ಮಂಗಳೂರು: ಆಗಸ್ಟ್ 20ರಂದು ಕರ್ನಾಟಕದ ಹಿಂದುಳಿದ ವರ್ಗಗಳ ಚಾಂಪಿಯನ್ ದೇವರಾಜ ಅರಸು ಅವರ ಜನ್ಮ ದಿನವಿದ್ದು ಆ ನಿಮಿತ್ತ ರಾಜ್ಯ ಸರಕಾರವು ಮೂರು ದಿನಗಳ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು. ಪ್ರತಿ ವರುಷದಂತೆ ಈ ವರುಷವೂ ಅರಸರ ಜನ್ಮ ದಿನದಂದು ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದ ಇತರ 30 ಜಿಲ್ಲೆಗಳಲ್ಲಿ ಸಹ ದೇವರಾಜ ಅರಸು ಜಿಲ್ಲಾ ಪ್ರಶಸ್ತಿ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯ ಮಟ್ಟದ ಪ್ರಶಸ್ತಿ ನೀಡಿದರೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಮಾಡುವರು ಎಂದು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು.

ಬೆಂಗಳೂರಿನಲ್ಲಿ ಮೂರು ದಿನಗಳ ಅರಸು ಉತ್ಸವ ಇರುತ್ತದೆ, ಇದು ಹಿಂದುಳಿದ ವರ್ಗಗಳ ಉತ್ಸವವಾಗಿ ನಡೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಅರಸು ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಜಿಲ್ಲಾಧಿಕಾರಿ ಅವರೊಂದಿಗೆ ನವೀನ್ ಚಂದ್ರ ಸುವರ್ಣ, ರಾಮಚಂದ್ರ ಬೈಕಂಪಾಡಿ ಇರುತ್ತಾರೆ ಎಂದು ಪೂಜಾರಿಯವರು ಹೇಳಿದರು.

ಬೆಂಗಳೂರಿನಲ್ಲಿ ಬಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದ ಜೊತೆಗೆ ಇತರ ಸ್ಪರ್ಧೆಗಳು ಎಲ್ಲ ಹಿಂದುಳಿದವರ ಜನರ ಪಾಲ್ಗೊಳ್ಳುವಿಕೆ ಇರುತ್ತದೆ. ಅರಸು ಉತ್ಸವವು ಜಿಲ್ಲಾ ಕೇಂದ್ರಗಳಲ್ಲೂ ಕರಕುಶಲ ವಸ್ತುಗಳ ತಯಾರಿಕರ ಪಾಲ್ದಾರಿಕೆ ಇರುವಂತೆ ನಡೆಯುತ್ತದೆ ಎಂದು ಪೂಜಾರಿ ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಸಾಧಕರು, ಜನ ಪರ ಕೆಲಸಗಳಲ್ಲಿ ಈಡುಗೊಂಡವರನ್ನು ಆರಿಸಿ ರಾಜ್ಯ ಮಟ್ಟದಲ್ಲಿ ಒಂದು ಹಾಗೂ ಜಿಲ್ಲೆಗಳಲ್ಲಿ ಒಂದೊಂದು ಅರಸು ಪ್ರಶಸ್ತಿ ನೀಡುವರು ಎಂದು ಪ್ರಶ್ನೆಗೆ ಕೋಟ ಶ್ರೀನಿವಾಸ ಪೂಜಾರಿ ಅವರು ಉತ್ತರಿಸಿದರು.