ದ.ಕ. ಜಿಲ್ಲೆ:- ದ.ಕ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಳವಾಗುತ್ತಿದ್ದು, ರವಿವಾರ ಒಂದೇ ದಿನ ಬರೋಬ್ಬರಿ 97 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರವಿವಾರದಂದು ಒಟ್ಟು 178 ಮಂದಿಯ ವರದಿ ಲಭ್ಯವಾಗಿದೆ. ಈ ಪೈಕಿ 81 ಮಂದಿಯ ವರದಿ ನೆಗೆಟಿವ್ ಆಗಿದೆ. ಉಳಿದಂತೆ 97 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ನಡುವೆ ರವಿವಾರದಂದು ಜಿಲ್ಲೆಯಲ್ಲಿ ಮೂವರು ಕೊರೊನಾ ಸೋಂಕಿನಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

   ಇನ್ನು ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು 663 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ 238 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ಉಳಿದವರು ಗುಣಮುಖರಾಗಿದ್ದಾರೆ.

ಉಡುಪಿ:- ಜಿಲ್ಲೆಯಲ್ಲಿ ಮತ್ತೆ 40 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 18 ಮಂದಿ ಪುರುಷರಲ್ಲಿ, 15 ಮಂದಿ ಮಹಿಳೆಯರು ಹಾಗೂ 6 ಮಂದಿ ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

15 ಮಂದಿ ಮಹಾರಾಷ್ಟ್ರದಿಂದ, ಇಬ್ಬರು ಬೆಂಗಳೂರಿನಿಂದ ಆಗಮಿಸಿದವರಲ್ಲಿ ಸೋಂಕು ದೃಢಪಟ್ಟಿದೆ. ಇನ್ನುಳಿದಂತೆ ವೈದ್ಯರು ಸೇರಿ 6 ಮಂದಿ ಕೊರೊನಾ ವಾರಿಯರ್ಸ್‌ಗೆ ಸೋಂಕು ದೃಢಪಟ್ಟಿದೆ. ಒಬ್ಬ ಸೋಂಕಿತ ವ್ಯಕ್ತಿ ಬಾಗಲಕೋಟೆಯಿಂದ ಆಗಮಿಸಿದವರಾಗಿದ್ದಾರೆ.

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿಯಲ್ಲೂ ಪಾಸಿಟಿವ್:
ಇನ್ನು ನಿನ್ನೆ ಪರೀಕ್ಷೆ ಬರೆದಿದ್ದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿಗೂ ಸೋಂಕು ದೃಢಪಟ್ಟಿದೆ. ಈ ವಿದ್ಯಾರ್ಥಿಯ ಮನೆ ಮಂದಿಯಲ್ಲಿ ಶನಿವಾರದಂದು ಪಾಸಿಟಿವ್ ಕಂಡುಬಂದಿತ್ತು. ಬಳಿಕ ಈಕೆಯನ್ನು ಕೂಡ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಆಕೆಯ ವರದಿ ಲಭ್ಯವಾಗಿದ್ದು, ಸೋಂಕು ದೃಢಪಟ್ಟಿದೆ.

ಇನ್ನು ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 1179ಕ್ಕೆ ಏರಿಕೆಯಾಗಿದೆ. ಈ ನಡುವೆ ಇಂದು 4 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 266 ಮಂದಿಯ ಗಂಟಲ ದ್ರವ ಮಾದರಿ ವರದಿಗಳು ಬರಲು ಬಾಕಿ ಇದೆ. ಜಿಲ್ಲೆಯಲ್ಲಿ ಇಂದು 132 ಮಂದಿಯ ವರದಿ ನೆಗೆಟಿವ್ ಆಗಿದ್ದು, ಈವರೆಗೆ ಜಿಲ್ಲೆಯಲ್ಲಿ ಒಟ್ಟು 1051 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಉಡುಪಿ ಜಿಲ್ಲಾಡಳಿತದಿಂದ ಅಧೀಕೃತ ಮಾಹಿತಿ ಲಭ್ಯವಾಗಿದೆ.