ಇತ್ತೀಚಿನ ವರ್ಷಗಳಲ್ಲಿ ಕೆಲವಕ್ಕೆ ಜೋರು ಪ್ರಚಾರ ನೀಡಿ ಅದು ತಣ್ಣಗಾಗುವುದರೊಳಗೆ ಕಾಸು‌ ಮಾಡಿಕೊಳ್ಳುವ ಕರಾಮತ್ತು ಕೆಲವು ‌ವಿಷಯಗಳಲ್ಲಿ‌ ನಡೆದಿದೆ. ಆಯುರ್ವೇದ ಇದರಲ್ಲಿ ಮುಂದಿದೆ. ಸಾವಯವ ವಸ್ತುಗಳ ಮಾರಾಟ ಒಂದು ಮಟ್ಟದ ನಿರಂತರ ಮಾರುಕಟ್ಟೆ ಹಿಡಿದುಕೊಂಡಿದೆ.

ಆಧುನಿಕ ಜಗತ್ತನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಕಲಬೆರಕೆ. ಅದನ್ನೂ ಮೀರಿ ನಾವು ಹೆಚ್ಚು ಬೆಳೆಗಾಗಿ ಬಳಸುವ ಕೀಟನಾಶಕಗಳು, ರಾಸಾಯನಿಕ ಗೊಬ್ಬರಗಳು ನಮ್ಮ ಆಹಾರ ವಸ್ತುಗಳನ್ನು ನಂಜಾಗಿಸಿವೆ. ಮೊಟ್ಟೆ, ಎಳನೀರು ಬಿಟ್ಟರೆ ಬೇರೆಲ್ಲ ವಿಷಮಯ ಎಂಬುದೂ ಇಂದು ಉಳಿದಿಲ್ಲ. ಮೊಟ್ಟೆ ಕೋಳಿಗೆ ಇಂಜೆಕ್ಷನ್‌, ಜಂಕ್ ಫುಡ್ ಇಂದು ಕಡ್ಡಾಯ. ತೆಂಗಿನ ಮರಗಳಿಗೂ ಇಂಜೆಕ್ಷನ್‌, ರಾಸಾಯನಿಕ ಸಿಂಪರಣೆ ನಡೆಯುತ್ತದೆ. ಆದ್ದರಿಂದ ಇವುಗಳ ಸಹಿತ ಎಲ್ಲ ಆಹಾರ ‌ವಸ್ತುಗಳಲ್ಲಿಯೂ ರಾಸಾಯನಿಕ ಅಂಶಗಳು ತುಸು ಇರುತ್ತದೆ. ಇದನ್ನು ತೊಡೆಯಲು ಇಲ್ಲವೇ ಇದರ ಹಾದಿಯಲ್ಲಿ ‌ಲಾಭ ಮಾಡಿಕೊಳ್ಳಲು ಬಂದುದಾಗಿದೆ ಸಾವಯವ ಉತ್ಪನ್ನಗಳು.

ಕೀಟನಾಶಕ, ರಾಸಾಯನಿಕ ಇತ್ಯಾದಿ ಬಳಸದೆ ಸಹಜ ಕೃಷಿಯ ಮೂಲಕ ಉತ್ಪನ್ನಗಳನ್ನು ಪಡೆಯುವುದೇ ಸಾವಯವ ಆಹಾರ ವಸ್ತುಗಳು.   ಕೀಟನಾಶಕ, ರಾಸಾಯನಿಕ, ಇಂಜೆಕ್ಷನ್‌ ಇತ್ಯಾದಿ ಬಳಸದ ಕಾರಣ ಸಾವಯವ ಕೃಷಿ ಉತ್ಪನ್ನಗಳ ಬೆಲೆ ಕಡಿಮೆ ಇರಬೇಕಿತ್ತು. ಆದರೆ ಸಾವಯವ ಆಹಾರ ‌ವಸ್ತುಗಳ ಬೆಲೆಯು ಮಾಮೂಲು ತರಕಾರಿ, ಧಾನ್ಯಗಳಿಗಿಂತ ಒಂದೂವರೆ ಪಟ್ಟು, ಎರಡು ಪಟ್ಟು ಬೆಲೆ ಹೊಂದಿರುವುದೇಕೆ?

