ಉಡುಪಿ,(ಸೆಪ್ಟೆಂಬರ್, 5): "ದೇಶವನ್ನು ಸರ್ವನಾಶ ಮಾಡಲು ಬೇರೆ ದೇಶದೊಂದಿಗೆ ಯುದ್ದ ಮಾಡಬೇಕಾದ ಅವಶ್ಯಕತೆ ಇಲ್ಲ ಯಾವಾಗ ಶಿಕ್ಷಣ ಮಟ್ಟ ಕೆಳಗೆ ಹೋಗುವುದೋ ಅದೇ ನಮ್ಮ ಅಳಿವು" ಎಂದು ಉಳ್ಳಾಳದ, ಗೇರು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರವಿರಾಜ್ ಶೆಟ್ಟಿ ಹೇಳಿದರು.
ಅವರು ಸೆಪ್ಟೆಂಬರ್ 5 ರಂದು ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ, ಶಿವಮೊಗ್ಗ, ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೃಷಿ ವಿಜ್ಞಾನ ಕೇಂದ್ರದ ವಿಚಾರಣ ಸಂಕಿರಣದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ ಇದರ ಸಹ ಸಂಶೋಧನಾ ನಿರ್ದೇಶಕ ಡಾ. ಲಕ್ಮಣ, ಮಾತಾನಾಡಿ "ಡಾ. ಸರ್ವಪಲ್ಲಿ ರಾಧಕೃಷ್ಣರವರ ಜೀವನದ ಮೌಲ್ಯವನ್ನು ನಾವು ಹೇಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮರಾಗಬಹುದು ಎಂದು ಯೋಚಿಸಬೇಕು" ಎಂದರು. ಇತ್ತಿಚಿನ ದಿನದ ಶಿಕ್ಷಣದ ನ್ಯೂನತೆ ಬಗ್ಗೆ ತಿಳಿಸಿದರು. ಕೋವಿಡ್-19 2020 ಯಿಂದಾಗಿ ಶೆಕ್ಷಣಿಕ ವರ್ಷಕ್ಕೆ ಆಗಿರುವ ನಷ್ಟವನ್ನು ಹಾಗೂ ಸರ್ವಪಲ್ಲಿ ರಾಧಕೃಷ್ಣರವರ ಸಾಧನೆಯ ಬಗ್ಗೆ ಸವಿವರವಾಗಿ ತಿಳಿಸಿದರು.
ಕೆ.ವಿ.ಕೆ, ಬ್ರಹ್ಮಾವರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಧನಂಜಯ ಬಿ, ತಮ್ಮ ಜೀವನದ ಅಮೂಲ್ಯವಾದ ಶಿಕ್ಷಕರನ್ನು ನೆನೆಸಿಕೊಂಡು ಹಾಗೂ ವಿದ್ಯಾರ್ಥಿಗಳ ಗೌರವವನ್ನು ಸ್ವೀಕರಿಸುವುದು ಅಷ್ಟೇ ಒಂದು ಜವಾಬ್ದಾರಿ ಕೂಡ ಆಗಿರುತ್ತದೆಂದು ತಿಳಿಸಿದರು.
ಕೃಷಿ ಡಿಪ್ಲೋಮಾ ಮಹಾ ವಿದ್ಯಾಲಯ, ಬ್ರಹ್ಮಾವರದ, ಪ್ರಾಂಶುಪಾಲ ಡಾ. ಸುಧೀರ್ ಕಾಮತ್, ಮಾತನಾಡಿ, "ಶಾಲೆಯ ಶಿಕ್ಷಣವನ್ನು ಮುಗಿಸುವುದೇ ಕಷ್ಟವಿದ್ದ ಆ ದಿನಗಳಲ್ಲಿ ಜೀವನವನ್ನು ಒಂದು ಚಾಲೆಂಜ್ ಆಗಿ ತೆಗೆದುಕೊಂಡು ವಿದ್ಯಾರ್ಥಿವೇತನದಲ್ಲಿ ಶಿಕ್ಷಣವನ್ನು ಪಡೆದುಕೊಂಡಿರುವ ಸರ್ವಪಲ್ಲಿ ರಾಧಕೃಷ್ಣರವರ ಸರಳತೆಯನ್ನು ನೆನೆಪಿಸಿಕೊಳ್ಳಲೇಬೇಕು ಎಂದರು. ಅವರು ಫಿಲೋಸಫಿಯಲ್ಲಿ ದೊಡ್ಡ ಮೇಧಾವಿಯಾಗಿದ್ದು ಮೈಸೂರು ಮತ್ತು ಚೆನೈ ನಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾಗ ಅವರ ಉಪನ್ಯಾಸ ಕೇಳಲು ಬೇರೆ ಬೇರೆ ಸ್ಥಳಗಳಿಂದ ವಿದ್ಯಾರ್ಥಿಗಳು ಬಂದು ಕೂರುತ್ತಿದ್ದರು" ಎಂದು ತಿಳಿಸಿದರು.
