ಜೀವನದ ಪಥದಲ್ಲಿ ನಮ್ಮ ಸಂತೋಷಕ್ಕಾಗಿ, ಸಮೃದ್ಧಿ ಏಳಿಗೆಗಳಿಗಾಗಿ ಅನೇಕ ಯೋಜನೆ (Plans) ಗಳನ್ನು ನಾವು ಹಾಕಿಕೊಳ್ಳುತ್ತೇವೆ. ಅವುಗಳಲ್ಲಿ ಕೆಲವು ಯೋಜನೆಗಳು ಕೈಗೂಡುತ್ತವೆ. ಕೆಲವು ಖಂಡಿತ ವಿಫಲವಾಗುತ್ತವೆ. ಆ ವಿಫಲಗೊಂಡ ಸಮಯದಲ್ಲಿ ಜರ್ಜರಿತರಾಗಿ ಬದುಕೇ ಮುಗಿಯಿತು ಎಂಬಂತಹ ಸ್ಥಿತಿಗೆ ತಲುಪಿಬಿಡುತ್ತೇವೆ. ಭರವಸೆಗಳನ್ನು ಕಳೆದುಕೊಂಡು ಮುಂದಿನ ಜೀವನಕ್ಕೆ ಯೋಜನೆಗಳನ್ನು ರೂಪಿಸುವುದೇ ಬೇಡ ಎನ್ನುವ ನಿರ್ಧಾರಕ್ಕೆ ಬಂದುಬಿಡುತ್ತೇವೆ. ಇಂತಹ ಸಂದರ್ಭಗಳಲ್ಲಿ ವಿಫಲತೆಯನ್ನು ಒಪ್ಪಿಕೊಂಡು ಆಗಿದ್ದೆಲ್ಲ ಒಳಿತಿಗೆ ಎನ್ನುವ ಸ್ಥಿತಪ್ರಜ್ಞೆಯನ್ನು ಹೊಂದಲು ಮಾತ್ರ ಬಹುತೇಕರು ನಾವು ಪ್ರಯತ್ನಿಸುವುದಿಲ್ಲ.

'ನಮ್ಮ ಯೋಜನೆಗಳೊಳಗೆ ಇಡೀ ಬದುಕನ್ನು ಒತ್ತಿ ಒತ್ತಿ ಹಿಡಿದಿಟ್ಟು ಸರಿಹೊಂದಿಸುವ ಪ್ರಯತ್ನದ ಬದಲು, ಬದುಕಿನೊಳಗೆ ನಮ್ಮ ಯೋಜನೆಗಳನ್ನು ಹಿಡಿಯುವಂತೆ ಸರಿ ಹೊಂದಿಸಲು ನಾವೇಕೆ ಪ್ರಯತ್ನಿಸಬಾರದು..!
ಪ್ರೀತಿಸಿದವಳು ಕೈ ಕೊಟ್ಟಳೆಂದೋ , ಮದುವೆಯಾದವನು ಬಿಟ್ಟುಹೋದನೆಂದೋ, ವ್ಯಾಪಾರ ಕೈ ಹಿಡಿಯಲಿಲ್ಲವೆಂದೋ, ಪರೀಕ್ಷೆ ಪಾಸಾಗಲಿಲ್ಲವೆಂದೋ ನಕಾರಾತ್ಮಕ ನಿರ್ಧಾರಕ್ಕೆ ಬಂದುಬಿಡುತ್ತೇವೆ. ಯಾರಿಗೆ ಗೊತ್ತು!! ಮುಂದೆ ಅದ್ಭುತವಾಗಿ ಪ್ರೀತಿಸುವ ಇನ್ನೊಬ್ಬಳು ಸಿಗಬಹುದು, ಇನ್ನೊಬ್ಬ ಶ್ರೀರಾಮನಂತವನೇ ಬಂದು ಕೈ ಹಿಡಿದು ನಡೆಸಬಹುದು, ನಷ್ಟದ ವ್ಯಾಪಾರ ಲಾಭದಾಯಕವಾಗಬಹುದು, ಮುಂದಿನ ಸರದಿಯಲ್ಲಿ ಪರೀಕ್ಷೆಯನ್ನು ಅತೀ ಉತ್ತಮ ಅಂಕಗಳಿಂದ ಪಾಸುಮಾಡಬಹುದು. ಇವೆಲ್ಲಾ ಬದುಕಿನ ಸಾಧ್ಯತೆಗಳೇ ಅಲ್ವಾ!
ಹೀಗಾಗಿ ತರಾತುರಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಂಡು ನಿಲ್ಲುವ ಬದಲು ಒಪ್ಪಿಕೊಂಡು ಇರುವ ಸ್ಥಿತಿಗೆ ಹೊಂದಿಕೊಂಡರೆ ಮುಂದೆ ಇನ್ನೇನೋ ಅನಿರೀಕ್ಷಿತ ಅತ್ಯದ್ಭುತ ಪರಿಹಾರದ ದಾರಿಯು ನಮಗೆ ಕಾಣಸಿಗುವ ಸಾಧ್ಯತೆ ಖಂಡಿತ ಈ ಬದುಕಲ್ಲಿ ಇದ್ದೇ ಇರುತ್ತದೆ ಎನ್ನುವ ನಂಬಿಕೆ ನನ್ನದು.
