ಅಂದು ಬಾಲ್ಯವನು ಅನುಭವಿಸಿದವಳು

ಮಗದೊಮ್ಮೆ ಮಗುವಾಗಿ ಜನಿಸಿದೆ

ಒಲುಮೆಯನು ಬಸಿ ಬಸಿದು ಪಡೆಯುವಾಸೆ

ನೆನಪು ಹಸಿರಾಗಿತ್ತು ಪ್ರೀತಿಯೇ ಪ್ರತಿ ಉಸಿರಲಿತ್ತು


ಮನೆಯದು ಪುಟಿದೇಳುವ ಚೆಂಡಿನ ಸೊಗಡು

ನನ್ನ ಹಿಂದೆ ಮುಂದೆಯೇ ಸುತ್ತುತ್ತಿದ್ದ ಬಳಗ

ನಗುವಿಗೆ ಕೇಳುತ್ತಿರಲಿಲ್ಲ ಯಾರೂ ಕಾರಣ

ಬಾಲ್ಯ ಕಳೆದು ಮುಪ್ಪು ಬಂದರೂ ತಿಳಿಯಲೇ ಇಲ್ಲ


ಮತ್ತದೇ ಬಯಕೆಯನು ಕಣ್ತುಂಬಲು ಬಂದೆ

ಇಲ್ಲಿ ಎಲ್ಲವೂ ನಿರ್ಮಾನುಷ ನಿರ್ಜೀವವಾಗಿದೆ

ನಗುವಂತೂ ರದ್ದಿಯಂಗಡಿಯಲಿ ಮೂಲೆಗುಂಪು

ಕಾರಣಕೇಳಿ ನೋಟೀಸಿನಡಿಯಲೆ ಎಲ್ಲ ಕಾರ್ಯ


ಬಯಕೆಯ ಹಕ್ಕಿಯ ರೆಕ್ಕೆಯದು ಮುರಿದಿದೆ

ಮನಸುಗಳ ಭಾವಗಳು ಕರಾಳತೆಯಲಿ ಕಳೆದು

ಸಂಬಂಧಗಳು ನಮ್ಮೊಳಗೆ ಕೋಳ ತೊಟ್ಟು ಕುಳಿತಿದೆ

ಜಾತ ಕಾರ್ಯವ ಮುಗಿಸಿ ಸೂತಕಕ್ಕಾಗಿ‌ ಕಾಯುತ್ತಿರುವೆ..

-ಜೀವಪರಿ