ಉಳ್ಳಾಲ: ನಾಶವಾಗುತ್ತಿರುವ ನದಿ ಸಂಪನ್ಮೂಲಗಳನ್ನು ಸಂರಕ್ಷಿಸಿ, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಪ್ರಯತ್ನಕ್ಕಾಗಿ ಮುಂದಾಗಿರುವ ಉಳ್ಳಾಲ ಉಳಿಯ ಪರಿಸರದ ನಿವಾಸಿಗಳು, ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಧಾರ್ಮಿಕ ಮುಖಂಡರುಗಳ ನೇತೃತ್ವದಲ್ಲಿ ಜನಜಾಗೃತಿಗಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ನದಿ ಪರಿಸರದಲ್ಲಿ ಹಮ್ಮಿಕೊಂಡಿರುತ್ತಾರೆ.
ಉಳ್ಳಾಲ ನಗರಸಭಾ ವ್ಯಾಪ್ತಿಗೆ ಒಳಪಟ್ಟ ಉಳಿಯ, ಹೊಯಿಗೆ, ಮಾರ್ಗತ್ತಲೆ, ಕಟ್ಟತ್ತಲೆ, ಕಕ್ಕೆತೋಟ, ಪಾಂಡೆಲ್ಪಕ್ಕ, ಕೊಟ್ಟಾರ, ಕೋಡಿ, ಹಾಗೂ ಕೋಟೆಪುರ ಮುಂತಾದ ನದಿ ತೀರ ಪ್ರದೇಶಗಳನ್ನು ಕೇಂದ್ರವಾಗಿಟ್ಟು ಸ್ವಚ್ಛತಾ ಕಾರ್ಯಕ್ರಮವು ಹಂತ ಹಂತವಾಗಿ ಮುಂದುವರೆಯಲಿದೆ.
ದಿನಾಂಕ 24-11-2019, ಭಾನುವಾರ ಅಪರಾಹ್ನ 2:30 ರಿಂದ ಸಂಜೆ 5:30 ರ ತನಕ ನಡೆಯಲಿರುವ ಮೊದಲ ಹಂತದ ಸ್ವಚ್ಛತಾ ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಬಾಲ ಮಾರುತಿ ವ್ಯಾಯಾಮ ಶಾಲೆ, ಮಂಜನಕುದ್ರು ಪರಿಸರದಲ್ಲಿ ಸ್ವಯಂ ಸೇವಕರು ಸೇರಿಕೊಂಡು ಯೋಜಿತ ತಂಡಗಳ ರೂಪದಲ್ಲಿ, ಸಮಿತಿಯು ಸೂಚಿಸುವ ವಿವಿಧ ಪ್ರದೇಶಗಳಲ್ಲಿ ಸ್ಚಚ್ಛತಾ ಕಾರ್ಯಕ್ರಮವು ಹಾದು ಹೋಗಿ. ಕೊನೆಯಲ್ಲಿ ಉಳಿಯ ಕೋಳಿಕಟ್ಟ ಮೈದಾನದಲ್ಲಿ ಲಘು ಉಪಹಾರದೊಂದಿಗೆ ಪ್ರಥಮ ಹಂತದ ಶ್ರಮದಾನವು ಸಮಾರೋಪಗೊಳ್ಳಲಿದೆ.
ಪ್ರಸ್ತುತ ನದಿ ಪ್ರದೇಶಗಳಲ್ಲಿರುವ ನಾಗರಿಕರು, ಸರಕಾರೇತರ ಸಂಘ-ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಸೇರಿ ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟ ವ್ಯವಸ್ಥೆಯಡಿ ಒಂದಾಗಿದ್ದು, ನದಿ ಸಂರಕ್ಷಣೆಗಾಗಿ ನಿರಂತರ ಅಭಿಯಾನವನ್ನು ಕೈಗೆತ್ತಿಗೊಂಡಿದ್ದಾರೆ.
ಒಕ್ಕೂಟವು ಈಗಾಗಲೇ ಸಾರ್ವಜನಿಕ ಸಹಿ ಸಂಗ್ರಹದೊಂದಿಗೆ ಮಾನ್ಯ ಜಿಲ್ಲಾಧಿಕಾರಿಗಳು, ಪರಿಸರ ಇಲಾಖೆ ನಿರ್ದೇಶಕರು, ಉಳ್ಳಾಲ ನಗರಸಭೆ ಪೌರಾಯುಕ್ತರು ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳಿಗೆ ಮನವಿ ಪತ್ರವನ್ನು ನೀಡಿ ಮಾತುಕತೆ ನಡೆಸಿದ್ದಾರೆ. ರಾಮಕೃಷ್ಣ ಮಠ ಸ್ವಚ್ಛ ಮಂಗಳೂರು ವಿಭಾಗವು ಈ ನಿಟ್ಟಿನಲ್ಲಿ ಸಮರ್ಪಕವಾಗಿ ಸಹಕರಿಸುತ್ತಾ ಬಂದಿದ್ದು, ಪರಿಸರ, ಜೀವಿಪರಿಸ್ಥಿತಿ, ಅರಣ್ಯ ಇಲಾಖೆಯ ನಿರ್ದೇಶಕರು ಈ ಬಗ್ಗೆ ನಗರ ಸಭೆಗೆ ನೋಟೀಸು ಜಾರಿ ಮಾಡಿರುತ್ತಾರೆ ಹೊರತಾಗಿ, ಅಧಿಕಾರಿ ವರ್ಗದವರ ನಿರ್ಲಕ್ಷತೆಗೆ ನಿರಾಶರಾಗದೆ ನಾಗರಿಕರು ಜನಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಆ ಮೂಲಕ ಪಕೃತಿದತ್ತ ನದಿ ಸಂಪನ್ಮೂಲಗಳನ್ನು ಸಂರಕ್ಷಿಸಲು ಮುಂದಾಗಿದ್ದಾರೆ........