ಮಂಗಳೂರು :- ಜೂನ್ ೨೫ರಿಂದ  ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30,835 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ  ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು.

    ಅವರು  ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್.ಎಸ್.ಎಲ್.ಸಿ - 2020 ಪರೀಕ್ಷಾ ಪೂರ್ವ ತಯಾರಿ  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ ನಿಂದ ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ  ಪ್ರವೇಶ ಪತ್ರವನ್ನು ತೋರಿಸಿ ಬಸ್‌ನಲ್ಲಿ ಪಯಣಿಸಬಹುದು,  ಜೂನ್ 25 ರಿಂದ ಜುಲೈ 4  ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು  ಜಿಲ್ಲೆಯಲ್ಲಿ ನಡೆಯಲಿದೆ ಎಂದರು.

    ದ.ಕ. ಜಿಲ್ಲೆಯಲ್ಲಿ 95 ಪರೀಕ್ಷೆ  ಕೇಂದ್ರಗಳನ್ನು ನಿಗದಿ ಪಡಿಸಲಾಗಿದೆ. ಹೆಚ್ಚುವರಿಯಾಗಿ 19 ಪರೀಕ್ಷೆ ಕೇಂದ್ರಗಳು ಕಾಯ್ದಿರಿಸಲಾಗಿದ್ದು, ಸರ್ಕಾರದ ಮಾರ್ಗಸೂಚಿಯಂತೆ  ಪತ್ರಿ ಕೊಠಡಿಗೆ 20 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮುನ್ನ ಥರ್ಮಲ್ ಸ್ಕ್ರೀನ್ ಮೂಲಕ ಪರೀಕ್ಷಿಸಲಾಗುತ್ತದೆ. ವಿದ್ಯಾರ್ಥಿಗೆ ರೋಗದ ಯಾವುದೇ ಲಕ್ಷಣ ಕಂಡು ಬಂದಿದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪ್ರತೇಕವಾದ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 102 ವಿಶ್ರಾಂತಿ ಕೊಠಡಿ ಸಿದ್ಧಪಡಿಸಲಾಗುವುದು. ಪರೀಕ್ಷೆ ಕೊಠಡಿಗಳು ಸಂಪೂರ್ಣವಾಗಿ ಸ್ಯಾನಿಟೈಸರ್‌ವಾಗಿರಬೇಕು ಎಂದು ಅವರು ಸೂಚಿಸಿದರು.

    ವಿದ್ಯಾರ್ಥಿಗಳಿಗೆ ಸ್ಕೌಟ್ ಮತ್ತು ಗೈಡ್ ಸಂಸ್ಥೆ ಹಾಗೂ ಜಿ. ಶಂಕರ್ ಕುಟುಂಬ ವತಿಯಿಂದ ಉಚಿತ ಮಾಸ್ಕ್ ನೀಡಲಾಗುತ್ತಿದೆ. ಪ್ರತೀ ಪರೀಕ್ಷಾ ಕೇಂದ್ರಕ್ಕೆ 4  ಜನ ಸ್ಕೌಟ್ ಶಿಕ್ಷಕರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಲ್ಲೇಸ್ವಾಮಿ ತಿಳಿಸಿದರು. ಕಾಸರಗೋಡಿನ ಒಟ್ಟು 345 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದು, ಇವರು ಹಾಲ್ ಟಿಕೇಟ್ ತೋರಿಸಿ ಗಡಿಯಲ್ಲಿ ಪ್ರವೇಶಿಸಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

     ದ್ವಿತೀಯ ಪಿಯುಸಿ:  ದ್ವಿತೀಯ ಪಿ.ಯು.ಸಿ. ಇಂಗ್ಲಿಷ್ ಪರೀಕ್ಷೆ ಜೂನ್ 18 ರಂದು ನಡೆಯಲಿದ್ದು, ಜಿಲ್ಲೆಯಲ್ಲಿ  26,704 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 51 ಪರೀಕ್ಷೆ ಕೇಂದ್ರಗಳನ್ನು ಗುರುತಿಸಲಾಗಿದೆ. ಸಂಬoಧಪಟ್ಟ ಅಧಿಕಾರಿಗಳು ಅಗತ್ಯವಾದ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.

   ಖಜಾನೆಯಲ್ಲಿ ಪ್ರಶ್ನೆಪತ್ರಿಕೆ ಭದ್ರತೆಯಲ್ಲಿಡಲಾಗುವುದು. ಪ್ರಶ್ನೆಪತ್ರಿಕೆಯನ್ನು ಸಾಗಾಟ ಮಾಡುವ ವಾಹನಕ್ಕೆ ಪೊಲೀಸ್ ಎಸ್ಕಾರ್ಟ್ನ ಭದ್ರತೆಯನ್ನು ನೀಡಲಾಗುವುದು, ಜಿಲ್ಲಾ ಮತ್ತು ತಾಲೂಕು ಹಂತದ ಅಧಿಕಾರಿಗಳನ್ನು ವೀಕ್ಷಕರಾಗಿ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಪರೀಕ್ಷೆಗೆ ಸಂಬoಧಿಸಿದoತೆ ಯಾವುದೇ ಲೋಪವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.

   ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಡಿಸಿಪಿ ಅರುಣಾಂಶ ಗಿರಿ, ಸಹಾಯಕ ಕಮೀಷರ್ ಮದನ್ ಮೋಹನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದರು.