ಜರ್ಮನಿಯಲ್ಲಿ ಮರೆತು ಹೋಗಿರುವ ಹೆಸರು ಕಿಟ್ಟೆಲ್ ಅವರದು, ಆದರೆ ಕರ್ನಾಟಕದಲ್ಲಿ ಅವರ ಹೆಸರು ಅಮರವಾಗಿದೆ. ಕನ್ನಡದಲ್ಲಿ ಮೊದಲ 70,000 ಶಬ್ದಗಳ ಶಬ್ದಕೋಶವನ್ನು ನೀಡಿದವರು ಕಿಟ್ಟೆಲ್. ಎಲ್ಲೊ ಹುಟ್ಟಿದ ಕಿಟ್ಟೆಲ್ ಕನ್ನಡ ಮಣ್ಣಿನ ಮಗನಾದುದು, ಕನ್ನಡ ತಾಯಿಯ ಮಡಿಲು ತುಂಬಿದ್ದು ವಿಶೇಷ.

ಜರ್ಮನಿಯ ಪೂರ್ವ ಪ್ರಶ್ಯಾದ ರೆಸ್ತರ್ ಹಾಫ್ ನಲ್ಲಿ ಗಾಟ್ ಪೀಲ್ಡ್ ಹೆಲೆನ್ ದಂಪತಿಯ ಐದು ‌ಮಕ್ಕಳಲ್ಲಿ ಕಿಟ್ಟೆಲ್ ಹಿರಿಯ ಮಗ. 1832ರ ಏಪ್ರಿಲ್ 8ರಂದು ಜನಿಸಿದ ಕಿಟ್ಟೆಲ್ 71 ವರುಷ ಬದುಕಿ, 1903ರ ಡಿಸೆಂಬರ್ 18ರಂದು ಟುಬಿಂಗನ್ ನಲ್ಲಿ ನಿಧನರಾದರು. ಅವರು ಬಹುತೇಕ ಭಾರತದಲ್ಲಿ ಬಾಳಿದರು, ಅದೂ ಕರ್ನಾಟಕದಲ್ಲಿ.

ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಅವರು ಹೀಬ್ರೂ, ಗ್ರೀಕ್, ಲ್ಯಾಟಿನ್, ಫ್ರೆಂಚ್, ಇಂಗ್ಲಿಷ್ ಭಾಷೆಯಲ್ಲಿ ಹಿಡಿತ ಸಾಧಿಸಿದ್ದರು. ಭಾರತಕ್ಕೆ ಬಂದ ಮೇಲೆ ಕನ್ನಡದ ಆದ್ಯ ಪುರುಷ ಆದುದಲ್ಲದೆ ತುಳು ಮೊದಲಾದ ಭಾಷೆಗಳಲ್ಲಿಯೂ ವ್ಯವಹರಿಸುವ ಸಾಮರ್ಥ್ಯ ಹೊಂದಿದ್ದರು. ತಂದೆಯ ಆಶಯದಂತೆ ಕಿಟ್ಟೆಲ್ ರವರು ಬಾಸೆಲ್ ಮಿಶನ್ ಸೇರಿದರು. 1853ರಲ್ಲಿ ಅವರು ಭಾರತಕ್ಕೆ ಬಂದರು. ಮೊದಲು ಅವರನ್ನು ನೀಲಗಿರಿಯ ಜನರಹಿತ ಸ್ಥಳದಲ್ಲಿ ನಿಯೋಜಿಸಲಾಯಿತು. ಕಿಟ್ಟೆಲ್ ಅವರಂಥ ತಜ್ಞರಿಗೆ ಅಲ್ಲಿ ಸೂಕ್ತ ಕೆಲಸ ಇಲ್ಲದ್ದರಿಂದ ಅವರನ್ನು ಮಂಗಳೂರು ಬಾಸೆಲ್ ಮಿಶನ್ ಗೆ ಹಾಕಲಾಯಿತು.

ಅವರು ಮಂಗಳೂರು, ಮಡಿಕೇರಿ, ಧಾರವಾಡಗಳಲ್ಲಿ ಬಾಸೆಲ್ ಮಿಶನ್ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಇಲ್ಲಿದ್ದ ಅವಧಿಯಲ್ಲಿ ಸಾವಿರಾರು ಲೇಖನಗಳನ್ನು ಅವರು ತಮ್ಮ ಪ್ರಕಟಣೆಗಳಿಗಾಗಿ ಬರೆದಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ತಿರುಗಿ ಅಧ್ಯಯನ ಮಾಡಿದ್ದಾರೆ. ಕನ್ನಡ ಶಬ್ದಕೋಶಕ್ಕಾಗಿ ನಿರಕ್ಷರಿಯಿಂದ ಪಂಡಿತವಕ್ಕಿಗಳವರೆಗೆ ಕಂಡು 24 ವರುಷಗಳ ಕಠಿಣ ದುಡಿಮೆಯಿಂದ ಈ ಶಬ್ದಕೋಶ ತಯಾರಿಸಿದ್ದಾರೆ. ಈ ಶಬ್ದಕೋಶ  ಪ್ರಕಟವಾದುದು 1894ರಲ್ಲಿ.

