ಉಡುಪಿ : ಯುವ ಜನತೆಯು ದೇಶದ ಸಂಪತ್ತು, ಮಾದಕ ದ್ರವ್ಯಕ್ಕೆ ದಾಸರಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳದೇ ಮಾದಕ ವಸ್ತುಗಳಿಂದ ದೂರ ಉಳಿದು ಸಧೃಡ ಮತ್ತು ಆರೋಗ್ಯವಂತ  ಸಮಾಜದ ಭಾಗವಾಗಬೇಕು ಎಂದು ಹಿರಿಯಡಕ ಆರಕ್ಷಕ ಠಾಣೆ ಉಪನಿರೀಕ್ಷಕ ಸತೀಶ್ ಬಲ್ಲಾಳ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅವರು ಇತ್ತೀಚೆಗೆ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ, ಎನ್.ಎಸ್.ಎಸ್. ಘಟಕಗಳು ಮತ್ತು ಆರಕ್ಷಕ ಠಾಣೆ, ಹಿರಿಯಡಕ ಇವರ ಸಹಭಾಗಿತ್ವದಲ್ಲಿ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹಿರಿಯಡಕ ಪೋಲಿಸ್ ಠಾಣೆಯ ಪ್ರೊಬೆಷನರ್ ಪಿ.ಎಸ್.ಐ ರಾಜಶೇಖರ ವಂದಾಲಿ, ಮಾದಕವ್ಯಸನದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಸನಮುಕ್ತ ವಿದ್ಯಾರ್ಥಿ ಸಮೂಹವು ಕಾಲೇಜಿನ ಆಸ್ತಿ ಇದ್ದಂತೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುಜಯಾ ಕೆ.ಎಸ್., ಎನ್.ಎಸ್.ಎಸ್. ಯೋಜನಾಧಿಕಾರಿ ಪ್ರವೀಣ್ ಶೆಟ್ಟಿ, ಸುಭಾಷ್ ಹೆಚ್.ಕೆ., ಪೋಲಿಸ್ ಸಿಬ್ಬಂದಿಗಳಾದ ಸಂತೋಶ್, ಜಯಲಕ್ಷ್ಮಿ, ಹರೀಶ್, ಭೀಮ ಉಪಸ್ಥಿತರಿದ್ದರು.  

ಸುಜಯಾ ಕೆ.ಎಸ್. ಸ್ವಾಗತಿಸಿದರು, ಸುಭಾಷ್ ಹೆಚ್.ಕೆ. ನಿರೂಪಿಸಿದರು, ಪ್ರವೀಣ್ ಶೆಟ್ಟಿ ವಂದಿಸಿದರು.