ಪ್ರಕೃತಿಯಲ್ಲಿ ಇರುವ ಎಲ್ಲವನ್ನೂ ನಾಶ ಮಾಡುತ್ತಿರುವ ನಾವು ಮರಗಳನ್ನು ಮಾತ್ರ ಮರು ಬೆಳೆಯುವ ಪ್ರಯತ್ನ ನಡೆಸಿದ್ದೇವೆ; ಆದರೆ ಪೂರ್ಣ ಯಶಸ್ಸು ಸಾಧ್ಯವಾಗಿಲ್ಲ. 

ಅಮೆಜಾನ್‌ ಕಾಡಿನಿಂದ ಹಿಡಿದು ಆಫ್ರಿಕಾ ಸಹಿತ ಬೋರ್ನಿಯೋವರೆಗೆ ಉಷ್ಣವಲಯದ ಕಾಡುಗಳನ್ನು 50 ಶೇಕಡಾದಷ್ಟನ್ನು ಕಳೆದ ಎರಡು ಶತಮಾನದಲ್ಲಿ ಇಲ್ಲವಾಗಿಸಿದ್ದೇವೆ. ಕಳೆದ 50 ವರುಷಗಳಿಂದ ಎಚ್ಚರಗೊಂಡು ಕಾಡು ಮರು ಬೆಳೆಸುವ ಕೆಲಸ ಆರಂಭಿಸಿದ್ದೇವೆ. ಪೂರ್ಣ ಯಶಸ್ಸು ಕಾಣಲು ಸಾಧ್ಯವಾಗದಿದ್ದರೂ ಕಳೆದ ‌ಮೂರು ದಶಕದಲ್ಲಿ ಆಗ ಇದ್ದದ್ದಕ್ಕಿಂತ 10 ಶೇಕಡಾದಷ್ಟು ಹಸಿರು ಉಕ್ಕಿಸುವಲ್ಲಿ ಗೆದ್ದಿದ್ದೇವೆ.

1800ರ ಸುತ್ತಿನ ಕಾಡು ನಾವು ಇನ್ನು ನೋಡಲಾಗದು. ಅಲ್ಲದೆ ಆಗ ಇದ್ದ ಸಾವಿರಾರು ವರ್ಷಗಳ ‌ಭೀಮ ಗಾತ್ರದ ಮರಗಳನ್ನು ಪಡೆಯಲಾಗದು. ಆದರೆ 1975ರೀಚಿಗೆ ತುಸು ಹಸಿರು ಚೇತರಿಕೆ ಸಾಧ್ಯವಾಗಿದೆ. ಆದರೆ ಪ್ರಾಕೃತಿಕ ಕಾಡು ಸಾಧ್ಯವಿಲ್ಲ. ಅವೆಲ್ಲ ನೆಡು ತೋಪುಗಳು ಅಷ್ಟೆ.

ನಗರಗಳಲ್ಲಿ ಕೂಡ ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಗಲ ಮಾಡುವುದು, ಕಟ್ಟಡ ನಿರ್ಮಾಣ ಎಂದು ಮರಗಳನ್ನು ನಿರ್ನಾಮ ಮಾಡಲಾಗಿದೆ. ಅದರ ಬದಲು ಒಂದಷ್ಟು ನೆಡುವ ಪ್ರಯತ್ನ ನಡೆದಿದೆ. ಯಶಸ್ಸು ಮಾತ್ರ ಅಲ್ಪ. ಮಂಗಳೂರು ಕೂಡ ಅದಕ್ಕೆ ಹೊರತಲ್ಲ. 

ನಗರಗಳಲ್ಲಿ ನೆಡುವ ಸಸಿಗಳಿಗೆ ಬೀದಿ ದನಗಳ ಕಾಟ ಅಧಿಕ. ಕಿತ್ತೆಸೆಯುವ ತಂಟೆಕೋರರ ಕಾಟವೂ ಹೆಚ್ಚು. ಇವನ್ನೆಲ್ಲ ದಾಟಿ ನೆಟ್ಟವುಗಳಲ್ಲಿ  35% ದಷ್ಟು ಉಳಿದರೆ ಅದೇ ಹೆಚ್ಚು. ಅದು ಕೈಯಡಕ ಬೆಳೆಯುವಾಗ ಮೆಲ್ಲಗೆ ಕತ್ತರಿಸಿ ಒಯ್ಯುವವರೂ ಅಧಿಕ. ಅದನ್ನೂ ಮೀರಿ ಉಳಿದರೆ ಅಚ್ಚರಿ.

ಇನ್ನು ಕೆಲವು ಮಳಿಗೆಗಳ ಎದುರಿನ ಮರಗಳನ್ನು ಬೇರಿಗೆ ಆಸಿಡ್ ತುಂಬಿ ಕೊಲ್ಲುವರು ಎಂಬ ಮಾತಿದೆ. ಅದರಲ್ಲಿ ಸತ್ಯ ಇರಬಹುದು. ಆದರೆ ಆರ್ಯ ಸಮಾಜದ ಬಳಿ ಅಂಥ ಯಾವ ಕಾರಣವೂ ಕಾಣದೆ ಈ ಮರವು ಇಷ್ಟು ಬೆಳೆದು ಹೇಗೆ ಒಣಗಿ ಸತ್ತು ಹೋಯಿತು ಎಂಬುದು ಯಕ್ಷ ಪ್ರಶ್ನೆ.

ಇದು ಸಮಶೀತೋಷ್ಣ ವಲಯದ ಸೂಜಿಮೊನೆ ಎಲೆ ಜಾತಿಯ ಮರ. ಕ್ರಿಸ್ಮಸ್ ಮರಕ್ಕೂ ಇದು ಮುಮ್ಮಾದರಿ. ಈಗ ಇಡೀ ಮರವೇ ಸತ್ತು ಒಣಗಿದೆ. ಈ ಸಾವು ನ್ಯಾಯವೇ? 


-By ಪೇಜಾ