ಮಂಗಳೂರು: ಅತ್ಯಂತ ಬಡ ಮತ್ತು ಮಧ್ಯಮ ವರ್ಗದವರು ಆರ್ಥಿಕ ಸಂಕಷ್ಟದಿಂದ ಸರಕಾರಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಅವರ ಜತೆಗಾರರಿಗೆ ಊಟದ ಖರ್ಚು ಮತ್ತಷ್ಟು ಹೊರೆ. ಇಂಥ ಸಂದರ್ಭದಲ್ಲಿ ಅವರಿಗೆ ನಿರಂತರ ಉಚಿತ ಊಟ ಕೊಡುತ್ತಿರುವ ಎಂಫ್ರೆಂಡ್ಸ್‍ನ ಕಾರ್ಯಕ್ರಮ ಅತ್ಯಂತ ಪುಣ್ಯದಾಯಕ. ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದು ಮೇಯರ್ ದಿವಾಕರ ಪಾಂಡೇಶ್ವರ ಹೇಳಿದರು.

ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಗಳ ಜತೆ ಇರುವವರಿಗೆ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‍ನಿಂದ ಉಚಿತ ಊಟ ನೀಡುವ ಕಾರುಣ್ಯ ಯೋಜನೆಗೆ ಪ್ರತಿವರ್ಷದಂತೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ನೀಡುವ ಒಂದು ತಿಂಗಳಿದ ಪ್ರಾಯೋಜಕತ್ವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಒಕ್ಕೂಟ ಪ್ರತಿವರ್ಷ ಹಲವಾರು ಸೇವಾ ಕಾರ್ಯಕ್ರಮ ಆಯೋಜಿಸುತ್ತಿದೆ. ಆ ಪೈಕಿ ಕಾರುಣ್ಯಕ್ಕೆ ನೆರವು ನೀಡುವುದು ವಿಶಿಷ್ಟ ವಾದುದು. ಜಾತಿ, ಧರ್ಮದ ಭೇದವಿಲ್ಲದೆ ಕ್ಲಪ್ತ ಸಮಯಕ್ಕೆ ಶಿಸ್ತಿನಿಂದ ಗುಣಮಟ್ಟದ ಆಹಾರ ನೀಡುತ್ತಿರುವುದು ಶ್ಲಾಘನೀಯ ಎಂದರು.

ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಬಂಟರ ಸಂಘದ ಉಪಾಧ್ಯಕ್ಷ ಮೋಹನ್ ಶೆಟ್ಟಿ, ಸಂದೇಶ್ ಶೆಟ್ಟಿ, ಕೊಲ್ಲಾಡಿ ಬಾಲಕೃಷ್ಣ ರೈ, ಎಂಫ್ರೆಂಡ್ಸ್‍ನ ಹಮೀದ್ ಅತ್ತೂರು, ಝುಬೇರ್, ಹಾರಿಸ್ ಕಾನತ್ತಡ್ಕ, ಅಹ್ಮದ್ ಇರ್ಶಾದ್ ತುಂಬೆ, ಮುಹಮ್ಮದ್ ಆರಿಫ್ ಪಡುಬಿದ್ರಿ, ಸಾಮಾಜಿಕ ಕಾರ್ಯಕರ್ತ ತೇಜ್‍ಪಾಲ್ ಸುವರ್ಣ ಬೋಳಾರ್ ಉಪಸ್ಥಿತರಿದ್ದರು.

ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.