ಜಾತಿ, ಉಪಜಾತಿ, ದರ್ಮ, ಪಂಗಡ ಎಲ್ಲವನ್ನೂ ಬದಿಗಿಡಿ. ಈ ಪ್ರಪಂಚದಲ್ಲಿ ನಿಜವಾಗಿ ಇರುವುದು ಎರಡೇ ವರ್ಗಗಳು, ಒಂದು ಬಡವರು, ಇನ್ನೊಂದು ಶ್ರೀಮಂತರು. ಇನ್ನು ಎಡಬಿಡಂಗಿ ಮಧ್ಯಮವರ್ಗವೂ ದೊಡ್ಡದೇ. ಆದರೆ ಇದರಲ್ಲಿ ಕೆಲ ಬಡವರು ತಾವು ಶ್ರೀಮಂತರು ಎಂದು ತೋರಿಸಿಕೊಂಡರೆ, ಹಲವು ಶ್ರೀಮಂತರು ಬಡವರಂತೆ ಫೋಸು ಕೊಡುತ್ತಾರೆ…ಅಷ್ಟೆ!
ಈ ಬಡವರು ಮತ್ತು ಶ್ರೀಮಂತರಿಗಿರುವ ವ್ಯತ್ಯಾಸ ಒಂತರಾ ವಿಚಿತ್ರ. ಬಡವರು ಕಷ್ಟ ಪಟ್ಟು, ಬೆವರು ಸುರಿಸಿ ದಿನಕ್ಕೆ 100-300 ರೂಪಾಯಿವರೆಗೆ ಹಣ ಸಂಪಾದಿಸಿದರೆ, ಶ್ರೀಮಂತರು ಲಕ್ಷದಿಂದ ಕೋಟಿವರೆಗೆ ಸಂಪಾದಿಸುತ್ತಾರೆ. ಬಡತನದಲ್ಲಿ ಬೇಯುವ ಜನರಿಗೆ ಹಣದ ಬೆಲೆ ಗೊತ್ತಿರುತ್ತದೆ, ಶ್ರೀಮಂತರಿಗೆ ಚಿಕ್ಕಾಸು ಯಾವ ಲೆಕ್ಕವೂ ಅಲ್ಲ.
ಒಬ್ಬ ಸಾಮಾನ್ಯ ಬಡ ವ್ಯಕ್ತಿ 50 ಕೆ.ಜಿ. ಧಾನ್ಯ ಬೆಳೆಸುವಷ್ಟು ಮತ್ತು ಆ 50 ಕೆ. ಜಿ. ಧಾನ್ಯದ ಮೂಟೆಯನ್ನು ಹೊರುವಷ್ಟು ಸಾಮರ್ಥ್ಯ ಹೊಂದಿರುತ್ತಾನೆ, ಆದರೆ ಅದನ್ನು ಕೊಳ್ಳುವ ಶಕ್ತಿ ಅವನಿಗಿಲ್ಲ. ಆದರೆ ಒಬ್ಬ ಶ್ರೀಮಂತ ಅನಾಯಾಸವಾಗಿ 50 ಕೆ.ಜಿ ಧಾನ್ಯ ಕೊಳ್ಳಬಲ್ಲ, ಆದರೆ ಅಷ್ಟು ಭಾರ ಹೊರುವುದೆಂದರೆ ಆತನಿಗೆ ಕಷ್ಟಕಷ್ಟ! ಹೊಟ್ಟೆ ಹೊರೆಯಲು ಹಣಬೇಕೆಂದು ದೇವರಲ್ಲಿ ಬೇಡುವ ಬಡವನಿಗೆ ಹಣ ಮರೀಚಿಕೆಯಾದರೆ, ಹಣವನ್ನು ಕಾಲ್ಕಸ ಮಾಡುವ ಶ್ರೀಮಂತನಿಗೆ ಅದು ಬೇಡವೆಂದರೂ ಒಲಿಯುತ್ತದೆ!
ಇಷ್ಟಾದರೂ ಬಡತನವೆಂಬುದು ಶಾಪವಲ್ಲ. ಬಡ ವ್ಯಕ್ತಿ ವರ್ಷಪೂರ್ತಿ ನೆಮ್ಮದಿಯಿಂದ ರಾತ್ರಿಯೆಲ್ಲಾ ಸುಖನಿದ್ರೆ ಮಾಡಬಲ್ಲ. ಆದರೆ ಶ್ರೀಮಂತರಿಗೆ ಸಾಧ್ಯವಿಲ್ಲ. ಅವರಿಗೆ ತಮ್ಮ ಸಿರಿವಂತಿಗೆಯನ್ನು ಕಾಪಿಡುವುದೇ ಒಂದು ದೊಡ್ಡ ಚಿಂತೆ!
ಕೊನೆಗೊಂದು ಮಾತು…ಬಡತನ ಮತ್ತು ಸಿರಿತನ ಎರಡೂ ಶಾಶ್ವತವಲ್ಲ. ಕೋಟ್ಯಧೀಶ ಬಡವನಾಗಿ ಸತ್ತ, ಕಡುಬಡವ ಕೋಟ್ಯಧೀಶನಾದ ಉದಾಹರಣೆಗಳಿವೆ. ನಮ್ಮ ಜೀವನವೆಂಬುದು ಮಾತ್ರ ಶಾಶ್ವತ. ಬಡತನವೋ, ಸಿರಿತನವೋ, ಇರುವಷ್ಟು ದಿನ ನೆಮ್ಮದಿಯಿಂದ, ಒಳ್ಳೆಯ ಮನುಷ್ಯರಾಗಿ ಬದುಕೋಣ.
ದೀಕ್ಷಿತಾ,
ದ್ವಿತೀಯ ಬಿಎ (ಪತ್ರಿಕೋದ್ಯಮ)
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು