ಬರಿಗಣ್ಣಿಗೆ ಕಾಣದ ವೈರಿ ಕೊವಿಡ್- 19 ನಿಂದ ವಿಶ್ವವೇ ನಲುಗಿಹೋಗಿದೆ. ಬೆಳಕು ಹರಿಯುವ ಮೊದಲೇ ತುಂಬುತ್ತಿದ್ದ ರಸ್ತೆಗಳು ಈಗ ಖಾಲಿಯಾಗಿವೆ. ಮಕ್ಕಳಿಲ್ಲದೆ ಶಾಲಾಕಾಲೇಜುಗಳು ಮೌನವಾಗಿ ವಿಷಾದದ ಛಾಯೆಯಂತಿವೆ. ಈ ಮಧ್ಯೆ ಸಹಪಾಠಿಗಳೊಂದಿಗೆ ತಮಾಷೆಯಿಂದ ಕಳೆಯುತ್ತಿದ್ದ ಆ ಹಾಸ್ಟೆಲ್ ದಿನಗಳ ನೆನಪು ಪದೇಪದೇ ಕಾಡುತ್ತಿದೆ.
ಹಾಸ್ಟೆಲ್ ಜೀವನ ಎಂದರೆ ಕಾಲೇಜು ದಿನಗಳಂತೆಯೇ ಜೀವನವಿಡೀ ನೆನಪಾಗಿ ಉಳಿಯುವ ಒಂದು ಅನನ್ಯ ಅನುಭವ. ಹಾಸ್ಟೆಲ್ ಎಂದರೆ ಮನೆಯಿಂದ ದೂರವಿದ್ದು, ವಾತಾವರಣಕ್ಕೆ ಹೊಂದಿಕೊಂಡು ಬಾಳಬೇಕಾದ ದಿನಗಳು ಎಂಬುದು ಸಾಮಾನ್ಯ ಕಲ್ಪನೆ. ಅದು ನಿಜವೂ ಕೂಡ. ಹಾಸ್ಟೆಲ್ ಎಂದರೆ ಮೊದಲಿಗೆ ನೆನಪಾಗುವುದೇ ಹೊಸ ಪ್ರಪಂಚ, ಹೊಸ ಮನೆ, ಹೊಸ ಜನ. ಆದರೆ ಸಮಯಕಳೆದಂತೆ ಆ ಹೊಸ ಪ್ರಪಂಚ ತನ್ನ ಪ್ರಪಂಚ, ಆ ಹೊಸ ಮನೆ ತನ್ನ ಮನೆ, ಆ ಹೊಸ ಜನ ತಮ್ಮವರೇ ಎಂದೆನಿಸಲು ಪ್ರಾರಂಭವಾಗುತ್ತದೆ.
ಒಮ್ಮಿಂದೊಮ್ಮೆಗೆ ಆರೋಗ್ಯದಲ್ಲಿ ಏರುಪೇರಾದಾಗ ತಕ್ಷಣ ಬಂದು ವಿಚಾರಿಸುವ, ಮಾಡಿದ ಅಡುಗೆಯಲ್ಲಿ ಉಪ್ಪುಖಾರ ಸರಿಯಾಗಿದೆಯಾ ಎಂದು ಅಮ್ಮನ ರೂಪದಲ್ಲಿ ಕಾಣುವ ಅಡುಗೆ ಸಿಬ್ಬಂದಿಗಳು, ಮನೆಯ ನೆನಪಾಗಿ ಏಕಾಂಗಿಯಾಗಿ ಕುಳಿತಾಗ ಸಮಾಧಾನದ ಮಾತುಗಳನ್ನಾಡೋ ಅಕ್ಕನ ರೂಪದ ಸೀನಿಯರ್ಸ್, ಊಟ, ಕಲಿಕೆ, ನಿದ್ದೆ, ತಮಾಷೆ, ದುಃಖದ ಜೊತೆಗಿರುವ ಸಹಪಾಠಿಗಳೊಂದಿಗೆ ಕಳೆದ ಆ ಕ್ಷಣಗಳು ನೆನಪಾಗಿ ಕಾಡುತ್ತಿವೆ.
ಹಾಸ್ಟೆಲ್‌ನ ಶಿಸ್ತು, ನಿಯಮಗಳು ಕಠಿಣ ಎಂದೆನಿಸಬಹುದು, ಆದರೆ ಅಲ್ಲಿ ಸೃಷ್ಟಿಯಾಗುವ ಕೆಲವೊಂದು ಸನ್ನಿವೇಶಗಳು ನಮ್ಮ ಜೀವನದಲ್ಲಿ ಹೊಸ ಪಾಠ ಕಲಿಸುತ್ತವೆ. ನಮ್ಮ ಜೀವನವನ್ನು ಹೇಗೆ ರೂಪಿಸಕೊಳ್ಳಬಹುದೆಂಬ ಅನುಭವ ಸಿಗುತ್ತದೆ. ನೋವು, ನಲಿವುಗಳನ್ನು ಸಮಾನವಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ. ಈ ಕೊವಿಡ್ ಆದಷ್ಟು ಬೇಗ ತೊಲಗಲಿ ಮತ್ತೊಮ್ಮೆ ವಿದ್ಯಾರ್ಥಿ ಜೀವನ ನದಿಯಂತೆ ಹರಿಯಲಿ ಎಂಬುದೇ ನನ್ನ ಹಾರೈಕೆ.
ಶಿಲ್ಪಾಶ್ರೀ
ಪ್ರಥಮ ಬಿ.ಎ ಪತ್ರಿಕೋದ್ಯಮ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು.