ಉಡುಪಿ (ಸೆಪ್ಟೆಂಬರ್, 22): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕೇಂದ್ರ ಕಛೇರಿಯ ನಿರ್ದೇಶನದಂತೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಜಿಲ್ಲಾ ಮಟ್ಟದಲ್ಲಿ ಸರಳವಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದರು.

ಅವರು ಸೆಪ್ಟಂಬರ್ 16 ರಂದು ತಮ್ಮ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಅಕ್ಟೋಬರ್ 1 ರಂದು ಕುಂಜಿಬೆಟ್ಟು ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲಾಗುವುದು, ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಸಂಖ್ಯೆ 100 ಜನ ಮೀರಬಾರದು, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ 2 ದಿನ ಮುಂಚಿತವಾಗಿ ಸ್ಯಾನಿಟೈಸ್ ಮಾಡಬೇಕು, ಕಾರ್ಯಕ್ರಮದ ದಿನದಂದು ಆಗಮಿಸುವ ಹಿರಿಯ ನಾಗರಿಕರ ಥರ್ಮಲ್ ಸ್ಕ್ಯಾನ್, ಸ್ಯಾನಿಟೈಸ್, ಶುಗರ್ ಟೆಸ್ಟ್ ಮಾಡಿಸಿ ಸಭಾಂಗಣದ ಒಳ ಪ್ರವೇಶಿಸುವಂತೆ ಎಚ್ಚರ ವಹಿಸಬೇಕು ಎಂದರು.
ಕೋವಿಡ್-19ರ ಕುರಿತು ಹಿರಿಯ ನಾಗರಿಕರು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸುವಂತೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರ ಮಾಹಿತಿಯನ್ನು ಸೆಪ್ಟಂಬರ್ 29 ರ ಒಳಗೆ ಇಲಾಖೆಗೆ ಸಲ್ಲಿಸಿದಲ್ಲಿ ಅಂತವರನ್ನು ಸನ್ಮಾನಿಸುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಉಡುಪಿ ಜಿಲ್ಲಾ, ತಾಲ್ಲೂಕು ಮಟ್ಟದ ಹಿರಿಯ ನಾಗರಿಕ ಸಂಸ್ಥೆಯ ಮುಖ್ಯಸ್ಥರು, ಹಿರಿಯ ನಾಗರಿಕರ ಸಹಾಯವಾಣಿಯ ಸಿಬ್ಬಂದಿ ಉಪಸ್ಥಿತರಿದ್ದರು.