ಉಡುಪಿಯಲ್ಲಿ ಹಲವು ಕೆರೆ ಕಟ್ಟೆಗಳಿದ್ದು ಈಗ ನಾಯರ್ ಕೆರೆ ಎಂದು ಅಪಭ್ರಂಶ ಕಂಡಿರುವ ಕೆರೆಯೂ ಅವುಗಳಲ್ಲಿ ಒಂದು.

ಉದ್ಯಾವರವು ರಾಜಧಾನಿ ಆಗಿದ್ದಾಗ ಹಾಗೂ ಬಾರಕೂರು ರಾಜಧಾನಿ ಆದಾಗಲೂ ನಡು ರಾಜಧಾನಿ ‌ಕಲ್ಯಾಣಪುರವನ್ನು‌ ಸಂಪರ್ಕಿಸಲು ಉದ್ಯಾವರ ಕಡೆಯಿಂದ ರಸ್ತೆ ಇದ್ದುದು ಕಿನ್ನಿಮೂಲ್ಕಿ ಮೂಲಕ. ಆ ರಸ್ತೆ ಇತರ ಮುಖ್ಯ ರಸ್ತೆಗಳಿಂದಾಗಿ ಇಂದು ಮೂಲೆಗೆ ಬಿದ್ದಿದೆ. ಆದರೆ ಬ್ರಹ್ಮ ಗಿರಿಯಿಂದ ಉದ್ಯಾವರ ಕುತ್ಪಾಡಿ‌ ಸಂಪರ್ಕ ರಸ್ತೆಯವರೆಗೆ ನಡೆದರೆ ಪುರಾತನವಾದ ಕೆಲವು ದೊಡ್ಡ ಮರಗಳು ಇಂದಿಗೂ ಉಳಿದಿರುವುದನ್ನು ಗಮನಿಸಬಹುದು.

ಬ್ರಹ್ಮಗಿರಿಯ ಉಲ್ಲೇಖವು ಉದ್ಯಾವರ ಶಂಬುಕಲ್ಲು ಶಾಸನಗಳಲ್ಲಿ ಇದೆ. ಅದು ಎಂಟನೆಯ ಶತಮಾನಕ್ಕೆ ಸೇರಿದ ಶಾಸನವಾಗಿದೆ. ಉಡುಪಿಗಿಂತ ಶಿವಳ್ಳಿಯ ಉಲ್ಲೇಖ ಕೂಡ ಶಾಸನಗಳಲ್ಲಿ ಬರುತ್ತದೆ.

 ಮೂಲ ಉಡುಪಿ ಆದಿ ಉಡುಪಿ ಆಗಿದ್ದು ಅದು ಮಲಪು (ಮಲ್ಪೆ)ಗೆ ಹೋಗುವ ರಸ್ತೆಯಲ್ಲಿ  ಇದೆ. ಒಡಿ ಉಪ್ಪು ಎಂಬ ತುಳು ಬದು ಗದ್ದೆಗಳಿಂದ ನಿಷ್ಪತ್ತಿ ಆದುದು ಈ ಒಡಿಪು. ಅದನ್ನೇ ಕತೆ ಕಟ್ಟಿ ಉಡುಪಿ ಮಾಡಲಾಗಿದೆ. ಬ್ರಿಟಿಷರ ‌ಕಾಲದಲ್ಲಿ ಇಂಗ್ಲೀಷ್‌ನಲ್ಲಿ ಕೂಡ udipi ಎಂದು ಇತ್ತು; ಅದನ್ನು ಬರೇ ಮೂರು ದಶಕಗಳ ಹಿಂದೆ udupi ಮಾಡಲಾಗಿದೆ. ಆದಿ ಉಡುಪಿ ಮತ್ತು ಶಿವಳ್ಳಿಗಳ ನಡು ವಠಾರ ಅನಂತರದ ಒಡಿಪು ಪೇಟೆ. 

ಅರಸರ ಕಾಲದ ಬ್ರಹ್ಮಗಿರಿ ಕೆರೆಯ ಇತಿಹಾಸ ಕಾಲದಲ್ಲಿ ಕಳೆದುಹೋಗಿದೆ. ಆಳುಪರ ಕಾಲದ ಕೆರೆಯನ್ನು ಕಲ್ಯಾಣಿ ಆಗಿಸಿದವರು ಕೆಳದಿ ಅರಸರು ಎನ್ನಲಾಗುತ್ತದೆ. ಮುಂದೆ ಇಲ್ಲಿನ ಬೆಟ್ಟು ಗದ್ದೆಗಳು ಕಾರ್ನ್ ವಾಲೀಸ್ ಪಟ್ಟ ಬಂದ ಮೇಲೆ ನಾಯರ್ ಎನ್ನುವವರಿಗೆ ಆಗಿದೆ. 

ಆದ್ದರಿಂದ ಆ ಪ್ರದೇಶವನ್ನು ನಾಯರ್ ಬೆಟ್ಟು ಎನ್ನತೊಡಗಿದ್ದು ಶತಮಾನದ ಈಚೆಗೆ. ಈ ಕೆರೆ ಅಲ್ಲಿ ಇದ್ದುದರಿಂದ ಇದನ್ನು ನಾಯರ್ ಬೆಟ್ಟು ಕೆರೆ ಎನ್ನತೊಡಗಿದರು.ಬೆಟ್ಟು ಗದ್ದೆಗಳೆಲ್ಲ ಮನೆಗಳಾದವು. ಕೆರೆಯ ಹೆಸರು ಬೆಟ್ಟು ಹೋಗಿ ನಾಯರ್ ಕೆರೆ ಎಂದಾಯಿತು. ಹಾಗಾಗಿ ಇದು ನಾಯರ್ ಒಬ್ಬರ ಕೆರೆ ಎಂದು ತಪ್ಪು ತಿಳಿದವರು ಬಹಳ ಜನ ಇದ್ದಾರೆ. ಇತಿಹಾಸ ಆಳಕ್ಕೆ ಬೀಳುವುದು ಹೀಗೆ. 

ಇಂದು ಈ ಕೆರೆ ಬಳಕೆಯಲ್ಲಿ ಇಲ್ಲ. ಕೆರೆ ಬದಿ ನಾಗರಿಕರ ವಿಹಾರ ತಾಣವಾಗಿದೆ. ಕೆರೆ ಮಳೆಗಾಲದಲ್ಲಿ ಒಂದೆರಡು ಬಾರಿ ಹೆಣ ಉಂಡದ್ದೂ ಇದೆ.


-By ಪೇಜಾ