ದೆಹಲಿ : ಭಾರತ ಶಿಕ್ಷಣ ರಥ ಯಾತ್ರೆ ತಂಡ ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ  ಸಂಜಯ್ ಧೋತ್ರೆ ಅವರನ್ನು ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ಶುಕ್ರವಾರ ಅವರ ಯ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿತು.

ಭಾರತ ಶಿಕ್ಷಣ ಯಾತ್ರೆಯ ಉದ್ದೇಶವನ್ನು ಅವರಿಗೆ ತಿಳಿಸಿ, ದೇಶದ ಪ್ರತಿಯೊಬ್ಬ ಬಡ ವಿದ್ಯಾಥಿರ್üಗೂ ಶಿಕ್ಷಣ ಸಿಗಬೇಕು,  ಆ ಮೂಲಕ ಗ್ರಾಮಗಳು ಅಭಿವೃದ್ದಿಯಾದಾಗ ದೇಶವು ಅಭಿವೃದ್ದಿಯಾಗಲು ಸಾಧ್ಯವಿದೆ ಎಂದು ಪ್ರಕಾಶ್ ಅಂಚನ್ ಮನವರಿಕೆ ಮಾಡಿದರು. ಕರ್ನಾಟಕ ಹಾಗೂ ಭಾರತ ಶಿಕ್ಷಣ ರಥಯಾತ್ರೆಯ  ಸಂದರ್ಭದ  ಶಿಕ್ಷಣ ಆಂದೋಲನ ಹಾಗೂ ಜಾಗೃತಿ ಕಾರ್ಯಕ್ರಮಗಳ ಕುರಿತ ವರದಿಯನ್ನು ವೀಕ್ಷಿಸಿದ ಅವರು ತಂಡದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ  ಅವರು ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿ ಜಾರಿ ತರಲಿದ್ದು ನಿಮ್ಮ ಹೋರಾಟ ಶಕ್ತಿ ತುಂಬಲಿದೆ, ತಂಡ ನೀಡಿದ ವರದಿಯ ಅಧಾರದಲ್ಲಿ ದೇಶದ ಕೊಳೆಗೇರಿ ಸಹಿತ ಮತ್ತಿತರ ಪ್ರದೇಶಗಳಲ್ಲಿ ಶಿಕ್ಷಣದಿಂದ ವಂಚಿತರಾದ ಎಲ್ಲಾ ಬಡ ವಿದ್ಯಾರ್ಥಿಗಳಿಗೂ ಶಿಕ್ಷಣ ನೀಡುವ ಯೋಜನೆಯನ್ನು ಹೊಸ ಶಿಕ್ಷಣ ನೀತಿಯ ಮೂಲಕ ಜಾರಿಗೊಳಿಸಲು ಪ್ರಯತ್ನ ನಡೆಸುವುದಾಗಿ ಅವರು ತಿಳಿಸಿದರು. ಪ್ರತೀ ರಾಜ್ಯದ  ಶಾಲೆಗಳಲ್ಲಿ ಮಾತೃಭಾಷೆಯೊಂದಿಗೆ ಇಂಗ್ಲೀಷ್ ಹಾಗೂ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಲು ತಮಿಳು ನಾಡಿನಲ್ಲಿ ವಿರೋಧ ವ್ಯಕ್ತವಾಗಿತ್ತು, ನಿಮ್ಮಂತಹ ಶಿಕ್ಷಣ ಹೋರಾಟಗಾರರು ನಮ್ಮ ಜೊತೆಗಿದ್ದರೆ ಈ ನೀತಿಯನ್ನು ಜಾರಿಗೊಳಿಸಲು ಸಾಧ್ಯವಿದೆ ಎಂದ ಅವರು ನಿಮ್ಮ ಹೋರಾಟದಂತೆ ಕೇಂದ್ರ ಸರಕಾರವೂ ದೇಶದ ಪ್ರತಿಯೊಬ್ಬ ಬಡವಿದ್ಯಾರ್ಥಿಗೂ ಶಿಕ್ಷಣ ನೀಡಲು ಕಟಿಬದ್ದವಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲು,  ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್, ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಕೋಶಾಧಿಕಾರಿ ಸಂದೀಪ್ ಸಾಲ್ಯಾನ್, ಸದಸ್ಯ ರಾಮಚಂದ್ರ ಪೂಜಾರಿ ಕರೆಂಕಿ ಹಾಜರಿದ್ದರು.