ಚಿತ್ರ ಓಡು ಚಿತ್ರವಾಗಿ, ಅದು ಮಾತಾಡತೊಡಗಿದ ಎಷ್ಟೋ ವರುಷಗಳ ಮೇಲೆ ಆ ಮೂವೀಗಳು ತುಳುವಿನಲ್ಲೂ ಮಾತನಾಡತೊಡಗಿದವು. ಅದಕ್ಕೀಗ ಬಂಗಾರದ ಪರ್ಬ.

125 ವರುಷಗಳ ಹಿಂದೆ ಲುಮಿನರ್ ಸಹೋದರರು ಓಡುವ ಕುದುರೆಯನ್ನು ನೆರಳು ಬೆಳಕಿನಲ್ಲಿ ತೋರಿಸಿದಾಗ ಜನ ಕಣ್ಕಣ್ಣು ಬಿಟ್ಟರು. ಅವರು ತಮ್ಮ ಕಿರುಚಿತ್ರಗಳ ಕಟ್ಟಿನೊಡನೆ  115 ವರುಷಗಳ ಹಿಂದೆ ಮುಂಬಯಿಗೆ ಬಂದು ಭಾರತಕ್ಕೆ ‌ಚಲನಚಿತ್ರದ ಹುಚ್ಚು ಹಿಡಿಸಿದರು. ಜಗತ್ತಿನಲ್ಲಿಯೇ ಅತಿ ಹೆಚ್ಚು ಭಾಷೆಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಚಿತ್ರ ತಯಾರಿಸುವ ದೇಶವಾಗಿ ಬೆಳೆದಿದೆ ಭಾರತ.

ಫಾಲ್ಕೆಯವರ ಹರಿಶ್ಚಂದ್ರ ಅದಕ್ಕೆ ಆರಂಭ. ಕರ್ನಾಟಕದಲ್ಲಿ ಗುಬ್ಬಿ ವೀರಣ್ಣನವರು ಟಾಕಿಗೆ ಮೊದಲು ಮೂಕಿ ಚಿತ್ರಗಳ ತಯಾರಿಕೆಯಲ್ಲಿ ಈಡುಗೊಂಡಿದ್ದರು. ಕನ್ನಡವೂ ಟಾಕಿ ಆದ ಮೇಲೆ ಕ್ರಮವಾಗಿ ಲೀಲಾವತಿ, ಕಲ್ಪನಾ, ಜಯಮಾಲಾ ಮೊದಲಾದವರು ‌ಅಲ್ಲಿ ನಾಯಕಿಯರಾಗಿ ಮೆರೆದರು. ಇಂದುಶೇಖರ್ ನಾಯಕರಾದರೂ ನಿಲ್ಲಲಿಲ್ಲ, ವಿನೋದ್ ಆಳ್ವ ‌ಒಂದಷ್ಟು ದೂರ ಹೋದರು. ಹಿಂದಿ ಚಿತ್ರರಂಗದಲ್ಲಿ ರೈ, ಶೆಟ್ಟಿಯರಿಗಿಂತ ಮೊದಲು ಖ್ಯಾತರಾಗಿದ್ದ ತುಳುವರು ಫೈಟರ್ ಶೆಟ್ಟಿ.


