ವರದಿ : ಈಶ್ವರ್ ಮುಂಬಾಯಿ

ಮುಂಬಯಿಮಹಾನಗರದ ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಮಾಜಿ ಅಧ್ಯಕ್ಷ, ಭಾರತ್ ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷ ಹಾಗೂ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾಜಿ ಉಪಾಧ್ಯಕ್ಷ ಜಯ ಸಿ ಸುವರ್ಣರು ಸೆಪ್ಟೆಂಬರ್ 21 ರಂದು ದೈವಾಧೀನರಾಗಿದ್ದು  ಸೆಪ್ಟೆಂಬರ್ 25 ರಂದು ಸಂಜೆ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷರೂ ಆದ ತೋನ್ಸೆ ಜಯಕೃಷ್ಣ ಎ  ಶೆಟ್ಟಿಯವರ ನೇತೃತ್ವದಲ್ಲಿ ವೆಬಿನಾರ್ ಮೂಲಕ ನುಡಿ ನಮನ ಸಭೆಯು ನಡೆಯಿತು.

ಮುಂಬಯಿ ಮಹಾನಗರದಲ್ಲಿ ನಾಡಿನ ಕರಾವಳಿಯ ಮೂರು ಜಿಲ್ಲೆಗಳಾದ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ವಿವಿಧ ಜಾತಿ ಬಾಂಧವರು ಶತಮಾನದ ಹಿಂದೆಯೇ ತಮ್ಮ ತಮ್ಮ ಜಾತೀಯ ಸಂಘಟನೆಯನ್ನು ಕಟ್ಟಿ ಮುಂಬಯಿಯಲ್ಲಿ ಮಾತ್ರವಲ್ಲ ನಾಡಿನಲ್ಲಿಯೂ ಸಮಾಜ ಸೇವೆ ಮಾಡುತ್ತಾ ಬರುವುದರೊಂದಿಗೆ ನಾಡಿನ ಹಾಗೂ ಅವರವರ ಜಾತೀಯ ಸಂಸ್ಕೃತಿಯನ್ನು ಹೊರನಾಡಿನಲ್ಲಿಯೂ ಉಳಿಸಿ ಬೆಳೆಸುತ್ತಾ ಬಂದಿರುವರು. ಮಹಾನಗರದ ವಿವಿಧ ಜಾತೀಯ ಸಂಘಟನೆಗಳ ಮುಖಂಡರು, ರಾಜಕಾರಣಿಗಳು, ಧಾರ್ಮಿಕ ನೇತಾರರು ಹಾಗೂ ವಿವಿಧ ಗಣ್ಯರ ಬೆಂಬಲದೊಂದಿಗೆ, ಕರಾವಳಿಯ ಈ ಜಿಲ್ಲೆಗಳ ಪ್ರಗತಿಗಾಗಿ ಕಳೆದ ಹಲವಾರು ವರ್ಷಗಳಿಂದ ಯಶಸ್ವಿ  ಹೋರಾಟ ನಡೆಸುತ್ತಾ ಬಂದಿರುವ, ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ.

