ಉಡುಪಿ : ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್-19 ಪಾಸಿಟಿವ್ ಪ್ರಕರಣಗಳು  ದಿನೇ ದಿನೇ ಹೆಚ್ಚಿನ ದಾಖಲಾಗುತ್ತಿದ್ದು , ಸಾರ್ವಜನಿಕರು ವಿವಿಧ ಅನಾನುಕೂಲಗಳ ನಡುವೆಯೇ , ಜಿಲ್ಲಾಧಿಕಾರಿ ಕಚೇರಿಯಲ್ಲಿನ ವಿವಿಧ ಕಾರ್ಯಗಳಿಗಾಗಿ ದೂರದ ಊರುಗಳಿಂದ ಸ್ವಂತ ವಾಹನ ಹಾಗೂ ಬಸ್ಸುಗಳ ಮೂಲಕ ಜಿಲ್ಲಾಧಿಕಾರಿಯವರ ಕಛೇರಿಗೆ ಆಗಮಿಸುತ್ತಿದ್ದು, ಇವರೆಲ್ಲರ ಅನುಕೂಲಕ್ಕಾಗಿ ಜಿಲ್ಲಾಡಳಿತ ಅತ್ಯಂತ ಸರಳ ಮತ್ತು ತ್ವರಿತ ಸೇವೆ ನೀಡುವ ನೂತನ ಯೋಜನೆಯನ್ನು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ನೇತೃತ್ವದಲ್ಲಿ ಜಾರಿಗೊಳಿಸಲಾಗಿದೆ.

       ಉಡುಪಿ ಜಿಲ್ಲೆಯ ಸಾರ್ವಜನಿಕರು ತಮ್ಮ ಮನೆಯಲ್ಲಿಯೇ ಕುಳಿತು  ಜಿಲ್ಲಾಧಿಕಾರಿ ಕಚೇರಿಯಲ್ಲಿನ ತಮ್ಮ ಕೆಲಸಗಳನ್ನು  ದೂರವಾಣಿ ಅಥವಾ ವ್ಯಾಟ್ಸಪ್ , ಇಮೇಲ್ ಮೂಲಕ ಪಡೆಯುವ  ವಿನೂತನ ಯೋಜನೆ ಇದಾಗಿದ್ದು, ಸಾರ್ವಜನಿಕರಿಗೆ ಈ ಸೇವೆ ಒದಗಿಸಲು ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ.

        ಸಾರ್ವಜನಿಕರು ತಮಗೆ ಆಗಬೇಕಾದ ಕೆಲಸ-ಕಾರ್ಯಗಳ ಬಗ್ಗೆ ಹಾಗೂ ಈಗಾಗಲೇ ಚಾಲನೆಯಲ್ಲಿರುವ ಅವರಿಗೆ ಸಂಬoಧಿತ ಕಡತ ಯಾ ಅವರ ಮನವಿ, ಅರ್ಜಿಗಳ ಬಗ್ಗೆ ಪ್ರಸ್ತುತ ಯಾವ ಹಂತದಲ್ಲಿದೆ, ಮುಂತಾದವುಗಳನ್ನು ವಿಚಾರಿಸಲು ದೂರವಾಣಿ ದೂರವಾಣಿ ಸಂಖ್ಯೆ: 0820-2574931, 0820-2571500 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಲು ಸಾರ್ವಜನಿಕರಿಗೆ ಜಿಲ್ಲಾಡಳಿತವು ಅವಕಾಶವನ್ನು ಕಲ್ಪಿಸಿದೆ.  

     ಅಗತ್ಯದ ಕೆಲಸ ಹಾಗೂ ತುರ್ತು ಮನವಿ, ಅರ್ಜಿಗಳನ್ನು ಸಲ್ಲಿಸಬೇಕಾಗಿದ್ದಲ್ಲಿ ಅದಕ್ಕೆ ಸಂಬoಧಿಸಿದ ಅಗತ್ಯ ದಾಖಲೆಗಳೊಂದಿಗೆ ಇಮೇಲ್ ವಿಳಾಸ udupidc.helpline@gmail.com, ಅಥವಾ ವ್ಯಾಟ್ಸಪ್ ಸಂಖ್ಯೆ 98808 31516 ನಂಬರಿಗೆ ಸಲ್ಲಿಸಬಹುದಾಗಿದೆ.   ಆದ್ದರಿಂದ ಸಾರ್ವಜನಿಕರು ಜಿಲ್ಲಾಧಿಕಾರಿಯವರ ಕಛೇರಿಗೆ ಭೇಟಿ ನೀಡದೇ ಮೇಲೆ ತಿಳಿಸಿರುವ ವ್ಯವಸ್ಥೆಗಳನ್ನು ಸದುಪಯೋಗಪಡಿಸುವಂತೆ ತಿಳಿಸಿದ್ದಾರೆ.

      ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಸಲುವಾಗಿ ಜಿಲ್ಲೆಯ ಕೆಲವೊಂದು ಪ್ರದೇಶಗಳಲ್ಲಿ ಕಾಂಟೈನ್ಮೆoಟ್ ಝೋನ್‌ಗಳನ್ನು ಮಾಡಿ ಅದರ ಸುತ್ತಲಿನ ಕೆಲವೊಂದು ಪ್ರದೇಶಗಳನ್ನು ನಿಬಂರ್ಧಿಸಲಾಗಿದೆ.  ಇಂತಹ ಪ್ರದೇಶಗಳಲ್ಲಿನ ನಿರ್ಬಂಧಗಳು ಹಾಗೂ ದೂರದ ಊರುಗಳಿಂದ ಬರುವ ಸಾರ್ವಜನಿಕರಿಗಾಗುವ ಅನಾನುಕೂಲಗಳು ,ಈ ನೂತನ ಯೋಜನೆ ಮೂಲಕ ನಿವಾರಣೆಯಾಗಲಿದ್ದು,  ಸಾರ್ವಜನಿಕರು ಜಿಲ್ಲಾಧಿಕಾರಿಯವರ ಕಚೇರಿಗಳಿಗೆ ಭೇಟಿ ನೀಡದೇ ಅವರ ಮನೆಯಲ್ಲಿ ಕುಳಿತುಕೊಂಡು ತಮಗೆ  ಅಗತ್ಯವಿರುವ ಸೇವೆಗಳನ್ನು ಪಡೆಯಬಹುದಾಗಿದೆ.

     ಅದಾಗ್ಯೂ ಅತೀ ಅಗತ್ಯ ಸಂದರ್ಭದಲ್ಲಿ ಖುದ್ದು ಭೇಟಿ ನೀಡುವುದು ಅವಶ್ಯವಾದಲ್ಲಿ ಮಾತ್ರ ಜಿಲ್ಲಾಧಿಕಾರಿಯವರ ಕಛೇರಿಗೆ ಭೇಟಿ ನೀಡಬಹುದಾಗಿದ್ದು, “ಯಾವುದೆ ಕಾರಣಕ್ಕೂ ರೋಗ ಲಕ್ಷಣವಿರುವ , ರೋಗ ಬಾಧಿತರಿಗೆ ಪ್ರವೇಶವಿಲ್ಲ” ಎಂದು   ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.