ಮಂಗಳೂರು, ಜೂನ್ 5: ಗೋವುಗಳನ್ನು ಏಕೆ ಕಡಿಯಬಾರದು ಎಂದು ಪ್ರಶ್ನಿಸಿರುವ ಪಶು ಸಂಗೋಪನ ಸಚಿವ ವೆಂಕಟೇಶ್ ಹೇಳಿಕೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡಿಸಿದ್ದಾರೆ. ಗೋವು ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಹಿನ್ನೆಲೆಯಿರುವ ಪ್ರಾಣಿ, ಭಾರತೀಯರು ಗೋವನ್ನ ಮಾತೆಯ ಸ್ವರೂಪದಲ್ಲಿ ಪೂಜಿಸುತ್ತಿದ್ದು ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. 

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ.

ಸ್ವಾತಂತ್ರ್ಯ ಬಂದ ತಕ್ಷಣ ಈ ದೇಶದಲ್ಲಿ ಗೋಹತ್ಯೆ ನಿಷೇದವಾಗಬೇಕೆಂದು ಮಹಾತ್ಮ ಗಾಂಧೀಜಿ ಪ್ರತಿಪಾದನೆ ಮಾಡಿದ್ದಾರೆ. ಈ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರವೇ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿರುವುದು ಸಚಿವರು ನೆನಪು ಮಾಡಿಕೊಳ್ಳಬೇಕು. ಕಾಂಗ್ರೇಸ್ ಜಾರಿಗೆ ತಂದಿರುವ ಕಾನೂನಿಗೆ ಬಲಕೊಡುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ. ಹಾಗೂ ಕೋಮು ಭಾವನೆ ಕೆರಳಿಸುವವರನ್ನು ಜೈಲಿಗೆ ಕಳಿಸುತ್ತೇವೆ ಎಂದು ಹೇಳಿಕೆ ನೀಡಿರುವ ಸಚಿವ ಎಂ.ಬಿ.ಪಾಟೀಲ್‌ರವರೇ ತಾವು ವೆಂಕಟೇಶ್‌ರವರನ್ನು ಜೈಲಿಗೆ ಕಳುಹಿಸುತ್ತೀರಾ ಎಂದು ಪ್ರಶ್ನಿಸಿರುವ ಸುದರ್ಶನ ಎಂ. ಕೃಷಿಗೆ ಬೆನ್ನೆಲುಬು ಆಗಿರುವ ಗೋವಿನ ಹತ್ಯೆಯ ನಿಷೇಧ ಕಾನೂನನ್ನು ರದ್ದುಗೊಳಿಸುವ ವಿಚಾರವನ್ನು ಕೈಬಿಡಬೇಕು, ಹಾಲಿನ ಪ್ರೋತ್ಸಾಹ ಧನ 1.50 ರೂಪಾಯಿ ಕಡಿತವನ್ನು ನಿಲ್ಲಿಸಬೇಕು, ವಿದ್ಯುತ್ ದರ ಹೆಚ್ಚಿಸದೇ ಕಾಂಗ್ರೇಸ್ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ರಾಜ್ಯದ ಎಲ್ಲಾ ಜನತೆಗೆ 200 ಯೂನಿಟ್ ವಿದ್ಯುತ್‌ನ್ನು ಉಚಿತವಾಗಿ ನೀಡಬೇಕೆಂದು ಆಗ್ರಹಿಸಿದ್ದಾರೆ.