ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾ ವೈರಸ್'ನ ನಾಗಾಲೋಟ ಮುಂದುವರೆದಿದೆ. ಬುಧವಾರ 22,752 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 7,42,417ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.

ಈ ಮೂಲಕ ಸತತ 6ನೇ ದಿನವೂ 20 ಸಾವಿರಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾದಂತಾಗಿವೆ. ಇದೇ ವೇಳೆ ಕೊರೋನಾಗೆ ಒಂದೇ ದಿನ 482 ಮಂದಿ ಬಲಿಯಾಗುವುದರೊಂದಿಗೆ ಮೃತರ ಸಂಖ್ಯೆ 20,642ಕ್ಕೆ ಏರಿಕೆ ಕಂಡಿದೆ.

ಇದೇ ವೇಳೆ ಮಹಾರಾಷ್ಟ್ರದಲ್ಲಿ 5,134 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 2,17,121ಕ್ಕೆ ಏರಿಕೆಯಾಗಿದೆ. ಇನ್ನು ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 1,18,594ಕ್ಕೆ ಹಾಗೂ ದೆಹಲಿಯಲ್ಲಿ 102831ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲೆಡೆ ಒಂದೇ ದಿನ 17802 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈ ವರೆಗೆ ಒಟ್ಟು 454175 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಭಾರತದಲ್ಲಿ ಕೊರೋನಾವೈರಸ್ ಪ್ರಕರಣಗಳು 7 ಲಕ್ಷ ಹಾಗೂ ಸಾವಿನ ಸಂಖ್ಯೆ 20 ಸಾವಿರ ಗಡಿ ದಾಟಿರುವ ಹೊರತಾಗಿಯೂ ಪ್ರತಿ 10 ಲಕ್ಷ ಜನಸಂಖ್ಯೆಗೆ ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ವಿಶ್ವದಲ್ಲೇ ಕಡಿಮೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.