ಸಾಕಷ್ಟು ಹಣಕಾಸಿನ ತೊಂದರೆಯನ್ನೂ ಅನುಭವಿಸಿದ ಅವರು ಪ್ರಕಟಣೆಗಾಗಿ ನಡುವೆ ಜರ್ಮನಿಗೂ ಹೋಗಿ ಬಂದರು. ಪಾದ್ರಿಯಾಗಿದ್ದ ಅವರು ಕನ್ನಡದ ಸಂಶೋಧಕ ಲೇಖಕರಾಗಿ ಹೆಚ್ಚು ಖ್ಯಾತರು.

ಚಿತ್ರ ಶೀರ್ಷಿಕೆ: ಫರ್ಡಿನಾಂಡ್ ಕಿಟ್ಟೆಲ್ ಮಂಗಳೂರಿನಲ್ಲಿ ಇದ್ದಾಗ ವಾಸವಿದ್ದ ಬಾಸೆಲ್ ಮಿಶನ್ ಆವರಣದಲ್ಲಿ ಇರುವ ಮನೆ

1853ರಲ್ಲಿ ಅವರು ಕಥಾಮಾಲೆ ಎಂಬ ಜೀಸಸ್ ಕ್ರೈಸ್ಟ್ ಜೀವನ ಚರಿತ್ರೆ ಬಗೆಗಿನ ಕವನ ಸಂಕಲನ ಪ್ರಕಟಿಸಿದರು. ನಾಗವರ್ಮನ ಛಂದಸ್ಶಾಸ್ತ್ರವನ್ಮು ಅನುವಾದ ಮಾಡಿದರು. ಕನ್ನಡದ ವ್ಯಾಕರಣ ಪುಸ್ತಕವೊಂದನ್ನು ರಚಿಸಿದರು. ಏನೇ ಇದ್ದರೂ ಕಿಟ್ಟೆಲ್ ಅವರ ಅಮರ ಕಾವ್ಯ ಶಬ್ದಕೋಶ. ಕನ್ನಡದ ಅನಂತರದ ಎಲ್ಲ ನುಡಿಗೂಡುಗಳು ಕೂಡ ಅವರ ಶಬ್ದಕೋಶವನ್ನು ಇಟ್ಟುಕೊಂಡು ರಚನೆಯಾದವುಗಳು ಎಂಬುದರಲ್ಲೇ ಅದರ ಹೆಚ್ಚುಗಾರಿಕೆ ಕಾಣಿಸುತ್ತದೆ.

ಬೆಂಗಳೂರಿನಲ್ಲಿ ಕಿಟ್ಟೆಲ್ ಪ್ರತಿಮೆ, ಮಿನಿ ಪಾರ್ಕ್, ಕಿಟ್ಟೆಲ್ ನಗರ ಇತ್ಯಾದಿ ಇದೆ. ಧಾರವಾಡದಲ್ಲಿ ಕಿಟ್ಟೆಲ್ ರಸ್ತೆ ಇತ್ಯಾದಿ ಇದೆ, ಬಳ್ಳಾರಿಯಲ್ಲೂ ಅವರ ಹೆಸರುಳಿಸುವ ಕೆಲಸ ಆಗಿದೆ. ಆದರೆ ಮಂಗಳೂರಿನ ಯಾವುದೇ ರಸ್ತೆಗೆ ಅವರ ಹೆಸರು ಇಟ್ಟಿಲ್ಲದಿರುವುದು ಕೃತಘ್ನತೆಯೇ ಸರಿ. ಗೋರಿಗುಡ್ಡೆಯ ಬಾಸೆಲ್ ಮಿಶನ್ ಅವರದೇ ಶಾಲೆಗೆ ಕಿಟ್ಟೆಲ್ ಹೆಸರು ಇಡಲಾಗಿದೆ. ಆದರೆ ಇಲ್ಲಿನ ಆಡಳಿತ ಯಾವುದಕ್ಕಾದರೂ ಅವರ ಹೆಸರು ಇಡುವುದು ಇಲ್ಲಿನ ಆಡಳಿತ ತನ್ನನ್ನು ತಾನು ಗೌರವಿಸಿಕೊಳ್ಳುವ ಕಜ್ಜವಾಗುತ್ತದೆ.


-By ಪೇಜಾ