ಉಡುಪಿ ಜೂನ್ 6 : ಜಿಲ್ಲೆಯಲ್ಲಿ ಇದುವರೆಗೆ 767 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 132 ಮಂದಿ ಡಿಸ್ಚಾರ್ಜ್ ಆಗಿದ್ದು, 635 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳಲ್ಲಿ ಇಂದಿನಿoದ ಸರಾಸರಿ  100 ಮಂದಿ ಪ್ರತಿದಿನ ಗುಣಮುಖರಾಗಿ ಡಿಸ್ಚಾರ್ಜ್ ಆಗಲಿದ್ದಾರೆ  ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಶನಿವಾರ ನಡೆದ ದಿಶಾ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಾಹಿತಿ ನೀಡಿದರು.

        ಜಿಲ್ಲೆಯಲ್ಲಿ ಇದುವರೆಗೆ 12258 ಮಂದಿಯ ಕೋವಿಡ್ ಮಾದರಿ ಸಂಗ್ರಹಿಸಿದ್ದು, ಅದರಲ್ಲಿ 10992 ಮಂದಿಯ  ವರದಿ ನೆಗೆಟಿವ್ ಆಗಿದ್ದು, 769 ವರದಿ ಬರಲು ಬಾಕಿ ಇದೆ, ಪಾಸಿಟಿವ್ ಪ್ರಕರಣಗಳಲ್ಲಿ ಶೇ.98 ಮಂದಿಗೆ ರೋಗ ಲಕ್ಷಣಗಳು ಇಲ್ಲ , ಪಾಸಿಟಿವ್ ಪ್ರಕರಣಗಳ ಚಿಕಿತ್ಸೆಗಾಗಿ  ಟಿಎಂಎ ಪೈ ಆಸ್ಪತ್ರೆಯಲ್ಲಿ 125, ಕಾರ್ಕಳದಲ್ಲಿ 75, ಎಸ್.ಡಿ.ಎಂ ಕಾಲೇಜಿನಲ್ಲಿ 180 ಮತ್ತು ಕೊಲ್ಲೂರುನಲ್ಲಿ 250 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೋವಿಡ್ -19 ಜಿಲ್ಲಾ ನೋಢೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಮಾಹಿತಿ ನೀಡಿದರು.

    ಜಿಲ್ಲೆಯಲ್ಲಿ ಇದುವರೆಗೆ ಕಂಡು ಬಂದಿರುವ ಪಾಸಿಟಿವ್ ಪ್ರಕರಣಗಳಲ್ಲಿ ಯಾವುದೇ ರೋಗಿಗೆ ಆಕ್ಸಿಜಿನ್, ವೆಂಟಿಲೇಟರ್, ಐ.ಸಿ.ಯು ಸೇವೆ ನೀಡುವಂತಹ ಗಂಭೀರ ಪ್ರಕರಣ ಕಂಡುಬoದಿಲ್ಲ ಎಲ್ಲರೂ ಚಿಕಿತ್ಸೆಗೆ ಶೀಘ್ರದಲ್ಲಿ ಸ್ಪಂದಿಸುತ್ತಿದ್ದು, ಆರೋಗ್ಯವಾಗಿದ್ದಾರೆ, ಕ್ವಾರಂಟೈನ್ ಕೇಂದ್ರಗಳಿoದ ತೆರಳಿದವರಿಂದ  ಅವರ ಮನೆಯವರಿಗೆ ಹಾಗೂ ಸಮುದಾಯಕ್ಕೆ ರೋಗ ಹರಡಿಲ್ಲ, ಹೋಂ ಕ್ವಾರಂಟೈನ್ ನಲ್ಲಿರುವವರ ಮನೆಗೆ ಪ್ರತಿದಿನ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ , ಪರಿಶೀಲಿಸುತ್ತಿದ್ದು, ರೋಗ ಲಕ್ಷಣ ಕಂಡುಬoದಲ್ಲಿ ಕೂಡಲೇ ಗಂಟಲು ದ್ರವದ  ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ, ಜಿಲ್ಲೆಯ ಸರ್ಕಾರಿ ಕೋವಿಡ್ ಲ್ಯಾಬ್ 10 ದಿನದಲ್ಲಿ ಆರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.

       ಕೋವಿಡ್-19 ವಿರುದ್ದ ಹೋರಾಟದಲ್ಲಿ ಪ್ರತಿಯೊಬ್ಬರೂ ಸೇನಾನಿಗಳಂತೆ ಕಾರ್ಯ ನಿರ್ವಹಿಸಬೇಕಿದ್ದು, ಜಿಲ್ಲೆಯ ಎಲ್ಲಾ ಜನಪ್ರನಿಧಿಗಳು ಆರೋಗ್ಯ ಇಲಾಖೆಗೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲು ಬದ್ದರಿರುವುದಾಗಿ ತಿಳಿಸಿದ ಸಂಸದೆ ಶೋಭಾ  ಕರಂದ್ಲಾಜೆ, ಪ್ರಸ್ತುತ ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುತ್ತಿರುವ ನಾಗರೀಕರನ್ನು ಕ್ವಾರಂಟೈನ್ ಕೇಂದ್ರಗಳಿಗೆ ತಲುಪಿಸಲು ಸೂಕ್ತ ವಾಹನ ವ್ಯವಸ್ಥೆ ಮಾಡುವಂತೆ ತಿಳಿಸಿದರು.  ಆರೋಗ್ಯ ಇಲಾಖೆಯಲ್ಲಿನ ಸಿಬ್ಬಂದಿಯ ಕೊರತೆ ಬಗ್ಗೆ ಹೊರ ಗುತ್ತಿಗೆ ನೇಮಕಾತಿ ಮಾಡಿಕೊಳ್ಳುವ ಕುರಿತಂತೆ ಸಂಬoದಪಟ್ಟ  ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಾಗೂ ಜಿಲ್ಲೆಗೆ ಇನ್ನೊಂದು ಹೆಚ್ಚುವರಿ ಕೋವಿಡ್-19 ಆಸ್ಪತ್ರೆಯ ಅಗತ್ಯವಿದ್ದಲ್ಲಿ  ಪ್ರಸ್ತಾವನೆ ನೀಡುವಂತೆ ತಿಳಿಸಿದರು.

