ಹಿಂದೆಲ್ಲಾ ಹಳ್ಳಿಗಳಲ್ಲಿ ಒಂದು ‌ಕಬ್ಬಿಣದ ಅಚ್ಚವ ಕೊಟ್ಯ‌ ಇದ್ದು ಹಳ್ಳಿಯ ಜನರ ಜೀವನಕ್ಕೆ ಅಗತ್ಯದ್ದನ್ನು ತಯಾರಿಸಿ ಕೊಟ್ಟು ಅವರು‌ ತಮ್ಮ ಬದುಕು ಸಾಗಿಸುತ್ತಿದ್ದರು.

ತುಳು ಪಾಡ್ದನಗಳು ಆಚಾರಿ ಕೆಲಸದವರನ್ನು‌ ಅಚ್ಚವ ಎಂದು ಹೇಳಿವೆ. ಇದು ಅಚ್ಚ ದ್ರಾವಿಡ, ಅಚ್ಚ ತುಳು ಸುಂದರ ಶಬ್ದ. ಯಾವುದೇ ಒಂದನ್ನು ಅಚ್ಚಿನಂತೆ ಮರು ಮೂಡಿಸುವವನೇ ಅಚ್ಚವ. ಮಂಗಳೂರಿನಲ್ಲಿ ಬಾಸೆಲ್ ಮಿಶನ್ ನವರು ಕನ್ನಡ ಮುದ್ರಣ ಮಾಡುವ ಸಮಯದಲ್ಲಿ ಅತ್ತಾವರದ ಆಚಾರಿ‌ ಇಲ್ಲವೇ ಅಚ್ಚವನಿಂದ ಅಕ್ಷರ ಮೂಡಿಸಿಕೊಂಡರು.

ತುಳು ಕಲ್ಕುಡ ಕಲ್ಲುರ್ಟಿ ಪಾಡ್ದನವು ಐದು ಬಗೆಯ ಅಚ್ಚವರನ್ನು ಹೇಳುತ್ತದೆ. ಮರದ ಅಚ್ಚವ, ಕಬ್ಬಿಣದ ಅಚ್ಚವ, ಚಿನ್ನದ ಅಚ್ಚವ, ಚೆಂಬು ಅಚ್ಚವ ಮತ್ತು ಕಲ್ಲು ಅಚ್ಚವ ಕಲ್ಕುಡ. ಇವರ ಆಯಾ ಐದು ಕೆಲಸದ ಕಾರಣ ಗಾಯತ್ರಿಗೆ ಐದು ಮುಖ, ಸೃಷ್ಟಿಸುವ ಇವರಂತೆಯೇ‌ ಸೃಷ್ಟಿಕರ್ತ ಬ್ರಹ್ಮನಿಗೂ ಮೂಲದವರು ಐದು ಮುಖ.

ಕಬ್ಬಿಣದ ಕೆಲಸದವರು ಕತ್ತಿ, ಕೊಡಲಿ, ನೊಗ ನಾಲಿಗೆ, ಬಾಳ್, ಗುದ್ದುಗ ಎಂದು ಜನ ಬಯಸುವ ಎಲ್ಲ ಬಗೆಯ ಕಬ್ಬಿಣದ ವಸ್ತುಗಳನ್ನು ತಯಾರಿಸಿ ಕೊಡುತ್ತಿದ್ದರು. ಯಾಂತ್ರಿಕ ಕಬ್ಬಿಣದ ವಸ್ತುಗಳು ಹೆಚ್ಚಾಗಿ ಬರತೊಡಗಿದ ಮೇಲೆ ‌ಕರ್ಬೊಟ್ಟಿ ಅಚ್ಚವರ ಸಂಖ್ಯೆ ಕಡಿಮೆ ಆಯಿತು. ಆದರೂ ಅಲ್ಲಲ್ಲಿ ಆ ವೃತ್ತಿ ಮಾಡುತ್ತಲಿದ್ದಾರೆ. ಈಗ ನಗರ ಪ್ರದೇಶಗಳಲ್ಲಿ ಉತ್ತರ ಭಾರತದಿಂದ ಬಂದ ದೊಡ್ಡ ದೊಡ್ಡ ಕತ್ತಿ ಮಾರುವ ಸಿಖ್ ಧರ್ಮದವರನ್ನು ನೋಡಬಹುದು. ಅದರ ನಡುವೆ ಊರ ಅಚ್ಚವರೂ ತಮ್ಮ ಕೈಚಳಕ ತೋರಿಸುತ್ತಾರೆ. ಕಾರ್ಕಳ ಬೈಲೂರಿನ ಅಚ್ಚವ ಕುಟುಂಬವೊಂದು ಹೀಗೆ ನಾನಾ ಬಗೆಯ ಕತ್ತಿ ಸಮೇತ ಮೇಳಗಳಲ್ಲಿ ಮಾರಾಟ ನಡೆಸುತ್ತದೆ. ಮಂಗಳೂರಿನ ಸಭೆಯೊಂದರಲ್ಲಿ ಆ ಅಚ್ಚವ ಮಾರಾಟ ಹೀಗೆ ಕಂಡು ಬಂದಿತು.


-By ಪೇಜಾ