ಉಡುಪಿ: ಕರ್ನಾಟಕ ಲೋಕಾಯುಕ್ತ ಉಡುಪಿ ವಿಭಾಗದ ಪೊಲೀಸ್ ಉಪಾಧೀಕ್ಷಕರು ಸಪ್ಟೆಂಬರ್ 5 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಉಡುಪಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆರಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆಯನ್ನು ಹಮ್ಮಿಕೊಂಡಿರುತ್ತಾರೆ.

ಉಡುಪಿ ತಾಲೂಕಿನ ಯಾವುದೇ ಸರ್ಕಾರಿ ಅಧಿಕಾರಿಗಳಿಂದ ಆಗಬೇಕಾದ ಕೆಲಸದಲ್ಲಿ ವಿಳಂಬವಾಗಿದ್ದರೆ ಅಥವಾ ಅಧಿಕಾರಿಗಳು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸದಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ಯಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದರೆ ಅದರಿಂದ ತೊಂದರೆಗೊಳಗಾದ ಸಾರ್ವಜನಿಕರು ಸದ್ರಿ ದಿನದಂದು ಉಡುಪಿ ತಾಲೂಕು ಕಚೇರಿಗೆ ಆಗಮಿಸಿ ತಮ್ಮ ದೂರನ್ನು ಸಲ್ಲಿಸಬಹುದಾಗಿದೆ. ಸಾರ್ವಜನಿಕರು ತಮ್ಮ ಅಹವಾಲುನ್ನು ಅರ್ಜಿ ರೂಪದಲ್ಲಿ ಸಂಬಂಧಪಟ್ಟ ದಾಖಲಾತಿಗಳ ಪ್ರತಿಯೊಂದಿಗೆ ತ್ರಿ ಪ್ರತಿಯಲ್ಲಿ ತರುವುದು. ಸಭೆಗೆ ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಾಗಲಿದ್ದು, ಸ್ಥಳದಲ್ಲೇ ಇತ್ಯರ್ಥ ಪಡಿಸಬಹುದಾದ ದೂರುಗಳನ್ನು ಅಲ್ಲಿಯೇ ಇತ್ಯರ್ಥಪಡಿಸಲಾಗುವುದು. ಉಳಿದಂತೆ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದೂರು ಅರ್ಜಿಯ ನಮೂನೆ 1 ಮತ್ತು 2 ನ್ನು ಸ್ಥಳದಲ್ಲಿ ವಿತರಿಸಲಾಗುವುದು.

ಆಡಳಿತದಲ್ಲಿ ದುರಾಡಳಿತವನ್ನು ಹೋಗಲಾಡಿಸಿ, ಪಾರದರ್ಶಕತೆಯನ್ನು ತರುವುದರ ಮೂಲಕ ಜನತೆಯ ಕುಂದುಕೊರತೆಗಳನ್ನು ನಿವಾರಿಸುವುದೇ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಗುರಿ ಹಾಗೂ ಈ ಸಭೆಯ ಉದ್ದೇಶವಾಗಿರುತ್ತದೆ. ಆದರೆ ಯಾವುದೇ ದುರುದ್ದೇಶದಿಂದ ಕೂಡಿದ ದೂರುಗಳನ್ನಾಗಲಿ, ವ್ಯರ್ಥ ವಾಗ್ವಾದಗಳನ್ನಾಗಲಿ, ಅನಾಮಧೇಯ ಅರ್ಜಿಗಳನ್ನಾಗಲಿ, ನ್ಯಾಯಾಲಯದಲ್ಲಿ ಈಗಾಗಲೇ ವಿಚಾರಣೆಯಲ್ಲಿರುವ ದೂರುಗಳನ್ನಾಗಲಿ ಮಾನ್ಯ ಮಾಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಉಪಾಧೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ: 0820-2527770, 9886542369, ಪೊಲೀಸ್ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ: 0820-2536661, 9481518144 ನ್ನು ಸಂಪರ್ಕಿಸುವಂತೆ ಉಡುಪಿ ತಹಶೀಲ್ದಾರ್ ಪ್ರದೀಪ್ ಎಸ್. ಕುರುಡೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.