ಟೇಲರ್ ಯುಗ


ಕೊನೆಗೂ 1971ರಲ್ಲಿ ಈ ದಿನ ಎನ್ನ ತಂಗಡಿ ಬಿಡುಗಡೆ ಕಂಡು ತುಳು ಚಲನಚಿತ್ರ ಯುಗ ಆರಂಭವಾಯಿತು. ಅದೇ ವರುಷ ದಾರೆದ ಬುಡೆದಿ ಬಂತು. ಇದರಲ್ಲಿನ ಕೆ. ಎನ್. ಟೇಲರ್ ಒಂದು ದಶಕ‌ ತುಳು ಚಿತ್ರರಂಗದ ರಾಜಕುಮಾರ್‌ ಎನಿಸಿದ್ದರು. ಇವರು ನಾಯಕನಾಗಿದ್ದ ಬಿಸತ್ತಿ ಬಾಬು ತುಳುವಿನ ಮೊದಲ ಸೂಪರ್ ಹಿಟ್ ಚಿತ್ರ. ಅದರ ಬೆನ್ನಿಗೆ ಬಂದ ವಿಶುಕುಮಾರ್ ನಿರ್ದೇಶನದ ಕೋಟಿ ಚೆನ್ನಯ ಆಗಿನ ಯಶಸ್ವಿ ಚಿತ್ರವಷ್ಟೆ ಅಲ್ಲ ಉತ್ತಮ ಮೇಕಿಂಗ್ ಎನಿಸಿತ್ತು. ಇದರಲ್ಲಿ ಕಲ್ಪನಾ ಮತ್ತು ಫೈಟರ್ ಶೆಟ್ಟಿ ಕೂಡ ನಟಿಸಿದ್ದರು. ದಾರೆದ ಬುಡೆದಿಯಿಂದ ಹಿಡಿದು ಲೀಲಾವತಿ ಕೂಡ ಹಲವು ತುಳು ಚಿತ್ರಗಳಲ್ಲಿ ನಟಿಸಿದರು.

ಕೋಟಿ ಚೆನ್ನಯ ಬೆಂಗಳೂರಿನ ಕಿನೋ ಚಿತ್ರಮಂದಿರದಲ್ಲಿ ‌ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಂಡಿತು. ಕೆ. ಎನ್. ಟೇಲರ್ ಅವರ ಎಲ್ಲ ಚಿತ್ರಗಳು ಬೆಂಗಳೂರಿನ ಅಲಂಕಾರ್‌ ಚಿತ್ರಮಂದಿರದಲ್ಲಿ ತೆರೆ ಕಂಡು‌ ಚೆನ್ನಾಗಿ ಓಡಿದವು. ಆ ಎರಡು ‌ಚಿತ್ರಮಂದಿರಗಳೂ ಇಂದಿಲ್ಲ. ಟೇಲರ್ ನರ್ತಕಿಯಲ್ಲೂ ಚಿತ್ರ ಬಿಡುಗಡೆ ಮಾಡಿದ್ದರು. ಇತರರ ಚಿತ್ರಗಳು ಕರಾವಳಿ ದಾಟಲಿಲ್ಲ. ಹಾಗಾಗಿ ಟೇಲರ್ ಬಳಿಕ ತುಳು ಚಿತ್ರರಂಗ ಮಂಕಾಯಿತು. ಕೆಲವು ವರುಷ ಒಂದೂ ಚಿತ್ರ ಬರಲಿಲ್ಲ. ಆದರೂ ಆಗೊಮ್ಮೆ ಈಗೊಮ್ಮೆ ಮಿಂಚು.


ಕಾಮಿಡಿತ್ರಯರು


ತುಳು ಚಿತ್ರರಂಗಕ್ಕೆ ಮರು ಜೀವ ನೀಡಿದ್ದು ಒರಿಯಡ್ದೊರಿ ಅಸಲ್  ಚಿತ್ರ. ಇದು 175 ದಿನ ಓಡಿತು. ಇದೇ ವೇಳೆ ಆರಂಭವಾದ ಕಾಮಿಡಿತ್ರಯರ ಕ್ರೇಜ್ ಈಗಲೂ ಇದೆ. ನವೀನ್ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಜೂರು ಇವರು ಈ ದಶಕದಲ್ಲಿ ನಾಯಕ ನಾಯಕಿಯರಿಗಿಂತ ಮುಖ್ಯತ್ವ ಪಡೆದುದೂ ಇದೆ. ದೇವದಾಸ್ ಕಾಪಿಕಾಡ್ ಹೆಸರು ಇದರಲ್ಲಿ ಬಂದರೂ ಅವರು ಬೇರೆಯದೇ ಪಾಣಿ ತೋರಿದರು.

