ಉಡುಪಿ ಮಾರ್ಚ್ 5 (ಕರ್ನಾಟಕ ವಾರ್ತೆ): ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಶ್ರವಣ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದ್ದು, ಶ್ರವಣದೋಷ ಎಂಬ ಆರೋಗ್ಯ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.

ಜಗತ್ತಿನ ಎಲ್ಲೆಡೆಯಂತೆ ನಮ್ಮ ದೇಶದಲ್ಲಿಯೂ ಶ್ರವಣೇಂದ್ರಿಯದ ಕೊರತೆ ಇದ್ದು, ಭಾರತದಲ್ಲಿ ಇದರ ಅಂದಾಜು ಪ್ರಮಾಣವು ಶೇಕಡಾ 6.3 ರಷ್ಟಿದೆ. ಇದು ಅನುವಂಶಿಕ ಕಾರಣಗಳು, ಜನನದ ಸಮಯದಲ್ಲಿ ಉಂಟಾಗುವ ತೊಡಕುಗಳು, ಕೆಲವು ಸೋಂಕುಗಳು ದೀರ್ಘಕಾಲದ ಕಿವಿ ಸೋಂಕುಗಳು, ಕಿವಿಯ ಹಾನಿಕಾರಕ ಔಷಧಿಗಳ ಬಳಕೆ, ಅತಿಯಾದ ಶಬ್ದಕ್ಕೆ ಒಳಗಾಗುವುದು ಮತ್ತು ವಯೋವೃದ್ದಿಯಿಂದ ಉಂಟಾಗಬಹುದು. ಆದರೆ ಚಿಂತಿಸಬಾರದು, ಸಾಧನಗಳು ಮತ್ತು ಸಮಯೋಚಿತ ವೈದ್ಯಕೀಯ ಸೇವೆಗಳ ಸಹಾಯದಿಂದ ಸುಲಭವಾಗಿ ತಡೆಯಬಹುದು ಮತ್ತು ನಿರ್ವಹಿಸಬಹುದು.

ಆರಂಭಿಕ ಹಂತದಲ್ಲಿ ಶ್ರವಣ ತಪಾಸಣೆ ನಡೆಸುವುದರಿಂದ, ಶ್ರವಣ ದೋಷವನ್ನು ಪತ್ತೆ ಹಚ್ಚುವುದರಿಂದ ಹಾಗೂ ಹೆಚ್ಚಿನ ನಿರ್ವಹಣೆಗಾಗಿ ಆರೋಗ್ಯ ಸಂಸ್ಥೆಗಳಿಗೆ ಸೂಚಿಸುವುದರಿಂದ, ಶ್ರವಣ ದೋಷವನ್ನು ನಿಯಂತ್ರಿಸಲು  ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.