ಉಡುಪಿ, (ಅಕ್ಟೋಬರ್ 16): ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಮತ್ತು ಪರಂಪರಾಗತ ಕೃಷಿ ವಿಕಾಸ ಯೋಜನೆ, ಸಾಣೂರು ಇದರ ಸಂಯುಕ್ತ ಆಶ್ರಯದಲ್ಲಿ ಸಾಣೂರು ಮೂಡುಮನೆ ಉಮಾನಾಥ ಶೆಟ್ಟಿ ಮನೆ ವಠಾರದಲ್ಲಿ ಶುಕ್ರವಾರ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಕಳ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಜಯರಾಜ್ ಪ್ರಕಾಶ್, ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಯೊಬ್ಬರಿಗೂ ಪೌಷ್ಠಿಕ ಆಹಾರ ಸಿಗುವಂತಾಗಬೇಕು ಈ ನಿಟ್ಟಿನಲ್ಲಿ ಆಹಾರ ಉತ್ಪಾದನೆಯ ಪ್ರಮಾಣವನ್ನು ಅಧಿಕಗೊಳಿಸಲು ಇರುವ ವಿವಿಧ ಕಾರ್ಯಕ್ರಮಗಳು, ಉತ್ತಮ ಕೃಷಿಗೆ ಇಲಾಖಾವತಿಯಿಂದ ದೊರೆಯುವ ಸವಲತ್ತುಗಳು ಹಾಗೂ ಸಬ್ಸಿಡಿಗಳ ಕುರಿತಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದ.ಕ, ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ನರಸಿಂಹ ಕಾಮತ್ ಉತ್ತಮ ಆರೋಗ್ಯಕ್ಕೆ ಅವಶ್ಯಕವಾಗಿ ಬೇಕಾಗುವ ಪೋಷಷಕಾಂಶಗಳು, ಅವುಗಳ ಕೊರತೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಮಾತನಾಡಿ ಪಾರಂಪರಿಕ ಕೃಷಿ ವಿಧಾನಕ್ಕೆ ಹೆಚ್ಚಿನ ಮಹತ್ವ ನೀಡಲು ರೈತರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಾವರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಎನ್. ಈ ನವೀನ್, ರೈತ ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು. ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ ಧನಂಜಯ ಸ್ವಾಗತಿಸಿದರು. ಡಾ. ಸಚಿನ್ ಯು.ಎಸ್ ನಿರೂಪಿಸಿದರು. ಜ್ಞಾನದೇವ್ ವಂದಿಸಿದರು.