ನಂತರ ಅಂತರ್ಜಾಲದ ಮುಖಾಂತರ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ, ಶಿವಮೊಗ್ಗ ಕುಲಪತಿಗಳು ಡಾ.ಎಂ.ಕೆ. ನಾಯಕ್ ಸರ್ ವಿಶ್ವ ವಿದ್ಯಾಲಯದ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ "ಬಡವನಾಗದೇ ಇನ್ನೊಬ್ಬರನ್ನು ಶ್ರೀಮಂತರಾಗಿಸುವ ಒಂದೇ ಒಂದು ಹುದ್ದೆಯೆಂದರೆ ಅದು ಶಿಕ್ಷಕ ಹುದ್ದೆ ಎಂದರು. ಒಂದು ಅದ್ಬುತವಾದ ಕೆಲಸ ಮಾಡುವ ಶಕ್ತಿ ಇರುವುದು ಒಬ್ಬ ಶಿಕ್ಷಕನಿಗೆ ಏಕೆಂದರೆ ಒಬ್ಬ ಶಿಕ್ಷಕ ಮಾತ್ರ ಸ್ಥೈರ್ಯ, ಧೈರ್ಯ, ಜ್ಞಾನ ಎಲ್ಲವನ್ನು ಕೊಡಲು ಸಾದ್ಯ ಎಂದರು. ಗುರು ಶಿಕ್ಷಕರ ಸಂಬoಧ ಹೇಗಿರಬೇಕು" ಎನ್ನುವುದನ್ನು ಉದಾಹರಣೆಯ ಮೂಲಕ ತಿಳಿಸಿದರು.
“ಪ್ರತಿ ನಿತ್ಯ ಒಂದೊoದು ವಿಷಯವನ್ನು ಯಾವಾಗ ತಿಳಿದುಕೊಳ್ಳುತ್ತೇವೋ ಆಗ ನಾವು ವಿದ್ಯಾರ್ಥಿಯಾಗುತ್ತೇವೆ ಹಾಗೆಯೇ ಯಾವಾಗ ನಮ್ಮ ಜ್ಞಾನವನ್ನು ಬೇರೆಯವರಿಗೆ ನೀಡುತ್ತೇವೆ ಆಗ ನಾವು ಶಿಕ್ಷಕರಾಗುತ್ತೇವೆ" ಎಂದು ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಬೇಸಾಯಶಾಸ್ತ್ರ ವಿಜ್ಞಾನಿಯಾದ ಡಾ. ಎನ್ ಈ ನವೀನ್ ಪ್ರಾಸ್ತಾವಿಕ ಮಾತುಗಳಾನ್ನಾಡಿದರು.
ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದ, ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಶಂಕರ್. ಎಂ, ಮಾತನಾಡಿ "ಸಾವಿತ್ರಿ ಬಾಯಿ ಪುಲ್ಲೆ ಅವರು ಹೇಗೆ ತಮ್ಮ ಗಂಡನಿoದ ಶಿಕ್ಷಣ ಪಡೆದು ಉಪನ್ಯಾಸಕಿಯಾಗಿ ಹೆಣ್ಣು ಮಕ್ಕಳಿಗೆ ಶೈಕ್ಷಣಿಕವಾಗಿ ಸಮಾನ ಹಕ್ಕು ಸಿಗುವಲ್ಲಿ ಹೋರಾಟ ನಡೆಸಿದರು". ಎಂದು ತಿಳಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ವಂದನೆಯನ್ನು ಸಲ್ಲಿಸಿದರು.
ಕಾರ‍್ಯಕ್ರಮದಲ್ಲಿ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಡಿಪ್ಲೋಮಾ ಕೃಷಿ ಮಹಾ ವಿದ್ಯಾಲಯದ ಎಲ್ಲಾ ಸಿಬ್ಬಂಧಿ ವರ್ಗದವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ.ಸುನಿಲ್ ನಿರ್ವಹಿಸಿದರು.