ಪುತ್ತೂರು: ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಸಂಸ್ಥೆ  ಭಾರತ ಸೇವಾದಳ ಪುತ್ತೂರು ತಾಲೂಕು  ಸಮಿತಿಯ ಅಧ್ಯಕ್ಷರಾಗಿ ಈಗಾಗಲೇ ಕಳೆದ ಒಂದು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಅಧ್ಯಕ್ಷರಾಗಿ ಪೇಟೆಯಿಂದ ಗ್ರಾಮ ಗ್ರಾಮಕ್ಕೆ ಸಾಹಿತ್ಯ ಚಟುವಟಿಕೆಗಳನ್ನು ವಿಸ್ತರಿಸಿ ಸಮರ್ಥವಾಗಿ  ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ  ಪುತ್ತೂರು ಉಮೇಶ್ ನಾಯಕ್ ಅವರ ಕಾರ್ಯಕ್ಷಮತೆಯನ್ನು ಗುರುತಿಸಿ ಮುಂದಿನ 5 ವರ್ಷದ ಅವಧಿಗೆ ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಲಾಗಿದೆ.

ದಿನಾಂಕ 17-01-2023 ರಂದು ಭಾರತ ಸೇವಾದಳ  ದ ಕ ಜಿಲ್ಲಾ ಜಿಲ್ಲಾಧ್ಯಕ್ಷರಾದ ಎಸ್ ಬಿ ಜಯರಾಮ ರೈ ಬಳಜ್ಜ ಇವರ ಅಧ್ಯಕ್ಷತೆಯಲ್ಲಿ ಪುತ್ತೂರಿನ  ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ಪ್ರಧಾನ ಶಾಖೆಯ ಸಭಾಂಗಣದಲ್ಲಿ ನಡೆದ ಆಜೀವ ಸದಸ್ಯರ ಸಭೆಯಲ್ಲಿ  ಕೇಂದ್ರ ಭಾರತ ಸೇವಾದಳದ  ಸದಸ್ಯರಾದ ಬಶೀರ್ ಬೈಕಂಪಾಡಿ, ದ ಕ ಜಿಲ್ಲಾ ಕೋಶಾಧ್ಯಕ್ಷರಾದ  ಸದಾಶಿವ್ ಭಟ್ , ಜಿಲ್ಲಾ ಕಾರ್ಯದರ್ಶಿ ಟಿ ಕೆ ಸುಧೀರ್,ಸದಸ್ಯರಾದ ವಿಶ್ವೇಶ್ವರ ಭಟ್, ದಿನೇಶ್, ಚಂದ್ರಹಾಸ ರೈ, ಉದಯ್ ಕುಂದರ್, ಬಿ ಪ್ರಭಾಕರ್ ಶ್ರೀಯಾನ್, ಜಿಲ್ಲಾ ಸಂಘಟಕರಾದ  ಮಂಜೇಗೌಡ ಹಾಗೂ ಇನ್ನಿತರ ಸದಸ್ಯರ ಸಮ್ಮುಖದಲ್ಲಿ ಪುತ್ತೂರು ಉಮೇಶ್ ನಾಯಕ್ ಅವರನ್ನು  ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ  ಭಾರತ್  ಸೇವಾದಳದ ಸೇವಾ  ಚಟುವಟಿಕೆಗಳ ಕುರಿತು ಮಾಹಿತಿ ರವಾನೆಯಾಗಬೇಕು ಎಂಬ ಉದ್ದೇಶದಲ್ಲಿ  ಪದ ಸ್ವೀಕಾರ ಹಾಗೂ ಜಿಲ್ಲಾ ಭಾವೈಕ್ಯತಾ ರ್‍ಯಾಲಿಯನ್ನು ದಿನಾಂಕ 08-02-2023 ರಂದು  ಕೆಯ್ಯೂರಿನ ಸರಕಾರಿ ಕೆ.ಪಿ.ಎಸ್ ಶಾಲೆಯಲ್ಲಿ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದ ಉದ್ಘಾಟಕರಾಗಿ  ಮಾನ್ಯ ಶಾಸಕರಾದ ಸಂಜೀವ ಮಠoದೂರ್  ಹಾಗೂ ಇನ್ನಿತರ ಗಣ್ಯರು  ಭಾಗಿಯಾಗಲಿದ್ದಾರೆ. ಜಿಲ್ಲೆಯಿಂದ ಸುಮಾರು 2000 ಭಾರತ ಸೇವಾದಳದ  ವಿದ್ಯಾರ್ಥಿಗಳು ಭಾಗಿಯಾಗುವ ನಿರೀಕ್ಷೆ ಇದೆ.