   ರಾಷ್ಟ್ರೀಯ ಹೆದ್ದಾರಿ 169ಎ ನಲ್ಲಿ ಪರ್ಕಳ ಸಮೀಪ ಗುಂಡಿ ಬಿದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದು, ಕೂಡಲೇ ಅದನ್ನು ಕಾಂಕ್ರೀಟ್ ನಿಂದ ಮುಚ್ಚುವಂತೆ ಸೂಚಿಸಿದ ಸಂಸದರು, ಭೂ ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಆದಷ್ಟು ಶೀಘ್ರದಲ್ಲಿ ಸಂಪೂರ್ಣ ಕಾಮಗಾರಿಯನ್ನು ಮುಕ್ತಾಯಗೊಳಿಸುವಂತೆ ಸೂಚಿಸಿದರು.

ಕುಂದಾಪುರ ಶಾಸ್ತ್ರಿ ಸರ್ಕಲ್ ಕಾಮಗಾರಿ ಪ್ರಗತಿ ಬಗ್ಗೆ ಉತ್ತರಿಸಿದ ಅಧಿಕಾರಿಗಳು, ಕೋವಿಡ್ 19 ಕಾರಣದಿಂದ ಕಾರ್ಮಿಕರು ಊರಿಗೆ ತರಳಿದ್ದು, ಕಾರ್ಮಿಕರ ಸಮಸ್ಯೆಯಿಂದ ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿದ್ದು,  2 ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳಿಸುವುದಾಗಿ ತಿಳಿಸಿದರು.

   ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕ ಹಾನಿಯಾದಲ್ಲಿ ಮೆಸ್ಕಾಂ ನಿಂದ ಶೀಘ್ರದಲ್ಲಿ ಪುರ್ನ ನಿರ್ಮಾಣ ಮಾಡುವಂತೆ ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತೆ ಸಂಸದರು ಸೂಚಿಸಿದರು, ಈಗಾಗಲೇ 140 ಮಂದಿ ಗ್ಯಾಂಗ್ ಮನ್ ನೇಮಕ ಮಾಡಿಕೊಂಡಿದ್ದು, ಇನ್ನೂ 140 ಮಂದಿ ನೇಮಕ ಮಾಡಿಕೊಳ್ಳಲಾಗುವುದು ಹಾಗೂ 3  ವಾಹನಗಳನ್ನು  ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

    ಕಡಲಕೊರೆತ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದರು ಸೂಚಿಸಿದರು.

   ಕುಡಿಯುವ ನೀರು ಯೋಜನೆಯ ಕುರಿತಂತೆ ನಿಟ್ಟೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ 90% ಸಿವಿಲ್ ಕೆಲಸಗಳು ಮುಕ್ತಾಯಗೊಂಡಿದು, ಎಲೆಕ್ಟ್ರಿಕ್ ಕೆಲಸಗಳು ಬಾಕಿ ಇದ್ದು, 2 ತಿಂಗಳಲ್ಲಿ  ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

    ಪಿಎಂ ಕಿಸಾನ್ ಯೋಜನೆಯಡಿ ಜಿಲ್ಲೆಯ 134000 ರೈತರ ಖಾತೆಗಳಿಗೆ  94.86 ಕೋಟಿ ರೂಗಳ ಜಮೆ ಆಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಪ್ರದಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ವಿತರಿಸಲಾಗುವ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಿತರಿಸುವಂತೆ ಆಹಾರ ಇಲಾಖೆಯ ಅಧಿಕರಿಗಳಿಗೆ ಸಂಸದರು ಸೂಚಿಸಿದರು.

   ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾಮಾಗಾರಿಗಳನ್ನು ನಿಗಧಿತ  ಅವಧಿಯೊಳಗೆ ಪೂರೈಸುವಂತೆ ಸೂಚಿಸಿದ ಸಂಸದರು, ಸ್ವಚ್ಚ ಭಾರತ್ ಯೋಜನೆಯಡಿ ನಗರ ಪ್ರದೇಶದಲ್ಲಿನ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

 ಆತ್ಮ ನಿರ್ಭರ್ ಯೋಜನೆಯಡಿ ಸಣ್ಣ ಕೈಗಾರಿಕೆಗಳಿಗೆ ನೀಡಿರುವ ಸಾಲ ಸೌಲಭ್ಯಗಳ ಅನುಷ್ಠಾನ ಕುರಿತಂತೆ , ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ ಸಂಸದರು , ಈ ಕುರಿತು ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

     ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು,ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಜಿಪಂ ಸಿಇಓ ಪ್ರೀತಿ ಗೆಹಲೋತ್ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು