ಉಡುಪಿ: ಕಲ್ಲ್ಯಾಣ್ಪುರ ಮಿಲಾಗ್ರಿಸ್ ಕಾಥೆಡ್ರಲ್‌ನಲ್ಲಿ ಸಕಲ ಸಂತರ ಮಹೋತ್ಸವದ ಅಂಗವಾಗಿ ಮಕ್ಕಳು ಹಾಗೂ ಯುವಜನರಿಗಾಗಿ ಸಂತರ ಅಲಂಕಾರ ಉಡುಗೆ ಸ್ಪರ್ಧೆ ಅತ್ಯಂತ ಉತ್ಸಾಹಭರಿತವಾಗಿ ಆಯೋಜಿಸಲಾಯಿತು. ಧಾರ್ಮಿಕ ಭಾವನೆ ಮತ್ತು ಸಾಂಸ್ಕೃತಿಕ ಪ್ರತಿಭೆ ಒಂದೇ ವೇದಿಕೆಯಲ್ಲಿ ಬೆರೆತ ಈ ಕಾರ್ಯಕ್ರಮವು ಚರ್ಚ್‌ನಲ್ಲಿ ಭಕ್ತಿಭಾವದ ವಾತಾವರಣವನ್ನು ನಿರ್ಮಿಸಿತು.

ಸಕಲ ಸಂತರ ಹಬ್ಬದ ಪ್ರಯುಕ್ತ ಚರ್ಚ್‌ನ 28 ಮಕ್ಕಳು ಹಾಗೂ ಯುವಜನರು ಭಾಗವಹಿಸಿ ತಾವು ಆಯ್ದ ಸಂತರ ಜೀವನದ ಪ್ರೇರಣಾದಾಯಕ ಘಟನೆಗಳು ಮತ್ತು ಧಾರ್ಮಿಕ ಸಂದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ವಿಭಿನ್ನ ಸಂತರ ಜೀವನಶೈಲಿ, ಅವರ ದೈವಭಕ್ತಿ ಮತ್ತು ತ್ಯಾಗದ ಮನೋಭಾವವನ್ನು ಪ್ರತಿಬಿಂಬಿಸುವ ಉಡುಪು ಹಾಗೂ ಅಲಂಕಾರ ಧರಿಸಿ ಮಕ್ಕಳು ಸಂತರಂತೆಯೇ ವೇಷಧಾರಣೆ ಮಾಡಿ ಅದ್ಭುತವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಗುರು ಮೊನ್ಸಿಞ್ಜೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡುತ್ತಾ, “ಸಂತರ ಜೀವನ ಹಾಗೂ ದೈವಭಕ್ತಿ ನಮ್ಮೆಲ್ಲರಿಗೂ ಮಾದರಿ. ಸಂತರ ಜೀವನದ ಮಾರ್ಗವನ್ನು ಅನುಸರಿಸುವ ಮೂಲಕ ನಾವೂ ಪವಿತ್ರತೆಯ ಹಾದಿಯಲ್ಲಿ ನಡೆಯಬೇಕು. ನಮ್ಮ ನಡೆ-ನುಡಿ ಮತ್ತು ವರ್ತನೆ ಸಂತರನ್ನೇ ಪ್ರತಿಬಿಂಬಿಸುವಂತಿರಲಿ,” ಎಂದು ಕರೆ ನೀಡಿದರು.

ಸಹಾಯಕ ಗುರು ರೆ. ಫಾ. ಪ್ರದೀಪ್ ಕಾರ್ಡೋಜ ಮಾತನಾಡುತ್ತಾ, “ನಾವೆಲ್ಲರೂ ಸಂತರಾಗಲು ಸಿದ್ಧರಾಗಬೇಕು. ಸಂತರಾಗಲು ನಮ್ಮ ಆಲೋಚನೆ, ಮಾತು ಮತ್ತು ಹೃದಯ ಶುದ್ಧವಾಗಿರಬೇಕು. ದೇವರ ಮಾರ್ಗದಲ್ಲಿ ನಡೆಯುವ ಪರಿಪೂರ್ಣ ಸಂತ ಜೀವನವನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಧಾರ್ಮಿಕ ಕರ್ತವ್ಯ,” ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ವಂ. ಗುರು ಸ್ಟೀವನ್ ಫರ್ನಾಂಡಿಸ್ ಮತ್ತು ವಂ. ಗುರು ಜೋಕಿಮ್ ಡಿಸೋಜ ತೀರ್ಪುಗಾರರಾಗಿ ಸೇವೆ ಸಲ್ಲಿಸಿದರು. ಅವರು ಮಕ್ಕಳು ತೋರಿಸಿದ ಪ್ರತಿಭೆ ಮತ್ತು ಭಕ್ತಿಭಾವವನ್ನು ಮೆಚ್ಚಿ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ 28 ಮಕ್ಕಳು ಹಾಗೂ ಯುವಜನರನ್ನು ಅಭಿನಂದಿಸಿ ಶುಭಾಶಯವನ್ನು ಕೋರಲಾಯಿತು.

ಕಾರ್ಯಕ್ರಮವನ್ನು ಯುವಜನ ಆಯೋಗದ ಸದಸ್ಯೆ ರೇಚೆಲ್ ಲುವಿಸ್ ಸೊಗಸಾಗಿ ನಿರೂಪಿಸಿದರು. ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಎವ್ಜಿನ್ ರೆಬೆಲ್ಲೊ, ಆಯೋಗ ಸಂಯೋಜಕಿ ಪ್ರೇಮ ಲುವಿಸ್, ಸುವಾರ್ತಾ ಪ್ರಸಾರ ಆಯೋಗದ ಸಚೇತಕಿ ಜ್ಯೋತಿ ಲುವಿಸ್ ಸರ್ವರನ್ನು ವಂದಿಸಿದರು. ಅನೇಕ ಪೋಷಕರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.