ಕೋಟಿ ಚೆನ್ನಯ ಚಿತ್ರ ಮತ್ತೊಮ್ಮೆ ವರ್ಣದಲ್ಲಿ ಬಂತು. ನಡೆಯಿತಾದರೂ ಮೊದಲ ಕೋಟಿ ಚೆನ್ನಯ ಎನಿಸಲಿಲ್ಲ. 2014ರಲ್ಲಿ ಬಂದ ಬ್ರಹ್ಮಶ್ರೀ ನಾರಾಯಣ ಗುರು ಉತ್ತಮ ಚಿತ್ರವಾದರೂ ಕಲೆಕ್ಷನ್ ಕಾಣಲಿಲ್ಲ. ಕೆಲವರ ಪ್ರಕಾರ ‌ಬಿರುವ ಯುವಕರು ಆಗ ಚಾಲಿಪೋಲಿಲು ಥಿಯೇಟರ್ ತುಂಬಿದ್ದುದೇ ಅದಕ್ಕೆ ಕಾರಣ. ನಿಜ, ಚಾಲಿಪೋಲಿಲು ತುಳುವಿನಲ್ಲಿ 470 ದಿನ ಓಡಿ ದಾಖಲೆ ‌ಮಾಡಿದ ಚಿತ್ರ, ಕಾಮಿಡಿತ್ರಯರ ಕಮಾಲ್ ಇತ್ತು. 

ಟೇಲರ್‌ ಅವರಂತೆಯೇ ವಿಜಯಕುಮಾರ್ ಕೊಡಿಯಾಲ್ ಬೈಲ್ ಮೊದಲಾದ ನಾಟಕ ರಂಗದವರು ತುಳು‌ ಚಿತ್ರರಂಗದಲ್ಲಿ ಮಿಂಚಿದರು, ಮಿಂಚುತ್ತಿದ್ದಾರೆ. ಐವತ್ತನೇ ವರುಷದ ಈ ಸಂದರ್ಭದಲ್ಲಿ ಗಮ್ಜಾಲ್ ಚಿತ್ರ ಬಿಡುಗಡೆ ಆಗಿದೆ. ಇತ್ತಿಚೆಗೆ ಕೆಲವು ತುಳು ಚಿತ್ರಗಳು ಮಂಗಳೂರು, ಉಡುಪಿ, ಬೆಂಗಳೂರು, ಮುಂಬಯಿ, ಕೊಲ್ಲಿ ದೇಶಗಳಲ್ಲಿ ಬಿಡುಗಡೆ ಕಂಡು ಮಾರುಕಟ್ಟೆ ಬಲಿಸುವಂತೆ ಕಂಡವು. ಆದರೆ ಅದಿನ್ನೂ ಮುಂದೆ ಆ ರೀತಿ ಬಿಡುಗಡೆ ಆಗಿ ಅದನ್ನು ನಿರೂಪಿಸಬೇಕಾಗಿದೆ. ನಿರೆಲ್, ಸುದ್ದದಂಥ ಪ್ರಯೋಗಾತ್ಮಕ ಎನ್ನಲಾದ ಸಿನಿಮಾಗಳು ಕೂಡ ತುಳುವಿನಲ್ಲಿ ಬಂದಿವೆ. ಈಗ 115ನೇ ಚಿತ್ರ ತೆರೆ ಕಂಡಿದೆ. ಸುವರ್ಣ ಸಂಭ್ರಮದಲ್ಲಿ ಸಾಕಷ್ಟು ತುಳು ಚಿತ್ರಗಳ, ಅದರಲ್ಲಿ ದುಡಿದವರ ಹೆಸರು ‌ಬರುತ್ತದಾದರೂ ಅದನ್ನೆಲ್ಲ ಈ ಕಿರು ಲೇಖನದಲ್ಲಿ ಸೇರಿಸುವುದು ಅಸಾಧ್ಯ. -ಪೇಜಾ