ಈ ಮೇಲಿನ ಹಿನ್ನೆಲೆಯಿಟ್ಟುಕೊಂಡು ಈ ಕೆಳಕಂಡ ನೈಜ ಘಟನೆಯನ್ನೊಮ್ಮೆ ಮೆಲುಕು ಹಾಕಿ.
1912 ರಲ್ಲಿ UK ಯಿಂದ USA ಗೆ ' ಒಂದು Luxury ಹಡಗೊಂದು ಪ್ರಪ್ರಥಮ ಸಮುದ್ರಯಾನಕ್ಕೆ ಸಿದ್ಧವಾಗಿ ಮುಂಗಡ ಟಿಕೆಟ್ ಕಾಯ್ದಿರಿಸಲು (Reservation) ಪ್ರಕ್ರಿಯೆ ಪ್ರಾರಂಭಿಸಿತು. ಒಮ್ಮೆ ಖರೀದಿಸಿದ ಮೇಲೆ ಹಣ ವಾಪಸ್ ಕೊಡಲಾಗದೆಂಬ ಕಂಡೀಷನ್ ಪ್ರಕಟಿಸಿತು. ಅಂದಿನ ಜಗತ್ತಿಗೆ ಅದೊಂದು ಅದ್ಭುತ ಅವಕಾಶವೇ ಸರಿ.
UK ಯ ಭಾಗವಾಗಿದ್ದ 'ಸ್ಕಾಟ್ಲೆಂಡ್' ನಲ್ಲಿ 'ಕ್ಲಾರ್ಕ್' ಎಂಬ ರೈತನೊಬ್ಬ ತನ್ನ ಹೆಂಡತಿ ಮತ್ತು ಐದು ಮಕ್ಕಳ ಜೊತೆ ಬೇಸಾಯ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ. ಅವನಿಗೆ ಈ ವಿಷಯ ತಿಳಿದ ತಕ್ಷಣ ತನ್ನ ಕುಟುಂಬಕ್ಕೆ ತನ್ನ ಜೀವಮಾನದ ಅನಿರೀಕ್ಷಿತ ಉಡುಗೊರೆಯೊಂದನ್ನು ಕೊಡಲು ಇದೊಂದು ಅದ್ಭುತ ಅವಕಾಶ ಎಂದುಕೊಂಡು ತನ್ನ ಜೀವಮಾನದ ಗಳಿಕೆಯನ್ನು ಒಟ್ಟುಗೂಡಿಸಿ ಟಿಕೇಟ್ ರಿಸರ್ವ್ ಮಾಡಿಸಿದ. ಕುಟುಂಬವೆಲ್ಲಾ ಅದ್ಭುತ ಸಮುದ್ರಯಾನಕ್ಕಾಗಿ ಉತ್ಸಾಹದಿಂದ, ಕುತೂಹಲದಿಂದ ನಿಗದಿತ ದಿನಕ್ಕಾಗಿ ಕಾಯಲು ಪ್ರಾರಂಭಿಸಿದರು.
ಹಡಗು ನಿರ್ಗಮಿಸುವ ದಿನಾಂಕ ನಿಗದಿಯಾಗಿತ್ತು. ಆ ನಿಗದಿಯಾದ ದಿನಾಂಕಕ್ಕೆ ಸರಿಯಾಗಿ ಒಂದು ವಾರದ ಮುಂಚೆ ಕ್ಲಾರ್ಕ್ ನ ಕಿರಿಯ ಮಗನಿಗೆ ನಾಯಿಯೊಂದು ಕಚ್ಚಿತು. ಚಿಕಿತ್ಸೆಗೆ ವೈದ್ಯರನ್ನು ಸಂಪರ್ಕಿಸಿದಾಗ ಆ ನಾಯಿಯು "ರೇಬಿಸ್" ರೋಗಗ್ರಸ್ಥವಾಗಿದ್ದರೆ ಹೇಗೆಂಬ ಆತಂಕ ವ್ಯಕ್ತವಾಗಿ ಆ ಮಗುವನ್ನು ಹತ್ತು ದಿನ 'ಹೋಮ್ ಕ್ವಾರಂಟೈನ್' ಮಾಡಿ ಕುಟುಂಬದಿಂದ ಬೇರ್ಪಡಿಸಿ ಇಡಲೇಬೇಕೆಂದು ವೈದ್ಯರು ಸಲಹೆ ಇತ್ತರು. ಕ್ವಾರಂಟೈನ್ ಆದರೆ ಸಮುದ್ರಯಾನ ಮಾಡುವಂತಿರಲಿಲ್ಲ. ಹೀಗಾಗಿ ಕ್ಲಾರ್ಕ್ ಗೆ ಅತೀವ ದುಃಖವಾಯ್ತು.