ಭಾರತ ಸೇವಾದಳದ ಸಂಕ್ಷಿಪ್ತ ಇತಿಹಾಸ

ಭಾರತ ಸೇವಾದಳವು ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಅನುದಾನಿತ ಸಂಸ್ಥೆ ಯಾಗಿದೆ.

1923ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದೇಶದಂತೆ ಪದ್ಮಭೂಷಣ ಡಾ ನಾ ಸು ಹರ್ಡಿಕರ್ ಅವರಿಂದ ಈ ಸಂಸ್ಥೆ ಹಿಂದೂಸ್ತಾನಿ ಸೇವಾದಳ ಎಂಬ  ಹೆಸರಿನಲ್ಲಿ ಸ್ಥಾಪನೆಯಾಯಿತು. ಇದರ ಪ್ರಥಮ ಅಧ್ಯಕ್ಷರಾಗಿ ಪಂಡಿತ್ ಜವಾಹರಲಾಲ್ ನೆಹರು ಸೇವೆ ಸಲ್ಲಿಸಿದ್ದಾರೆ.

ಅಂದಿನ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ  ಶಿಸ್ತಿನ ಸ್ವಯಂಸೇವಕರು ಹಾಗೂ ಸತ್ಯಾಗ್ರಹಿಗಳನ್ನು ತಯಾರಿಸಿ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸೇವಾದಳ ಪ್ರಮುಖ ಪಾತ್ರ ವಹಿಸಿದೆ.

ಭಾರತ ಸ್ವಾತಂತ್ರ್ಯ ಪಡೆದ ನಂತರ ಕಾಂಗ್ರೆಸ್ ಸಂಸ್ಥೆಯು ಸಂಘಟಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಹಿಂದುಸ್ತಾನಿ ಸೇವಾದಳವನ್ನು ಕರ್ನಾಟಕದವರಾದ ಡಾ. ನಾಸು ಹರ್ಡಿಕರ್ ಅವರು 1950ರಲ್ಲಿ ಭಾರತ ಸೇವಾದಳ ಎಂಬ ಹೆಸರಿನಲ್ಲಿ  ಪಕ್ಷಾತೀತ ಸಂಸ್ಥೆಯಾಗಿ ಪರಿವರ್ತಿಸಿದರು.

ಅಂದಿನಿಂದ ಈ ಸಂಸ್ಥೆ ಮಕ್ಕಳು ಹಾಗೂ ಯುವಜನರಲ್ಲಿ ಗಾಂಧಿ ತತ್ವದ ಆಧಾರದಲ್ಲಿ ಶಿಸ್ತು ಹಾಗೂ ರಾಷ್ಟ್ರೀಯತೆಯನ್ನು ಬೆಳೆಸುವುದರಲ್ಲಿ ಕಾರ್ಯನಿರತವಾಗಿದೆ. ಸಾವಿರಾರು ಶಿಕ್ಷಣ ಶಿಬಿರ ಹಾಗೂ ಸೇವಾ ಶಿಬಿರ,  ಭಾವೈಕ್ಯತಾ  ರ್‍ಯಾಲಿ , ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿ ರಾಷ್ಟ್ರೀಯ  ಸಂಸ್ಥೆಯಾಗಿ  ಕರ್ನಾಟಕದಲ್ಲಿ  ಹೆಮ್ಮರವಾಗಿ ಬೆಳೆದಿದೆ.

ದೇಶದಲ್ಲಿ ಜಾತಿಯ ಉನ್ಮಾದ ತಲೆಯೆತ್ತಿದಾಗ ಶಿಸ್ತಿನ ಕೊರತೆಯಾದಾಗ ಹಾಗೂ ದೇಶಪ್ರೇಮ ಕಡಿಮೆಯಾದಾಗ ಮತ್ತು ದೇಶ ಯುದ್ಧಭೀತಿ ಇತ್ಯಾದಿ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾಗ ಸೇವಾದಳ ಯುವಜನತೆಯನ್ನು ಆಕರ್ಷಿಸಿ ಶಾಂತಿ ನೆಲೆಸಲು ಸಿಂಹ ಪಾಲು ಪಡೆದಿದೆ. 1950ರಲ್ಲಿ ಮೈಸೂರು ವಿಧಾನಸಭಾ ಅಧಿವೇಶನವು ಸೇವಾದಳದ ಪಾತ್ರವನ್ನು ಮುಕ್ತ ಕಂಠದಿಂದ ಪ್ರಶಂಸಿದೆ ಭಾರತ ಸೇವಾದಳವು ಶಿಕ್ಷಣ ಇಲಾಖೆಯ ಕ್ಷೇತ್ರ ಇಲಾಖೆಯಾಗಿದ್ದು ಅನೇಕ ಸಂಘ-ಸಂಸ್ಥೆಗಳೊಂದಿಗೆ ಸಂಯುಕ್ತ ಕಾರ್ಯಕ್ರಮಗಳನ್ನು ಸಹ ಕೈಗೊಳ್ಳುತ್ತಿದೆ.

