ಜೋಡಿ ‌ಚಿತ್ರಮಂದಿರದ ಬದಿ ತೋಡು ತಿಂಗಳ ಹಿಂದೆ ಸ್ವಚ್ಛ ಮಾಡಲಾಗಿತ್ತು. ಸಿನಿಮಾ‌ ಮತ್ತೆ‌ ಆರಂಭ, ಪ್ರೇಕ್ಷಕರಿಗೆ ಹಣ್ಣಿನ ರಸ, ತೋಡಿಗೆ ಪೊಟ್ಟಣ ಕಸ.

ಮಂಗಳೂರಿನಲ್ಲಿ ಚಿತ್ರಮಂದಿರಗಳು ಆರಂಭವಾಗಿ ತಿಂಗಳಷ್ಟೆ ಆಗುತ್ತಿದೆ. ತಿಂಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆ ಸ್ವಚ್ಚತಾ ಸಿಬ್ಬಂದಿ ಕಾರ್ನಾಡ್ ಸದಾಶಿವರಾವ್ ರಸ್ತೆಯ ಈ ಮಾಜೀ ತೋಡು, ಹಾಲಿ ಗಟಾರವನ್ನು ಸ್ವಚ್ಛ ಮಾಡಿದ್ದರು. ಕೆಎಸ್ ರಾವ್ ರಸ್ತೆಯ ಜೋಡಿ ಚಿತ್ರಮಂದಿರಗಳ ಬದಿಯ ಈ ತೋಡಿನ ಕಸ ಮತ್ತು ‌ಕೆಲವೆಡೆ ಹೂಳು ತೆಗೆದ ಮೇಲೆ ಈ ತೋಡು ನೆಮ್ಮದಿಯ ‌ನಿಟ್ಟುಸಿರು ಬಿಟ್ಟಂತೆ ಅನಿಸಿತು. ಆದರೆ ಮತ್ತೆ ಅದರ ಉಸಿರಾಟ ಕಸಿ(ಸ)ವಿಸಿಗೊಂಡಿದೆ.

ತೋಡಿನಲ್ಲಿ ಕಳೆ ಗಿಡಗಳು ಕೂಡ ಬೆಳೆದಿದ್ದವು. ಮನಪಾ‌ ಸ್ವಚ್ಛಿಗರು ಅದನ್ನು ಸಹ ಕಿತ್ತು ಅಂದಗೊಳಿಸಿದ್ದರು. ಮಳೆ ಬಂದಾಗ ನೀರು ಸರಾಗವಾಗಿ ಹರಿಯಲು ಸಜ್ಜು‌ ಮಾಡಿದ್ದರು. ಹಳೆಯ ತೋಡು ಹೊಸ ಮದುಮಗಳು ಎಂಬಂತೆ ಕಳೆ ಕೊಳೆ ಕಳೆದುಕೊಂಡು ಕಳೆ‌ ಏರಿಸಿಕೊಂಡು ಲಕಲಕ ಆಗಿತ್ತು. ಆದರೆ ಜನ ಬಿಡಬೇಕಲ್ಲ. ಚಿತ್ರ ರಸಿಕರಿಗೆ ಚಿತ್ರದ ಆಚೀಚೆಯ ಸೊಬಗನ್ನು ಆಸ್ವಾದಿಸುವ ಸ್ವಭಾವ ಇರಲಾರದು. ಸ್ವಚ್ಛ ಮಂಗಳೂರಿನ ಕಲ್ಪನೆ ಇಲ್ಲವೇ ಜವಾಬ್ದಾರಿ ಖಂಡಿತ ಗೊತ್ತಿಲ್ಲ ಬಿಡಿ.

ಸಿನಿಮಾ ನೋಡುವ ಮಂದಿಗೆ ಏನಾದರೂ ತಿಂಡಿಯ ತೊಡು, ಪಾನೀಯಗಳ ಬಾಯಾರಿಕೆ ಆಗುತ್ತದೆ. ಅದೂ ಯುವಜನರಲ್ಲಿ ಆ ತೊಡು ಅಧಿಕ. ಇವರ ಆಸೆ ಅರಿತಿರುವ ಚಿತ್ರಮಂದಿರ ಮಾರಾಟಗಾರರು ‌ಗರಿಷ್ಟ ಮಾರಾಟ ಬೆಲೆಗಿಂತ ಹೆಚ್ಚಿನ ದರದಲ್ಲಿ ತಿಂಡಿ ತಿನಿಸು ಪಾನೀಯ ಮಾರುವುದರಲ್ಲಿ ಕುಖ್ಯಾತರು. ಆದರೆ ನೋಡುಗರಲ್ಲಿ ಹಲವರ ಬಾಯಿ ಚಪಲ‌ ಏರು ಬೆಲೆಗೆಲ್ಲ ಹೆದರದು.

ಹೋಗಲಿ ತಿನ್ನಲಿ, ಕುಡಿಯಲಿ, ಮೋಜು ಮಾಡಲಿ. ಆದರೆ ತಿಂದುಳಿದ ತ್ಯಾಜ್ಯ ಎಸೆಯಲು ಅಲ್ಲಿ ಕಸದ ತೊಟ್ಟಿ ಬುಟ್ಟಿ ಎಲ್ಲ ಇಟ್ಟಿರುತ್ತಾರೆ; ಅವೆಲ್ಲ ಏಕೆ ಕಾಣಿಸುವುದಿಲ್ಲ? ಸ್ವಚ್ಛ ಮಾಡಿದ ಒಂದೇ ತಿಂಗಳಲ್ಲಿ ಸಿನಿ ರಸಿಕರು ತಾವು ಹಿಂದುಳಿದ ತ್ಯಾಜ್ಯವನ್ನೆಲ್ಲ ಈ ತೋಡಿಗೆಸೆದು ಅವರದೇ ರೀತಿಯಲ್ಲಿ ಸಿಂಗರಿಸಿದ್ದಾರೆ. ನಿರ್ಮಲ ಭಾರತ ಹೆಸರನ್ನು ಸ್ವಚ್ಛ ಭಾರತ ಎಂದು ಹೆಸರು ಬದಲಾವಣೆ ಮಾಡಿ ಫಲವೇನು? ಬಹಳಷ್ಟು ಜನರ ಮನ ಕೊಳೆ ಸ್ವಚ್ಛ ಆಗಬೇಕಾಗಿದೆ. 


-By ಪೇಜಾ