ಸಾವಯವ ಗೊಬ್ಬರ ಭಾರೀ ತುಟ್ಟಿಯಲ್ಲ. ಅಲ್ಲದೆ ಸಾವಯವ ಗೊಬ್ಬರಕ್ಕೆ ಅಲೆಯದೆ ಸಾವಯವ ಬೆಳೆಗಾರರು ಕಳೆಬುಡಕೊಳೆ ಪದ್ಧತಿ ಬಳಸುವುದರಿಂದ ಇದು ಇನ್ನೂ ಅಗ್ಗ. ಬೆಳೆಯ ಬುಡದ ಕಳೆ ಹಲ್ಲುಗಳನ್ನು ಬೆಳೆ ಗಿಡಗಳ ಬಡಕ್ಕೆ ಮಣ್ಣು ಸಮೇತ ಅಡಿಮೇಲು ಮಾಡಿ ಹಾಕುತ್ತಾರೆ. ಈ ಮಲ್ಚಿಂಗ್ ವಿಧಾನದಿಂದ ಕಳೆ ಕೊಳೆತು ಅಲ್ಲೇ ಗೊಬ್ಬರ ದೊರೆಯುವ ಕಾರಣ ಆ ವೆಚ್ಚವೂ ಉಳಿಯುತ್ತದೆ. ನೀರಿನ ಬಳಕೆಯಲ್ಲೂ ಜಿನುಗು, ಹನಿ ಎಂದಿತ್ಯಾದಿಯಾಗಿ ಪ್ರಯೋಗ ನಡೆಸುವುದರಿಂದ ಅಲ್ಲೂ ಉಳಿತಾಯ.

ಹಾಗಿದ್ದಾಗ್ಯೂ ಸಾವಯವ ಆಹಾರ ವಸ್ತುಗಳ ಬೆಲೆ ಆಕಾಶದಲ್ಲೇ ಇರುವುದೇಕೆ? ಒಂದು ಕಾರಣ ಒಪ್ಪಬಹುದು. ಕೀಟನಾಶಕ ಬಳಸದಿರುವುದರಿಂದ ಬೆಳೆ ಕೈಗೆ ಬರುವುದು ಕಡಿಮೆ. ಇದನ್ನು ಒಪ್ಪಿದರೂ ಒಟ್ಟಾರೆ ತುಲನೆ ಮಾಡಿದಾಗ ಸಾವಯವ ಸೊಪ್ಪು, ಕಾಯಿಪಲ್ಯ, ಧಾನ್ಯ ಇತ್ಯಾದಿ ಇಷ್ಟು ಏರು ಬೆಲೆಯಲ್ಲಿ ಮಾರಾಟ ಆಗಬೇಕಾದ ಅಗತ್ಯವಿಲ್ಲ.

ಇಂದು ಎಲ್ಲ ಪಟ್ಟಣಗಳಲ್ಲೂ ನಿತ್ಯ ಇಲ್ಲವೇ ವಾರದ ಒಂದು ದಿನ ಸಾವಯವ ಸಂತೆ ಇರುತ್ತದೆ. ಮಂಗಳೂರು ಕೂಡ ಇದಕ್ಕೆ ಹೊರತಲ್ಲ. ನಿತ್ಯ ಸಾವಯವ ವಸ್ತುಗಳನ್ನು ಮಾರುವ ಅಂಗಡಿಗಳು ಹತ್ತಾರು ಇವೆ. ಅದಕ್ಕಿಂತ ಮೇಲಾಗಿ ಭಾನುವಾರ ಇಪ್ಪತ್ತಕ್ಕೂ ಹೆಚ್ಚು ಕಡೆ ಸಾವಯವ ಸಂತೆಗಳು ನಡೆಯುತ್ತವೆ. ಬೆಂಗಳೂರಿನಲ್ಲಿ ಸಾವಯವ ಆಹಾರ ವಸ್ತುಗಳ ಹೋಟೆಲ್ ಇವೆ. ಮಂಗಳೂರಿಗೆ ಅದೊಂದು ಬಾಕಿ. 

ಸಾವಯವ ವಸ್ತುಗಳ ಮಾರಾಟದ ಬೆಲೆಯಿಂದಾಗಿ ಜನಸಾಮಾನ್ಯರು ಯಾರೂ ಅದನ್ನು ಖರೀದಿಸುತ್ತಿಲ್ಲ. ಸರಕಾರೀ ಮಟ್ಟದ ಸಂಬಳ, ಪಿಂಚಣಿಯವರು ಮಾತ್ರ ಸಾವಯವ ಸಂತೆಯ ಗಿರಾಕಿಗಳು. ಬಡವರಿಗೆ ಕೀಟನಾಶಕ ಬಳಸಿದ ಹಣ್ಣು ತರಕಾರಿಗಳಿತ್ಯಾದಿಯೇ ಅಮೃತ ಸಮಾನ.    


-By ಪೇಜಾ