು ಕೊಂಡಿದ್ದ ಜಾಗ ನೋಡಲು ಬಂದರು. ಜೆಟ್ಟಿ ರಸ್ತೆಯಲ್ಲಿ ನಡೆದು ಬಂದ ಇವರ ತಂಡ ಇದೇ ತೊರೆಯಲ್ಲಿ ಕಾಲು ತೊಳೆದುಕೊಂಡಿತು. ಒಳಗೊಂದು ಗುರ್ಮೆ ಇದ್ದುದನ್ನೂ ಬಳಸಿಕೊಂಡಿತು. ಅದೇ ಇಂದಿನ ಕುದ್ರೋಳಿ ಗೋಕರ್ಣನಾಥ ದೇವಾಲಯದ ಕಲ್ಯಾಣಿ ಆಗಿದೆ. ಈ ತೊರೆಯಲ್ಲಿ ನಲ್ವತ್ತು ವರ್ಷದ ಹಿಂದಿನವರೆಗೂ ದೋಣಿಗಳು ಮುಕ್ಕಾಲು ಕಿಮೀ ಒಳಕ್ಕೆ ಬರುತ್ತಿದ್ದವು. ದೋಣಿಯಲ್ಲಿ ಆಗೆಲ್ಲ ಸಾಮಾನು ಸಾಗಿಸುವುದು ಸಾಮಾನ್ಯವಾಗಿತ್ತು.

ಅಜ್ಜ ಈಜಾಡಿದ್ದ ಈ ತೊರೆಯಲ್ಲಿ ಇಂದು ಕಾಲಿಡುವುದು ಕೂಡ ಸಾಧ್ಯವಿಲ್ಲ. ಮೀನುಗಳಂಥವು‌ ಇದರಲ್ಲಿ ಇಂದು ಬದುಕಿಲ್ಲ. ಕೆಲವೊಮ್ಮೆ ಮೂಗು ಮುಚ್ಚಿಕೊಂಡು ಓಡಾಡುವ ‌ಅನಿವಾರ್ಯತೆಯೂ ಇಲ್ಲಿ ಇದೆ.


-By ಪೇಜಾ