ಉಡುಪಿ (ಜೂನ್ 23 ): ಬಡಗಬೆಟ್ಟು ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ ಪ್ರವೇಶ ಆರಂಭಗೊoಡಿದ್ದು, ಪ್ರವಾಸಿಗರು, ಪರಿಸರ ಪ್ರಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ  ಆಕರ್ಷಿಸಲು ವಿವಿಧ ಯೋಜನೆಗಳನ್ನು ರೂಪಿಸುವಂತೆ ಕುಂದಾಪುರ ವಿಭಾಗದ  ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಷ್ ರೆಡ್ಡಿ  ತಿಳಿಸಿದ್ದಾರೆ.

     ಅವರು ಮಂಗಳವಾರ,ಬಡಗಬೆಟ್ಟುನಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿಸಲಾಗಿರುವ  ಸಾಲು ಮರದ ತಿಮ್ಮಕ್ಕ ಸಸ್ಯೋಧ್ಯಾನದಲ್ಲಿ ನಡೆದ , ಟ್ರೀ ಪಾರ್ಕ್ ನಿರ್ವಹಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

       ಟ್ರೀ ಪಾರ್ಕ್ ನ ವೈಶಿಷ್ಠಗಳ ಕುರಿತು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ  ಆಕರ್ಷಕ ಜಾಹೀರಾತು ಅಳವಡಿಸುವಂತೆ ತಿಳಿಸಿದ ಅವರು, ಇಲ್ಲಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು, ಪ್ರವಾಸಿ ಬಸ್ ಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಹಾಗೂ  ಹೆಚ್ಚಿನ ಸಂಖ್ಯೆಯಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವಂತೆ ಆಶೀಷ್ ಶೆಟ್ಟಿ  ತಿಳಿಸಿದರು.

     ಟ್ರೀ ಪಾರ್ಕ್ನಲ್ಲಿ ಶೌಚಾಲಯ ಸೇರಿದಂತೆ ಅಗತ್ಯವಿರುವ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಂತೆ  ಸೂಚಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ,  ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಹಾಗೂ ಪಾರ್ಕ್ ನಲ್ಲಿ ಪೋಟೋ ಮತ್ತು ವೀಡಿಯೋ ಶೂಟಿಂಗ್ ಮಾಡುವವರಿಂದ ನಿಗಧಿತ ಶುಲ್ಕ ಪಡೆಯುವಂತೆ ತಿಳಿಸಿದರು.

      ಕೋರೊನಾ ಕಾರಣದಿಂದ ಪ್ರವಾಸಕ್ಕೆ ಹೋಗುವುದನ್ನು ತಪ್ಪಿಸಿಕೊಂಡವರು, ಉಡುಪಿಯಲ್ಲಿಯೇ ಇರುವ ಈ ಸುಂದರ ಟ್ರೀ ಪಾರ್ಕ್ ಗೆ ಭೇಟಿ ನೀಡುವ ಮೂಲಕ ಪ್ರಕೃತಿಯೊಂದಿಗೆ ಬೆರೆತು, ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಬಹುದಾಗಿದೆ, ಶುದ್ದ ವಾತಾವರಣದಲ್ಲಿ ಓಡಾಡುವುದರಿಂದ , ಒತ್ತಡಗಳಿಂದ ಮುಕ್ತರಾಗಿ , ಮನಸ್ಸಿಗೆ ಉಲ್ಲಾಸ ಪಡೆಯಬಹುದಾಗಿದೆ ಎಂದು ಡಿಎಫ್‌ಓ ಆಶೀಷ್ ಶೆಟ್ಟಿ  ತಿಳಿಸಿದರು.

       ಟ್ರೀ ಪಾರ್ಕ್ ನ ಸಿಬ್ಬಂದಿಗಳು ಹೆಚ್ಚು ಶ್ರಮ ವಹಿಸಿ ಉತ್ತಮವಾಗಿ ಕರ‍್ಯ ನಿರ್ವಹಿಸುತ್ತಿದ್ದು, ಇದರಿಂದ ಪಾರ್ಕ್ ನ ನಿರ್ವಹಣೆ ಉತ್ತಮವಾಗಿದೆ ,  ಅವರಿಗೆ ಪ್ರೋತ್ಸಾಹ ಭತ್ಯೆ ನಿಗದಿ ಪಡಿಸಬೇಕೆಂದು ಸಾಮಾಜಿಕ ಅರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ  ಚಂದ್ರಣ್ಣ ಸಲಹೆ ನೀಡಿದರು.

     ಬಡಗಬೆಟ್ಟು ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ ಇಡೀ ರಾಜ್ಯಕ್ಕೇ ಮಾದರಿ ಟ್ರೀ ಪಾರ್ಕ್ ಆಗಿದ್ದು,  ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ, ಉಡುಪಿ ಜಿಲ್ಲೆಯ ಎಲ್ಲಾ ಶಾಲೆಗಳ ಮಕ್ಕಳಿಗೆ  ಪಾರ್ಕ್ ಗೆ ಬೇಟಿ ನೀಡಲು ಶಿಕ್ಷಣ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ  ಪ್ರವಾಸೋದ್ಯಮ ಇಲಾಖೆಯಿಂದ  ಅಗತ್ಯ ಸಹಕಾರ ಪಡೆಯುವಂತೆ ಅಧಿಕಾರಿಗಳಿಗೆ  ಆಶೀಶ್ ರೆಡ್ಡಿ ತಿಳಿಸಿದರು. ಟ್ರೀ ಪಾರ್ಕ್ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಹಾಗೂ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಪರ್ಡ್ ಲೋಬೋ  ಪ್ರಾಸ್ತವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು.

     ಸಭೆಯಲ್ಲಿ ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತಾರಾಮ ಶೆಟ್ಟಿ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ನಾಯಕ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ , ಸಿಆರ್‌ಝಡ್ ಅಧಿಕಾರಿ ಸವಿತಾ, ಎಸ್.ಡಿ.ಎಂ ಮೆಡಿಕಲ್ ಕಾಲೇಜಿನ ಪ್ರೊಫೆಸರ್  ಡಾ| ಚೈತ್ರಾ ಹೆಬ್ಬಾರ್ , ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಅರಣ್ಯ ಸಿಬ್ಬಂದಿಗಳು ಹಾಜರಿದ್ದರು.