ಆದಿಯಿಂದಲೇ ಸಮಿತಿಯ ಉಪಾಧ್ಯಕ್ಷರಾಗಿ ಸಮಿತಿಯ ಬೆಳವಣಿಗೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಜನಪ್ರಿಯ ಸಮಾಜ ಸೇವಕ, ಉದ್ಯಮಿ ಜಯ ಸಿ. ಸುವರ್ಣರ ಬಗ್ಗೆ ಹಲವಾರು ವರ್ಷಗಳನ್ನು ಅವರೊಂದಿಗೆ ಕಳೆದ ಸಮಿತಿಯ ಉಪಾಧ್ಯಕ್ಷ, ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು ಜಯ ಸುವರ್ಣರ ವ್ಯಕ್ತಿತ್ವದ ಬಗ್ಗೆ, ಅವರ ಸಾಧನೆ ಬಗ್ಗೆ ಮಾತನಾಡುತ್ತಾ ಜಯ ಸುವರ್ಣರು ಸಮಾಜ ಮೆಚ್ಚುವ ಉತ್ತಮ ಕೆಲಸ ಮಾಡಿ ದೇವರ ಪಾದ ಸೇರಿದ್ದಾರೆ. ನಾನು ನನ್ನ ಜೀವನದ ಹೆಚ್ಚಿನ ಸಮಯವನ್ನು ಅವರೊಂದಿಗೆ ಕಳೆದಿರುವೆನು. ನಮ್ಮ ಸಮಿತಿಗೆ 2000 ದಲ್ಲಿ ಅವರು ಸೇರಿದ್ದು ಸಮಿತಿಯ ಉಪಾಧ್ಯಕ್ಷರಾಗಿ ಸಮಿತಿಗೆ ಅವರಿಂದ ಬಹಳ ಪ್ರಯೋಜನವಾಗಿದೆ. ಸಮಾಜ ಸೇವೆಯ ಬಗ್ಗೆ ಅವರಿಂದ ನಾನು ಬಹಳಷ್ಟು ಕಲಿತಿರುವೆನು. ಅವರು ಬಾರತ್ ಬ್ಯಾಂಕಿನಲ್ಲಿ 32 ವರ್ಷಗಳ ಸೇವೆ ಮಾಡಿದ್ದು 18 ವರ್ಷಗಳ ಕಾಲ ಬ್ಯಾಂಕಿನ ಅಧ್ಯಕ್ಷರಾಗಿದ್ದರು. ಕರ್ನಾಟಕ ಸರಕಾರದಿಂದ ಪ್ರಶಸ್ತಿ ಪಡೆದ ಜಯ ಸುವರ್ಣರಿಂದ ಇನ್ನೂ ಸಮಾಜ ಸೇವೆ ಆಗಬಹುದಿತ್ತು. ಕೊರೋನಾವನ್ನು ಲೆಕ್ಕಿಸದೆ ಅವರ ಅಂತಿಮ ದರ್ಶನಕ್ಕೆ ಸಾವಿರಾರು ಜನರು ಸೇರಿದ್ದು ಇದು ಅವರ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿದೆ ಎಂದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಎ  ಶೆಟ್ಟಿಯವರು ಜಯ ಸಿ ಸುವರ್ಣರಿಗೆ ಸಂತಾಪವನ್ನು ಸೂಚಿಸುತ್ತ ಜಯ ಸಿ ಸುವರ್ಣರು ಬಿಲ್ಲವ ಸಮಾಜದಲ್ಲಿ ಕೋಟಿ ಚೆನ್ನಯರಂತೆ ಹಾಗೂ ನಾರಾಯಣ ಗುರುಗಳಂತೆ ಇತಿಹಾಸ ನಿರ್ಮಿಸಿದ್ದಾರೆ. ಇಂತಹ ಸಂಘಟಕ್ಕ ಇನ್ನು ಹುಟ್ಟಲು ಅಸಾಧ್ಯ. ಅವರು ಹೇಳಿದಂತೆ ಬಾರತ್ ಬ್ಯಾಂಕಿನ ನೂರ ಎರಡು ಶಾಖೆಗಳನ್ನು ಮಾಡಿ ಇಹ ಲೋಕ ತ್ಯಜಿಸಿದ್ದಾರೆ. ಬಿಲ್ಲವರ ಅಸೋಷಿಯೇಶನಿನಲ್ಲಿ ನಡೆದ 144 ನೇ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮಕ್ಕೆ ನಾನು ಹೋಗಿದ್ದು ನಾರಾಯಣ ಗುರುಗಳ ತತ್ವಕ್ಕೆ ಮಾರು ಹೋಗಿರುವೆನು. ಜಯ ಸುವರ್ಣರ ಪ್ರಸಿದ್ದಿಯಲ್ಲಿ ಒಂದು ವಿಶೇಷತೆಯಿದೆ.  ಜಯ ಸುವರ್ಣರು ಮತ್ತು ಮಾಜಿ ಕೇಂದ್ರ ಸಚಿವ ಜನಾರ್ಧನೆ ಪೂಜಾರಿಯವರು ರಾಮ ಲಕ್ಷಣರಂತೆ. ಎಲ್ಲಾ ಜಾತೀಯ ಸಂಘಗಳ ಅಧ್ಯಕ್ಷರಿರುವ ನಮ್ಮ ಸಮಿತಿಯ ಉಪಾಧ್ಯಕ್ಷರಾಗಿದ್ದ ಜಯ ಸುವರ್ಣರು ನಾಗಾರ್ಜುನದಂತಹ ಕೆಲವು ಸಮಸ್ಯೆಗಳನ್ನು ಬಗೆಯರಿಸುವಲ್ಲಿ ನಮ್ಮ ಸಮಿತಿಗೆ ಆನೆ ಬಲವನ್ನು ನೀಡಿರುವರು. ಜಿಲ್ಲೆಗಳ ಅನೇಕ ರಾಜಕಾರಿಣಿಗೌ ಗೌರವಿಸುವಂತಹ ವ್ಯಕ್ತಿತ್ವವನ್ನು ಹೊಂದಿದ ಜಯ ಸಿ ಸುವರ್ಣರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂಬುದಾಗಿ ಪ್ರಾರ್ಥಿಸೋಣ ಎಂದರು.

