ಕಾರ್ಕಳ: ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಉದ್ಘಾಟನೆ ಮತ್ತು ತರಬೇತಿ ಶಿಬಿರ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಕಳ ಮಂಜುನಾಥ ಪೈ ಮೆಮೊರಿಯಲ್ ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಶ್ ರೈ. ಕೆ ಅವರು ದೀಪ ಬೆಳಗಿ ಎನ್‍ಎಸ್‍ಎಸ್‍ನ ನೂತನ ಘಟಕಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು “ರಾಷ್ಟ್ರೀಯ ಸೇವಾ ಯೋಜನೆಯಿಂದ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ಎನ್‍ಎಸ್‍ಎಸ್ ನಮ್ಮನ್ನು ನಾವು ಅರಿತುಕೊಳ್ಳಲು ಸಹಕಾರಿ, ಮನುಷ್ಯರಾದ ನಾವು ನಾನು ಎಂಬುದನ್ನು ಬಿಟ್ಟು ನಾವು ಎಂದು ಬದುಕಬೇಕು” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ನಿವೃತ್ತ ರಾಜ್ಯ ಅಧಿಕಾರಿ ಹಾಗೂ ಜಾನಪದ ವಿದ್ವಾಂಸ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು ಮಾತನಾಡಿ “ವ್ಯಕ್ತಿತ್ವದಲ್ಲಿ ಆಗುವ ಗುಣಾತ್ಮಕ ಬದಲಾವಣೆಯೇ ಮಾನವ ಸಂಪನ್ಮೂಲಾಭಿವೃದ್ಧಿ, ಇಂತಹ ಅಭಿವೃದ್ಧಿ ಎನ್‍ಎಸ್‍ಎಸ್‍ನಿಂದ ಸಾಧ್ಯ” ಎಂದು ಹೇಳಿದರು.



ಇನ್ನೋರ್ವ ಅತಿಥಿ ಕಾರ್ಕಳ ತಾಲೂಕು ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಡಿ ಆರ್ ಅವರು ಮಾತನಾಡಿ “ಮಕ್ಕಳಿಗೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಎನ್‍ಎಸ್‍ಎಸ್ ಉತ್ತಮ ವೇದಿಕೆ, ತಪ್ಪು ಒಪ್ಪುಗಳನ್ನು ತಿಳಿಯಲು ಕೂಡಾ ಎನ್‍ಎಸ್‍ಎಸ್ ಸಹಕಾರಿ, ಇಚ್ಚಾಶಕ್ತಿ ಇದ್ದಲ್ಲಿ ಕಠಿಣ ಪರಿಶ್ರಮ ಪಟ್ಟರೆ ಅಂದುಕೊಂಡ ಸಾಧನೆಯನ್ನು ಮಾಡಬಹುದು” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್‍ನ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಯುವ ಜನತೆ ದೇಶಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಾಗ ಭಾರತ ವಿಶ್ವನಾಯಕನಾಗಲು ಸಾಧ್ಯ. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ಮಕ್ಕಳಲ್ಲಿ ಪ್ರಬುದ್ಧತೆ ಹೆಚ್ಚುತ್ತದೆ. ಮಕ್ಕಳಲ್ಲಿ ಜೀವನ ಕೌಶಲ ವೃದ್ಧಿಸಲು ರಾಷ್ಟ್ರೀಯ ಸೇವಾ ಯೋಜನೆ ಅತ್ಯಂತ ಸಹಕಾರಿ” ಎಂದು ಹೇಳಿದರು. ಸಂಸ್ಥೆಯ ಪ್ರಾಚಾರ್ಯರಾದ ಲಕ್ಷ್ಮೀನಾರಾಯಣ ಕಾಮತ್ ಪ್ರಸ್ತಾವನೆಗೈದರು. ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಂದ ಸ್ತ್ರೀಭ್ರೂಣ ಹತ್ಯೆ ಹಾಗೂ ಮಾದಕದ್ರವ್ಯ ವಿರೋಧಿ ಕಿರುಪ್ರಹಸನಗಳು ನಡೆದವು. ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪ ಪ್ರಾಚಾರ್ಯ ಡಾ. ಪ್ರಕಾಶ್ ಭಟ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ಎನ್‍ಎಸ್‍ಎಸ್ ಸಹಯೋಜನಾಧಿಕಾರಿ ದೀಪಕ್ ಸ್ವಾಗತಿಸಿ ಎನ್‍ಎಸ್‍ಎಸ್ ಯೋಜನಾಧಿಕಾರಿ ಸುಕನ್ಯಾ ಜೈನ್ ವಂದಿಸಿದರು. ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.