ಇವರು ಇಷ್ಟು ದುಡಿದರೂ ಮಂಗಳೂರು ಸಹಿತ ನಗರಗಳ ಕಸ ಕೊಳೆಗಳು ಬೆಳೆದು ಉಳಿಯುತ್ತದೆ. ಅವರಿಲ್ಲದಿದ್ದಲ್ಲಿ ಈ ನಗರದ ಗಬ್ಬು ನಾರುವಿಕೆ ಊಹಿಸಿಕೊಳ್ಳಿ.

ನೀವು ಅಷ್ಟೆಲ್ಲ ಊಹಿಸುವ ಕಷ್ಟ ತೆಗೆದುಕೊಳ್ಳುವುದಿಲ್ಲ. ಇನ್ನು ಇವರ ಕೊಳಕಲ್ಲೇ ಕಳೆದುಹೋಗುವ ಬದುಕನ್ನು ಎಲ್ಲಿ ಗಮನಿಸುತ್ತೀರಿ? ಮಲದ ಗುಂಡಿ, ಒಳ ಚರಂಡಿ, ಚರಂಡಿ ಬಾವಿ, ಗಟಾರ, ನಿಮ್ಮ ವಠಾರ, ಕಸದ ತೊಟ್ಟಿ, ನಿಮ್ಮ ಕಸದ ಬುಟ್ಟಿ ಎಂದು ಎಲ್ಲ ಕಡೆ ನಮ್ಮೆಲ್ಲರ ಹೊಲಸನ್ನು ಬಾಚಿ ಹೇಗೋ ಊಟ ಕಾಣುವವರು ಇವರು.

ಇವರ ದುಡಿಮೆ ಬೆಲೆ ಕಟ್ಟಲಾಗದುದು. ಆದರೆ ಕಸ‌ ಸುರಿಯುವ ನಾಗರಿಕರಿಗೆ ಇವರೆಂದರೆ ಉಪೇಕ್ಷೆ. ನಮ್ಮ ಕಸ ನಮ್ಮ ಕಸ ಎನ್ನುತ್ತಾರೆಯೇ ಹೊರತು ಪಾಪ ನಿಮ್ಮ ಕೆಲಸ ಎಂದು ಎಂದೂ ಕನಿಕರಿಸುವುದಿಲ್ಲ.

ಕೈಯಿಂದಲೇ ಮಲ ಬಾಚುವ ಕಾಲ ಹೋಗಿದೆ ಎನ್ನುವುದನ್ನು ಬಿಟ್ಟರೆ ಇವರ ಬದುಕು ಉದ್ಧಾರ ಆಗುವ ಬದಲು‌ ಇಳಿಜಾರಿನಲ್ಲಿ ಸಾಗಿದೆ. ಹಿಂದೆಲ್ಲಾ ಮುನಿಸಿಪಾಲಿಟಿಗಳು, ರೈಲ್ವೆ ಎಂದು ಕೆಲವರಿಗಾದರೂ ಕಾಯಂ ಕೆಲಸ ಇವರಿಗೆ ಸಿಗುತ್ತಿತ್ತು. ಆದರೆ ಅಲ್ಲೆಲ್ಲ ಈಗ ಗುತ್ತಿಗೆ ನೀಡುತ್ತಿರುವುದರಿಂದ ಇವರ ಮತ್ತೆ ಸವಲತ್ತುಗಳು ಇಲ್ಲದ ಕೂಲಿ ಕಾರ್ಮಿಕರಾಗಿದ್ದಾರೆ. 

ಹೊಲಸು ಜಾರಿಸಿ ಜಾರಿಕೊಳ್ಳುವವರು ನಾವು. ಹೊಲಸಲ್ಲಿ ಈಜಾಡುವ ಕರ್ಮಕ್ಕೆ ಬಿದ್ದರೂ ಬದುಕಿನ ಭದ್ರತೆ ಪಡೆಯಲು ಸಾಧ್ಯವಾಗದವರು ಇವರು.

ಮುನಿಸಿಪಾಲಿಟಿ, ರೈಲ್ವೆ ಗುತ್ತಿಗೆ ಕೊಟ್ಟು ಕೈ ತೊಳೆದುಕೊಂಡಿದೆ. ಗುತ್ತಿಗೆದಾರರು ಕೈಗೆ ಗವುಸು ಒಂದಷ್ಟು ಆಧುನಿಕ ಪರಿಕರ ಒದಗಿಸುವುದು ಬಿಟ್ಟರೆ ಇತರ ಮೂಲಭೂತ ಸೌಕರ್ಯ ಒದಗಿಸುವುದಿಲ್ಲ. ಸಂಬಳ ಕಡಿಮೆ, ಸಹಿ ಹಾಕಿದ ಸಂಬಳದಲ್ಲಿ ಮೇಲ್ವಿಚಾರಕನಿಗೆ ಪಾಲು ಕೊಡದಿದ್ದರೆ ಇವರ ಕೆಲಸಕ್ಕೆ ಕುತ್ತು ಬರುತ್ತದೆ.

ಇತರ‌ ಇಎಸ್ ಐ, ವಿಮೆ, ಸರ್ವಿಸ್‌, ಬೋನಸ್, ಸಾರ್ವಜನಿಕ ರಜೆ ಯಾವುದನ್ನೂ ಗುತ್ತಿಗೆದಾರರು ಇವರಿಗೆ ಕೊಡುವುದಿಲ್ಲ. ದುಡಿಮೆಗೆ ದಿನಗೂಲಿ ಕೊಟ್ಟಂತೆ ಮಾಡಿ ಕಳಚಿಕೊಳ್ಳುತ್ತಾರೆ.

ಇದರಲ್ಲಿ ಮೀಸಲಾತಿಯ ಮರ್ಜಿ ಕಾಯದೆ ಎಲ್ಲ ಕೆಲಸವೂ ದಲಿತರಿಗೇ ದೊರೆಯುತ್ತದೆ ಎಂದರೆ ಮೇಲ್ಜಾತಿಯ ಜನರ ಕಸ ಮನೋಭಾವವನ್ನು ಅರಿತುಕೊಳ್ಳಬಹುದು. ಹಿಂದೆ ತುಳು ಪ್ರದೇಶದಲ್ಲಿ ಕೊರಗ, ಮನ್ಸ ಇವರೇ ಈ ಕೆಲಸ ಮಾಡುತ್ತಿದ್ದರು. ಇಂದು ಉತ್ತರ ಕರ್ನಾಟಕದ ಜನ ಬಂದು ಸೇರಿಕೊಂಡಿದ್ದಾರೆ. ಅದರಲ್ಲೂ ಲಂಬಾಣಿ ಮಂದಿ ಮಂಗಳೂರಿನಲ್ಲಿ ಗುತ್ತಿಗೆ ನೌಕರರಾಗಿ ಸಾಕಷ್ಟು ಜನ ದುಡಿಯುತ್ತಿದ್ದಾರೆ. ಸವಲತ್ತು ಅವರಿಗೆ ಕನಸಿನಲ್ಲಿ ಮಾತ್ರ ಲಭ್ಯ. 


-By ಪೇಜಾ