 ಭಾರತ ಸೇವಾದಳದ  ಉದ್ದೇಶಗಳು

1)ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ತತ್ವ ಮತ್ತು ಕಾರ್ಯಕ್ರಮಗಳ ತಳಹದಿಯ ಮೇಲೆ ಯುವ ಜನತೆಯನ್ನು  ಸಂಘಟಿಸಿ ರಾಷ್ಟ್ರೀಯ ಸೇವೆಗಾಗಿ ತರಬೇತಿಯನ್ನು ನೀಡುವುದು

2) ಯುವ ಜನತೆಯನ್ನು  ಭಾರತದ ಆದರ್ಶ ನಾಗರಿಕರನ್ನಾಗಿ ಮಾಡಲು ಅವರಲ್ಲಿ ಸಂಯಮ ಧೈರ್ಯ ತ್ಯಾಗ ಸರಳತೆ ಸೇವೆ ತಾಳ್ಮೆ ಸಹಕಾರ ಮತ್ತು ಪೂರ್ಣಸೇವಾ ಮನೋಭಾವನೆಯನ್ನು ಮೂಡಿಸುವುದು

3)ಸೇವಾದಳ ಶಿಕ್ಷಣದ ಮೂಲಕ ಜನರ ಆರೋಗ್ಯ ಮತ್ತು ಶಾರೀರಿಕ ದೃಢತೆಯನ್ನು ಬಲಗೊಳಿಸುವುದು

4) ಜಾತಿಯ ಮತ್ತು ವರ್ಣಿಯ ಭಾವನೆಗಳನ್ನು ತ್ಯಜಿಸಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಸೇವೆ ಸಲ್ಲಿಸಿ ರಾಷ್ಟ್ರೀಯತೆಯನ್ನು ಹೆಚ್ಚಿಸುವುದು

5) ಆಪತ್ಕಾಲದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದು ಹಾಗೂ ಪ್ರಾಣಮಾನ ಮತ್ತು ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವ,ಶಾಂತಿ ಕಾಯ್ದುಕೊಳ್ಳುವ ಕೆಲಸ ನಿರ್ವಹಿಸುವುದು

6) ಉದ್ದೇಶಗಳ ಕಾರ್ಯಾನ್ವಯಕ್ಕಾಗಿ ಅಗತ್ಯವಾದ ಶೈಕ್ಷಣಿಕ, ಕೈಗಾರಿಕಾ, ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆಗಳನ್ನು ಸ್ಥಾಪಿಸುವುದು ಮತ್ತು ಇಂತಹ ಉದ್ದೇಶಗಳ ಹೊಂದಿರುವ ಇತರ ಸಂಸ್ಥೆಗಳ ಜೊತೆಗೆ ಸಮನ್ವಯ  ಹೊಂದುವುದು.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು

1)  ಎಸ್ ಬಿ ಜಯರಾಮ ರೈ, ಜಿಲ್ಲಾಧ್ಯಕ್ಷರು, ಭಾರತ ಸೇವಾದಳ, ದ ಕ ಜಿಲ್ಲಾ ಸಮಿತಿ

2)  ಸದಾಶಿವ ಭಟ್ , ಕೋಶಾಧ್ಯಕ್ಷರು, ಭಾರತ ಸೇವಾದಳ ದ ಕ ಜಿಲ್ಲಾ ಸಮಿತಿ

3) ಪುತ್ತೂರು ಉಮೇಶ್ ನಾಯಕ್,  ತಾಲೂಕು ಅಧ್ಯಕ್ಷರು, ಭಾರತ ಸೇವಾದಳ

4)  ಬಾಬು, ಮುಖ್ಯೋಪಾಧ್ಯಾಯರು , ಕೆಯ್ಯೂರು ಸರಕಾರಿ   ಕೆಪಿಎಸ್ ಶಾಲೆ 

5)  ವಿನೋದ್, ಉಪ ಪ್ರಾಂಶುಪಾಲರು ಕೆಯ್ಯೂರು ಸರಕಾರಿ   ಕೆಪಿಎಸ್ ಪ್ರೌಢಶಾಲೆ