ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? 

ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು !?...ನನಗೆ ಸದಾ ಕಾಡುವ ಸಾಲುಗಳಿವು ಕುವೆಂಪು ಅವ್ರದ್ದು. ಕಾಲಕ್ಕೆ ಅನುಗುಣವಾಗಿ ಬದುಕಬೇಕು ನಿಜ. ಹಾಗೆ ಎಲ್ಲಾ ಕಾಲಕ್ಕೂ ಬದಲಾಗದ ಸ್ಥಿರವಾದ ಶಾಸ್ತ್ರವೊಂದಿದೆ. ಅದೇ ಮಾನವೀಯತೆ. ಅಸಲಿಗೆ ಮಾನವೀಯತೆ ಎಂದರೇನು ? ಸ್ವ ಖುಷಿಯ ಜೊತೆಗೆ, ನಮ್ಮ ಸುತ್ತಲಿರುವವರು ಮತ್ತೆ ಸುತ್ತಲಿರುವುದೆಲ್ಲವೂ ನಮ್ಮಂತಯೇ ಖುಷಿಯಾಗಿರಲಿ. ಇಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅದನ್ನು ಪ್ರತಿಯೊಬ್ಬರೂ ಒಪ್ಪಿಕೊಂಡು, ಅಪ್ಪಿಕೊಂಡು ಸಾಮರಸ್ಯತೆಯ ಜೀವನ ನಡೆಸಬೇಕು. ಶಾಸ್ತ್ರಗಳ ಸಾರವು ಇದೇ.! ಶಾಸ್ತ್ರ ಎಂದರೇನು ? ಇತರರಿಗೆ ತೊಂದರೆಯಾಗದಂತೆ ನೈತಿಕತೆಯ ಚೌಕಟ್ಟಿನೊಳಗೆ ಸಮಾಜದಲ್ಲಿ ಆಚರಿಸುವ ಸಂಪ್ರದಾಯಬದ್ದ ಆಚರಣೆಗಳು...ಅಲ್ಲವೇ ?

ಅವಕ್ಕೆಲ್ಲ ಮೂಢ ನಂಬಿಕೆ ಎಂಬ ಮಸಿ ಬಳಿದು ಮೂಲೆಗಟ್ಟಲು ಪ್ರಯತ್ನಿಸುತ್ತಿರುವ ದೊಡ್ಡ ಬುದ್ದಿಜೀವಿಗಳ ಗುಂಪೆ ಇದೆ. ಆದರೆ ಯಾವ ಯಾವ ಆಚರಣೆಗಳು ಎಷ್ಟು ಸತ್ಯ? ಮತ್ತು ಯಾಕೆ ಆಚರಿಸಬೇಕು ? ಈ ಆಚರಣೆಗಳನ್ನು ಮುನ್ನೆಲೆಗೆ ತರಲು ಕಾರಣಗಳೇನು ? ಇವುಗಳ ಹಿಂದಿರುವ ವಿಜ್ಞಾನವೇನು ? ಎಂದು ಯೋಚಿಸುವ ವ್ಯವಧಾನವನ್ನು ಕಳೆದುಕೊಂಡು, ಪರಕೀಯರು ಹೇಳುವುದೇ ಸತ್ಯ, ಅವರ ಆಧುನಿಕತೆಯ ಸಿದ್ಧಾಂತವೇ ಸರಿ ಎಂದು ನಂಬಿ, ಅವರೊಟ್ಟಿಗೆ ಕೈ ಜೋಡಿಸುವ, ಅವರ ಕುತಂತ್ರಗಳಿಗೆ ಒತ್ತು ಕೊಟ್ಟು, ನಮ್ಮೊಳಗಿದ್ದು ನಮ್ಮತನವನ್ನೇ ಕಳೆದುಕೊಳ್ಳುತ್ತಿರುವವರು ಹೆಚ್ಚುತ್ತಿರುವುದು ವಿಪರ್ಯಾಸ !!

Image Credit: The Daily Guardian

ಉದಾಹರಣೆಗೆ ದೇವರ ಮುಂದೆ ನಾವು ಹಚ್ಚಿಡುವ ದೀಪವನ್ನೇ ತೆಗೆದುಕೊಳ್ಳೋಣ. ದೀಪ ಹಚ್ಚುವುದು ದೇವರಿಗೆ ಬೆಳಕಾಗಲಿ ಎಂದಲ್ಲ. ನಮ್ಮೊಳಗಿನ ಅಂಧಕಾರವನ್ನು ತೊಳೆದುಕೊಳ್ಳಲು. ಬೆಳಕು ಜ್ಞಾನದ ಪ್ರತೀಕ. ಬೆಳಕಿನ ಸ್ವರೂಪವೇ ದೇವರು. ಎಲ್ಲವೂ ಅವನದ್ದೇ. ನಮಗೆ ಎಲ್ಲವನ್ನು ಕೊಡುವವನಿಗೆ, ನಾವು ಏನನ್ನು ಕೊಟ್ಟು ತೃಪ್ತಿ ಪಡಿಸಲು ಸಾಧ್ಯ ? ಮನದ ಶುದ್ಧ ಕೃತಜ್ಞತೆಯ ಹೊರತಾಗಿ?! ದೀಪ ಹಚ್ಚಿದರೆ ಮಾತ್ರ ನಿಮ್ಮ ದೇವರಿಗೆ ನೀವು ಕಾಣುವುದ ? ಎನ್ನುವವರನ್ನು ನಾವು ನೋಡಿದ್ದೇವೆ. ಆದರೆ ಆ ದೀಪ ಬೆಳಗುವ ಹಿಂದಿನ ಕಾರಣಗಳ ಅರಿವು ಎಷ್ಟು ಜನಕ್ಕಿದೆ ? ಅಥವಾ ಅದನ್ನು ತಿಳಿದುಕೊಳ್ಳುವ ಕುತೂಹಲ ಆದರೂ ಈಗಿನ ಎಷ್ಟು ಮಂದಿಗಿದೆ !? ಒಂದು ದೀಪ ಬೆಳಗಬೇಕಾದರೆ ಮೂಲಭೂತವಾಗಿ ಅದಕ್ಕೆ ಬತ್ತಿ, ತೈಲ, ಅಗ್ನಿ ಎಲ್ಲವೂ ಬೇಕು. ಕಣ ಕಣದಲ್ಲೂ ದೈವತ್ವವನ್ನು ಕಂಡುಕೊಂಡು ಆರಾಧಿಸುವ ಸಂಸ್ಕೃತಿ ನಮ್ಮದು.