ಮಗು ಮತ್ತು ಹೆಂಡತಿಯನ್ನು ಬಿಟ್ಟು ಉಳಿದ ಮಕ್ಕಳ ಜೊತೆ ಸಮುದ್ರಯಾನ ಮುಂದುವರೆಸಲು ಯೋಚಿಸಿದನಾದರೂ ಅವನ ಆತ್ಮಸಾಕ್ಷಿಯು ಅವನ ಹೆಂಡತಿ ಮತ್ತು ಆ ಮಗುವನ್ನು ಬಿಟ್ಟು ಹೋಗಲು ಒಪ್ಪಲಿಲ್ಲ. ಅನಿವಾರ್ಯವಾಗಿ ಟಿಕೇಟ್ ಕ್ಯಾನ್ಸಲ್ ಮಾಡಿಕೊಳ್ಳುವಂತಾಗಿ ದುಡಿಮೆಯ ಹಣ ವ್ಯರ್ಥವಾಯಿತಲ್ಲ ಎಂದು ವಿಫಲಗೊಂಡ ತನ್ನ ಪೂರ್ವ ನಿಯೋಜಿತ ಯೋಜನೆಗೆ ತುಂಬಾ ತುಂಬಾ ನೋವು ಪಟ್ಟ.
ಏಪ್ರಿಲ್ 10, 1912 ರಂದು ಆ Luxury ಹಡಗು ಇಂಗ್ಲೆಂಡಿನಲ್ಲಿರುವ 'ಹ್ಯಾಂಪ್ ಶಾಯರ್' ನ 'ಸೌಥ್ ಹ್ಯಾಮ್ಟನ್' ಬಂದರಿನಿಂದ ಹೊರಡುವಾಗ ಕ್ಲಾರ್ಕ್ ನು ಬಂದರಿನಲ್ಲಿ ನಿಂತು ಬಿಕ್ಕಿ ಬಿಕ್ಕಿ ಮಗುವಂತೆ ಅತ್ತನು. ಆ ಹಡಗು ನಿರ್ಗಮಿಸಿದ ಕೇವಲ ಐದು ದಿನಗಳ ನಂತರ ಅಂದರೆ ಸೋಮವಾರ 15 ಏಪ್ರಿಲ್, 1912 ರಂದು ಬರಸಿಡಿಲಂತೆ ಸುದ್ದಿಯೊಂದು ಬಂದಿತು. ಆ ವಿಲಾಸಿ ಹಡಗು ಹಿಮ ಬಂಡೆಗೆ ಡಿಕ್ಕಿಹೊಡೆದು ಮುಳುಗಿ ಹೋಗಿತ್ತು. ಆ ಹಡಗೇ "ಟೈಟಾನಿಕ್".
ಈ ಸುದ್ದಿಯನ್ನು ಕೇಳಿದ ಕ್ಲಾರ್ಕ ಗೆ ದಿಗ್ಬ್ರಮೆಯಾಯಿತು. "ಎಲ್ಲಿ! ನನ್ನ ಮಗುವಿಗೆ ಕಚ್ಚಿದ ಆ ನಾಯಿ" ಎಂದು ಆನಂದಭಾಷ್ಪಗಳೊಂದಿಗೆ ಆ ನಾಯಿಗೆ ಮನದಲ್ಲೆ ನಮಸ್ಕಾರ ಹಾಕಿದ. ಅದು ಕಚ್ಚದಿದ್ದರೆ ತನ್ನ ಇಡೀ ಕುಟುಂಬ ಇಂದು ಇಲ್ಲವಾಗುತ್ತಿತ್ತಲ್ಲ. ತಾನು ಕುಟುಂಬ ಸಮೇತ ತೆರಳಲು ಆಗದಿದ್ದಕ್ಕೆ ಎಷ್ಟೊಂದು ವ್ಯಥೆ ಪಟ್ಟಿದ್ದೆ. ಜೀವಮಾನ ಉಳಿತಾಯ ಮಾಡಿದ ದುಡ್ಡು ನೀರಲ್ಲಿ ಹೋಯಿತಲ್ಲವೆಂದು ನೊಂದುಕೊಂಡಿದ್ದೆ. ಆದರೆ ಏನೇ ಆದರೂ ಅದು ಒಳಿತಿಗೆ ಎಂಬ ಸತ್ಯ ತಿಳಿಯಿತಲ್ಲವೆಂದುಕೊಂಡ. ತಾನೇ ಅದೃಷ್ಟವಂತ ಎಂದು ನಿಟ್ಪುಸಿರು ಬಿಡುತ್ತಾನೆ.
ಏನೇ ಆಗಲಿ ಬದುಕಲ್ಲಿ ಜರ್ಜರಿತರಾಗದಿರೋಣ. ಮುಂಬರುವ ಹೊಸ ಬದಲಾವಣೆಗೆ ಕಾದು ನೋಡೋಣ. ಬದುಕಲ್ಲಿ ಬಂದಿದ್ದನ್ನು ಭರವಸೆಯಿಂದ ಸ್ವೀಕರಿಸೋಣ. ಹೊಸತನದಿ ಕೆಲವು ನಿಲುವುಗಳನ್ನು ಬದಲಿಸಿಕೊಳ್ಳೋಣ.
Article By
ಡಾ. ರಾಜಶೇಖರ ನಾಗೂರ ✍🌹