ಸಿರಿವಂತರಿಗೆ ವರವಾದ‌ ಸೆನ್ಸೆಕ್ಸ್ ಜಿಗಿತ ಹಾಗೂ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬರೆ ಎಳೆದ ಜಿಡಿಪಿ ಪಾತಾಳ ಕಂಡ 2020ರಲ್ಲಿ ಭಾರತದ ಜನಸಾಮಾನ್ಯರು‌ ಇಕ್ಕಡೆಯ ಒದೆ ತಿಂದು‌ ದಣಿದರು.

ಒಂದು ಕಡೆ‌ ಆಳುವ ಸರಕಾರಗಳು ಮತ್ತಿನ್ನೊಂದು ಕಡೆ ಕೋವಿಡ್ ‌19 ಭಾರತೀಯ ಜನಸಾಮಾನ್ಯರನ್ನು ಒದ್ದು‌ ಗತಿಗೆಡಿಸಿದವು. ಬಿಜೆಪಿ ಸರಕಾರವಂತೂ ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ಅನುಕೂಲ ಆಗುವಂತೆ ಕೊರೋನಾ ಕಾಲವನ್ನು ಬಳಸಿಕೊಂಡಿತು. ಜಿಡಿಪಿಯಲ್ಲಿ ಬಾಂಗ್ಲಾದೇಶದಂಥ ದೇಶಗಳೂ‌ ಭಾರತವನ್ನು ಹಿಂದಿಕ್ಕಿದವು.

ಚಿನ್ನದ ಬೆಲೆ ಆಕಾಶಕ್ಕೇರಿ, ಇತರ‌ ಬೆಲೆಗಳೂ ಏರಿ ವ್ಯಾಪಾರಿ ಗೆದ್ದರೆ  ಬಡವರು ಬಿದ್ದರು. ಭಾರತದಲ್ಲಿ ಮದುವೆ ಮತ್ತು ಚಿನ್ನಕ್ಕೆ ಸಂಬಂಧ ಇರುವುದರಿಂದ ಬಡವರ ಗೋಳು ಹೆಚ್ಚಿತು. ಬೆಲೆ ಏರಿಕೆಗಯ‌ ಲಾಭ ರೈತರಿಗೆ ದೊರೆಯದ್ದು 2020ರ ದೊಡ್ಡ ‌ದುರಂತ.

ಚಿತ್ರ ರಂಗದ‌ ಸ್ಟಾರ್ ನಟ ನಟಿಯರು ತೂಕಡಿಸಿ ತೂಕಡಿಸಿ‌ ಬೀಳದಿರು ತಮ್ಮ, ಹೊಸ ವರ್ಷದಲ್ಲಾದರೂ ಎದ್ದು ನಿಲ್ಲಮ್ಮ ಎಂದು ಗುನುಗುತ್ತ ಎನ್ನುವುದಕ್ಕಿಂತ ‌ಗೊಣಗುತ್ತಲಿದ್ದಾರೆ. ದಿನ ಪತ್ರಿಕೆಗಳು ಪುಟ ತಗ್ಗಿಸಿಕೊಂಡು   ಏದುಸಿರು ಬಿಟ್ಟರೆ ಸಣ್ಣ ಪತ್ರಿಕೆಗಳು ಬಂದೇ ‌ಬರುತಾವೆ ಕಾಲ ಎನ್ನುತ್ತ ಜಪ ನಡೆಸಿದ್ದಾರೆ. ಕೋವಿಡ್ ಆಸ್ಪತ್ರೆಗಳಿಗೆ, ಕೆಲವು ದಿಢೀರ್ ರೋಗ ತಡೆ ಮದ್ದು ತಯಾರಕರಿಗೆ ಹಣ ಸಂಪಾದನೆಯ ದಾರಿ ತೆರೆಯಿತು.

ಜಗತ್ತಿನಲ್ಲಿ ಕೂಡ ಕೊರೋನಾ ಆರ್ಥಿಕತೆಗೆ ಹೊಡೆತ ನೀಡಿತು ನಿಜ. ಆದರೆ ಭಾರತದಲ್ಲಿ ಮಾತ್ರ ಕೊರೋನಾ ಕಾಲದಲ್ಲಿ ಅತಿ ಶ್ರೀಮಂತರು ಮತ್ತಷ್ಟು ಗಂಟು ಮಾಡಿದರು, ಅದೇ‌ ವೇಳೆ ಭಾರತೀಯ ಜನಸಾಮಾನ್ಯರು ತತ್ತರಿಸಿದರು. ಭಾರತದಲ್ಲಿ ಕಡು ಬಡವರ ಸಂಖ್ಯೆ ಹೆಚ್ಚು ಆದುದನ್ಮು‌ ವಿಶ್ವ ಸಂಸ್ಥೆ ಖಚಿತ ಪಡಿಸಿತು.