ಪ್ರಾರಂಭದಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್ ಅವರು ಶ್ರದ್ದಾಂಜಲಿ ಸಲ್ಲಿಸುತ್ತಾ ಜಯ ಸುವರ್ಣರು ಮುಖಂಡರುಗಳಲ್ಲಿ ಮುಖಂಡರು. ಅವರು ನಮ್ಮೊಂದಿಗೆಲ್ಲ ಅನ್ನುವುದು ನಂಬಲಾಗುದಿಲ್ಲ. ಜಾತಿ ಬೇದ ಮರೆತು ಎಲ್ಲಾ ಸಂಘಟನೆಗಳಲ್ಲಿ ಸಮಾನತೆಯಿಂದ ನಡೆಯುತ್ತಿದ್ದ ಮಹಾನ್ ವ್ಯಕ್ತಿ. ಭಾರತ್ ಬ್ಯಾಂಕಿನ ಅಭಿವೃದ್ದಿಗೆ ಅವರ ಕೊಡುಗೆ ಅಪಾರ. ಅವರಿಗೆ ಸಮಿತಿಯ ಪರವಾಗಿ ಮನದಾಳದ ಶ್ರದ್ದಾಂಜಲಿ ಅರ್ಪಿಸುತ್ತಿದ್ದೇವೆ ಎಂದರು.
 
ಈ ಸಂದರ್ಭದಲ್ಲಿ ಜಗನ್ನಾಥ ಅಧಿಕಾರಿ, ಅಡ್ವೋಕೇಟ್ ಪ್ರಕಾಶ್ ಎಲ್ ಶೆಟ್ಟಿ, ಸಮಿತಿಯ ಮಾಜಿ ಅಧ್ಯಕ್ಷರಾದ ವಿಶ್ವನಾಥ ಮಾಡ,  ಧರ್ಮಪಾಲ ದೇವಾಡಿಗ, ಹರೀಶ್ ಕುಮಾರ್ ಶೆಟ್ಟಿ,  ಜವಾಬ್ ಅಧ್ಯಕ್ಷರಾದ ಸಿ ಎ ಐ ಆರ್ ಶೆಟ್ಟಿ, ಡಾ. ಆರ್ ಕೆ ಶೆಟ್ಟಿ,  ಹಿರಿಯ ಕಾರ್ಮಿಕ ನಾಯಕರಾದ ಫೆಲಿಕ್ಸ್ ಡಿ ಸೋಜಾ, ಸಮಿತಿಯ ಉಪಾಧ್ಯಕ್ಷರುಗಳಾದ ದನಂಜಯ ಶೆಟ್ಟಿ, ಜಿ. ಟಿ. ಆಚಾರ್ಯ, ದೇವಾಡಿಗ ಸಂಘ ಮುಂಬಯಿಯ ಅಧ್ಯಕ್ಷರಾದ ರವಿ ಎಸ್  ದೇವಾಡಿಗ, ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ್ ಕುಲಾಲ್, ವಿದ್ಯಾದಾಯಿನಿ ಸಭಾದ ಕಾರ್ಯದರ್ಶಿ ಚಿತ್ರಾಪು ಕೆ ಎಮ್. ಕೋಟ್ಯಾನ್, ಡಾ. ಪ್ರಭಾಕರ ಶೆಟ್ಟಿ, ಬೋಳ ಸಮಿತಿಯ ಗೌರವ ಕಾರ್ಯದರ್ಶಿ ಪ್ರೊಫೆಸರ್  ಶಂಕರ್ ಉಡುಪಿ, ಭಂಡಾರಿ ಸೇವಾ ಸಂಘ ಮುಂಬಯಿಯ ಅಧ್ಯಕ್ಷರಾದ ಅಡ್ವೋಕೇಟ್  ಆರ್ ಎಮ್ ಭಂಡಾರಿ ಮೊದಲಾದವರು ಮಾತನಾಡಿ ಅಗಲಿದ ಮಹಾ ನಾಯಕ, ಸಮಾಜ ಸೇವಕ ಜಯ ಸಿ ಸುವರ್ಣರಿಗೆ ಸಂತಾಪವನ್ನು ಸೂಚಿಸಿದರು.

ಮೊಗವೀರ ವ್ಯವಸ್ಥಾಪಕ  ಮಂಡಳಿ,  ಮುಂಬೈ ಇದರ ಅಧ್ಯಕ್ಷರಾದ ಕೆ  ಎಲ್ ಬಂಗೇರ ಅವರ ಅನುಪಸ್ಥಿತಿಯಲ್ಲಿ ಅವರ ಸಂತಾಪ ಸೂಚಿಸಿ ಬರೆದ ಪತ್ರವನ್ನು ಪ್ರಧಾನ ಕಾರ್ಯದರ್ಶಿಯವರು ವಾಚಿಸಿದರು.

ಸಮಿತಿಯ ಜೊತೆ ಕಾರ್ಯದರ್ಶಿ ಹ್ಯಾರಿ ಸಿಕ್ವೇರಾ ಮತ್ತಿತರು ವೆಬಿನಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಜಾಲತಾಣದಲ್ಲಿ ಸಭೆ ನಡೆಸುವರೇ ಉಡುಪಿಯ ತೇಜಸ್ವಿ ಶಂಕರ್ ಸಹಕರಿಸಿದ್ದರು.