ದೀಪದ ಬತ್ತಿಯೊಳಗೆ ಶೇಷ ದೇವರು, ತೈಲದೊಳಗೆ ಲಕ್ಷ್ಮಿ, ಉರಿಯುವುದು ಅಗ್ನಿದೇವ, ಆ ಪ್ರಕಾಶದೊಳಗೆ ವಾಯುದೇವ, ಪ್ರಣತಿಯೊಳಗೆ ಭೂದೇವಿ, ಬತ್ತಿಯ ತುದಿ ಕಪ್ಪಿನಲ್ಲಿ ರುದ್ರ, ಇಂತಹ ಇಡೀ ದೀಪದ ಅಭಿಮಾನಿ ದೇವತೆಯಾಗಿ ಇಂದ್ರ ದೇವ ಇರುತ್ತಾನೆಂದು ನಂಬಿಕೆ. ಇದೆಲ್ಲ ಗಮನದಲ್ಲಿದ್ದಾಗ ಮನದಲ್ಲಿ ಸ್ಪುರಿಸುವ ಭಾವೆವೆ ಭಕ್ತಿ. ಅದರ ಶುದ್ಧವಾದ ಸಮರ್ಪಣೆಯೆ ಆರಾಧನೆ. ಇನ್ನು ವೈಜ್ಞಾನಿಕ ಕಾರಣಕ್ಕೆ ಬರುವುದಾದರೆ, ದೀಪ ಹಚ್ಚುವುದರಿಂದ ನಮ್ಮ ಸುತ್ತ ಒಂದು ಸಾಕಾರಾತ್ಮಕ ಭಾವ ಅಥವಾ ವಾತಾವರಣ ಸೃಷ್ಟಿಯಾಗುತ್ತದೆ. ಆದರೆ, ಬೆಳಕಿಗಾಗಿ ನಾವು ಬೆಳಗಿಸುವ ಸಾಕಷ್ಟು ವೊಲ್ಟ್ಸ್ ಗಳ ಬಲ್ಬುಗಳು, ಅಥವಾ ಸಂಭ್ರಮಕ್ಕಾಗಿ ಸಿಡಿಸುವ ಪಟಾಕಿ, ಮದ್ದುಗಳಿಂದ ಪರಿಸರಕ್ಕೆ ಯಾವ ರೀತಿಯ ಉಪಯೋಗ ಆಗುತ್ತದೆ? ಉಪಯೋಗಕ್ಕಿಂತ ಹಾನಿಯೇ ಹೆಚ್ಚು ಅಲ್ಲವೇ ? ಇಂತಹ ಮುಂದಾಲೋಚನೆಯಿಂದಲೇ ನಮ್ಮ ಪುರಾತನರು ಸಣ್ಣ ಸಣ್ಣ ಆಚರಣೆಗಳಲ್ಲೇ ಸಂಭ್ರಮದ ಸ್ವಾದವನ್ನು ಆಸ್ವಾದಿಸುವಂತೆ ಮಾಡಲು, ಶಾಸ್ತ್ರಗಳ ಹೆಸರಿನಲ್ಲಿ ಕೆಲವು ರೀತಿ ನೀತಿಗಳನ್ನು ಮಾಡಿತ್ತರೇನೋ !!

ನಮ್ಮ ಕ್ಷಣದ ಸುಖಕ್ಕಾಗಿ, ಪರಿಸರದ ಶುದ್ಧತೆಯನ್ನು ಕದಡುವುದು ಆಧುನಿಕ ನೀತಿಯ ? ದೀಪದೊಂದು ಸಣ್ಣ ಉದಾಹರಣೆ ಅಷ್ಟೇ..! ಹೀಗೆ ತಿಳಿದುಕೊಳ್ಳುತ್ತಾ ಹೋಗುವುದಕ್ಕೇನು ಸಾಕಷ್ಟಿದೆ. ನಮಗೆ ಆಸಕ್ತಿ ಇಲ್ಲವಷ್ಟೇ! ನಮ್ಮ ಹಬ್ಬ ಆಚರಣೆಗಳು ಮಾನಸಿಕ ಆರೋಗ್ಯದ ಮೇಲು ಸಾಕಷ್ಟು ಪರಿಣಾಮ ಬೀರುವಂತವೇ ಆಗಿವೆ. ಅವುಗಳನ್ನು ಅರ್ತೈಸಿಕೊಂಡು ಪಾಲಿಸಿದಾಗ, ಪ್ರಕೃತಿಗು  ಕ್ಷೇಮ ಬದುಕಿಗು ಧನ್ಯತೆಯ ಭಾವ...ಎನ್ನುವುದು ನನ್ನ ಅಭಿಪ್ರಾಯ. ನೀವೇನಂತೀರಿ..?

-ಪಲ್ಲವಿ ಚೆನ್ನಬಸಪ್ಪ.