ಉಡುಪಿ,(ಜನವರಿ 16) : ಸ್ವಚ್ಛತೆಯಲ್ಲಿ ಉಡುಪಿ ಜಿಲ್ಲೆಯು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದು, ಮುಂದೆಯೂ ಕೂಡಾ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜಿಲ್ಲೆಯ ಮೇಲೆ ಇರಿಸಿಕೊಂಡಿರುವ ವಿಶ್ವಾಸವನ್ನು ಉಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದರು.

     ಅವರು ಶನಿವಾರ, ತೆಂಕನಿಡಿಯೂರು ಸಮುದಾಯ ಭವನದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ). ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಗ್ರಾಮ ಪಂಚಾಯತ್ ತೆಂಕನಿಡಿಯೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹಸಿ ತ್ಯಾಜ್ಯ ಮತ್ತು ಕೋಳಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಕೆ ಕುರಿತು ಪ್ರಾತ್ಯಕ್ಷಿಕೆ ಕಾರ್ಯಾಗಾರದಲ್ಲಿ ನಮ್ಮ ನಡಿಗೆ- ತ್ಯಾಜ್ಯ ಮುಕ್ತ ಕಡೆಗೆ ವಿಶೇಷ ಆಂದೋಲನಕ್ಕೆ ಚಾಲನೆ ನೀಡಿ, ಮಾತನಾಡಿದರು.

    ಇತರೆ ಜಿಲ್ಲೆಯವರು ಕೂಡಾ ಉಡುಪಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಎಸ್.ಎಲ್.ಆರ್.ಎಂ. ಘಟಕಗಳನ್ನು ವೀಕ್ಷಿಸಿ ತಮ್ಮ ತಮ್ಮ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಿದ್ದು, ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯು ಮಾದರಿ ಜಿಲ್ಲೆಯಾಗಿರುವುದು ಹೆಮ್ಮೆಯ ವಿಷಯವಾಗಿದ್ದು, ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ಎಲ್ಲರೂ ಸಹಕರಿಸಬೇಕು ಎಂದರು.

     ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವೈ. ನವೀನ್ ಭಟ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಡುಪಿ ತಾಲೂಕು ಪಂಚಾಯತ್ ಸದಸ್ಯ ಧನಂಜಯ್ ಕುಂದರ್, ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ರಾಜ್, ತೆಂಕನಿಡಿಯೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಪಾಲ್ ಉಪಸ್ಥಿತರಿದ್ದರು.