ಇಂದು ಜಗತ್ತನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ‌ಭೂಬಿಸಿ. ಭೂಬಿಸಿ‌ ಹೀಗೆಯೇ ‌ಹೆಚ್ಚಿದಲ್ಲಿ ಮಂಗಳೂರು ಸಹಿತ‌ ಜಗತ್ತಿನ ಜನನಿಬಿಡ ಕರಾವಳಿಗಳು ಜಲಗತವಾಗುತ್ತವೆ.

ಹಿಂದೆಲ್ಲ ಪ್ರಕೃತಿ ಸಮತೋಲನದಲ್ಲಿ ಇತ್ತು. ಕಳೆದ ಅರ್ಧ ಶತಮಾನದಲ್ಲಿ ಮಾನವನು ಭೂಮಿಯ ನಿಸರ್ಗಕ್ಕೆ ಹಿಂದಿನ ಏಳು ಸಾವಿರ ವರುಷಗಳಲ್ಲಿ ಮಾಡದಷ್ಟು ಹಾನಿಯನ್ನು ಮಾಡಿದ್ದಾನೆ. ಅದಕ್ಕೆ ಮುಖ್ಯ ಕಾರಣ ವಾಹನಗಳ ಅತಿ ಬಳಕೆ. ಇದರಿಂದ ಕಾರ್ಬನ್ ಡೈಆಕ್ಸೈಡ್ ಯಥೇಚ್ಛವಾಗಿ ವಾತಾವರಣಕ್ಕೆ ಸೇರಿದೆ. ಹಿಂದೆ ಇವನ್ನೆಲ್ಲ ಹೀರಿ ದ್ಯುತಿ ಸಂಶ್ಲೇಷಣೆ ಕ್ರಿಯೆಯಿಂದ ಹಸಿರು ಆಮ್ಲಜನಕವನ್ನು ಭರಪೂರ ವಾತಾವರಣಕ್ಕೆ ಸೇರಿಸುತ್ತಿತ್ತು.

ಇಂತಹ ಹಾನಿಕಾರಕ ವಾಯುವನ್ನು ವಾತಾವರಣಕ್ಕೆ ಸೇರಿಸುವುದರ ಜೊತೆಗೆ ನಾವು ಈ ಅರ್ಧ ಶತಮಾನದಲ್ಲಿ ಹಸಿರನ್ನು ಇನ್ನಿಲ್ಲದಂತೆ ನಾಶ ಪಡಿಸಿರುವುದರಿಂದ ವಾತಾವರಣಕ್ಕೆ ಸೇರಿದ ಸಿಓ2, ಹಸಿರು ಮನೆ ದುಷ್ಪರಿಣಾಮದ ಅನಿಲಗಳ ಪ್ರಮಾಣ ವಾತಾವರಣದಲ್ಲಿ ಅಧಿಕರಿಸಿದೆ. ಇದು ಭೂಬಿಸಿಗೆ ಹೇತುವಾಗಿದೆ.

ಪೆಟ್ರೋಲಿಯಂ ಸುಡುವುದು ಕಡಿಮೆ ಮಾಡಲು ಬದಲಿ ಇಂಧನದತ್ತ ಪ್ರಯತ್ನ ಸಾಗಿದೆ. ಆದರೆ ಪ್ಯಾರಿಸ್ ಒಪ್ಪಂದವಾಗಲಿ, ವಿಶ್ವ ಸಂಸ್ಥೆಯ ವಾತಾವರಣ ಕಾಪಾಡುವ ಮಾಪನ ಆದೇಶವಾಗಲಿ ಸರಿಯಾಗಿ ಜಾರಿಯಾಗಿಲ್ಲ. ಇತ್ತೀಚೆಗೆ ಉತ್ತರಾಖಂಡದಲ್ಲಿ ಹಿಮನದಿ ಕರಗಿ, ಹಿಮಪಾತ ಉಂಟಾಗಿ ಕಟ್ಟುತ್ತಿದ್ದ ಒಂದು ವಿದ್ಯುತ್ ಉತ್ಪಾದನಾ ಕೇಂದ್ರ ಸಂಪೂರ್ಣ ನಾಶವಾಗಿದೆ. ಒಟ್ಟಾರೆ 70ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಹಲವು ನೂರು ಜನ ಗಾಯಗೊಂಡರು, ಇನ್ನೂ ಕೆಲವರು ನಾಪತ್ತೆಯಾದವರು ಪತ್ತೆಯಾಗಿಲ್ಲ.

ಲೋಕದೆಲ್ಲೆಡೆ‌ ಇಂಥ ಹವಾಮಾನ ವೈಪರೀತ್ಯದ ಅನಾಹುತಗಳು ಆಗುತ್ತಿವೆ. ಫೆಬ್ರವರಿಯಲ್ಲಿ ಮಾಲ್ಡೀವ್ಸ್ ಸುತ್ತ ಮಳೆಯಾದರೆ ಸರಿ, ಇಲ್ಲೆಲ್ಲ ಮಳೆ ಬಂದು ಹಾನಿ ಮಾಡಿದೆಯಲ್ಲ. ಓಜೋನ್ ಪದರ ಹರಿದಿದೆಯಲ್ಲ.

ನಗರಗಳಲ್ಲಿ ಪ್ಲಾಸ್ಟಿಕ್ ಕಸ ಸುಡಬೇಡಿ, ಅದು ಕೂಡ ಭೂಬಿಸಿ ಹೆಚ್ಚಿಸುತ್ತದೆ ಎಂದು ದಶಕದಿಂದ ಅದಕ್ಕೆ ಅವಕಾಶ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸವೂ ನಡೆದಿದೆ. ಆದರೆ ಅದು ಕೊನೆಗಂಡಿಲ್ಲ. ಕಸದ ಬಾಲಕ್ಕೆ ಕಿಚ್ಚು ಹಚ್ಚುವ ಜನ ಎಲ್ಲ ಕಡೆ ಇದ್ದಾರೆ. ನ್ಯಾಯಾಲಯದ ಈಚೆ, ಬಿಶಪ್ ಬೀಡಿನ ಆಚೆ‌ ತೋಡು ಕಣಿವೆಯಲ್ಲಿ ಕಸ ಸುಡುವುದು ಮೊನ್ನೆ ಕಂಡು ಬಂದಿತು. ಇನ್ನಾದರೂ ಎಚ್ಚರಿಕೆಯಿಂದ ಇದನ್ನೆಲ್ಲ ತಡೆಯದಿದ್ದರೆ ಕೊಡಿಯಾಲ ಬೈಲ್, ಜೆಪ್ಪು, ಮಾಲೆಮಾರ್, ನದಿ ಬದಿಯ ಹಲವು ಪ್ರದೇಶಗಳು ಮಂಗಳೂರಿನ ಮೀನುಗಾರಿಕೆಯ ವಲಯವಾಗಲಿದೆ.  


-By ಪೇಜಾ