ರಾಜಕಾರಣಿಗಳಿಗೆ, ಸರಕಾರಿ ನೌಕರರಿಗೆ ಕೊರೋನಾ ಬಾಧೆ ಏನೇನೂ ತಟ್ಟಲಿಲ್ಲ. ಎಂ ಎನ್ ಸಿ‌ ಕಂಪನಿಗಳ ನೌಕರರು ಕೂಡ ಬಹುತೇಕ ಏಟು ತಿನ್ನಲಿಲ್ಲ. ಇತರೆಲ್ಲ ಭಾರತೀಯರ‌ ಚೂರುಪಾರು ಉಳಿತಾಯ ಕೂಡ ಕರಗಿ ಹೋಯಿತು. ದೇಶದ ಮಟ್ಟದಲ್ಲಿ ರಾಜಕೀಯವಾಗಿ ಬಿಜೆಪಿ ಏಳಿಗೆ ಕಂಡಿತು. 2020ರ ಈ ಬೆಳವಣಿಗೆಯ ಹಿಂದೆ ಅಡ್ಡ ಹಾದಿಯೂ ಇದೆ ಎನ್ನುವುದು ಹಲವರ ಅನುಮಾನ. ಸಂವಿಧಾನ ಪರಿಗಣಿಸದೆ ಸುಗ್ರೀವಾಜ್ಞೆಗಳ ಮೂಲಕ, ರೈತರಿಗೆ, ಮಾಂಸಾಹಾರಿಗಳಿಗೆ,‌ ಬಡವರಿಗೆ ಬೆನ್ನೆಲುಬು ಇಲ್ಲದಂತೆ ಮಾಡುವ ಕೆಲಸ‌ ಆಳುವ ಜನ‌ ನಡೆಸಿದ್ದಾರೆ ಎಂಬ ‌ಆರೋಪ ಪೂರ್ಣ ಸುಳ್ಳು ಅಲ್ಲ.  

ಹೊಸ ವರ್ಷದ ಆಚರಣೆ ಎಂದರೆ ಬೆಂಗಳೂರಿನಲ್ಲಿ ಬ್ರಿಗೇಡ್ ರಸ್ತೆ, ಎಂ ಜಿ ರಸ್ತೆ ಉನ್ಮಾದ. ಹಲವು ನಗರದ ಸತ್ಯವೂ ಆಗಿದೆ. ಮಂಗಳೂರಿನಲ್ಲಿ ಹಿಂದೆ ಹಳೆ ವರುಷದ ಅಜ್ಜನನ್ನು ಮಾಡಿ ಸುಡುವುದನ್ನು ಕೆಲವರು ಹಿಂದೆ ಮಾಡುತ್ತಿದ್ದರು. ಅದರ ಹಿಂದಿನ ಅಮಾನವೀಯತೆ ಕಂಡು ಅದಕ್ಕೆ ತೆರೆ ಬಿದ್ದಿದೆ. ಈ ವರ್ಷ ಕೊರೋನಾ ಕಾರಣದಿಂದ ‌ಎಲ್ಲೂ ರಸ್ತೆ ಉನ್ಮಾದಗಳು‌ ಕಾಣಿಸಲಿಲ್ಲವಾದರೂ ಮುಚ್ಚಿದ ಬಾಗಿಲೊಳಗಿನ ಉನ್ಮಾದದ‌ ಆಚರಣೆಗಳು ಇದ್ದೇ ಇದ್ದವು.

2020 ಭಾರತೀಯರಿಗೆ ಇಬ್ಬಂದಿ ತಂದ ವರ್ಷ, 2021 ಭಾರತೀಯರಿಗೆ ಇಮ್ಮಡಿ ಒಳಿತು ತಂದೀತೆಂಬುದು ಆಶಯ. ಆ ಶುಭಾಶಯದ ಆಶ್ರಯದಲ್ಲಿ ಹೊಸ ಹೆಜ್ಜೆ ಇಡುವುದು ಬಿಟ್ಟು ಬೇರೆ ದಾರಿಯಂತೂ ಇಲ್ಲ. 


-By ಪೇಜಾ