ದೋಹಾ, ಕತಾರ್ : ಪ್ರಸ್ತುತ ಸಂದಿಗ್ಧ ಪರಿಸ್ಥಿತಿಯಲ್ಲಿ ಕರೋನಾ ಮಹಾಮಾರಿಯು ವಿದ್ಯುತ್ ವೇಗದಲ್ಲಿ ಹರಡುತ್ತಿರುವುದು ಪ್ರಚಲಿತ ವಿದ್ಯಮಾನವಾಗಿದೆ. ಇದರ ಕಾರಣದಿಂದಾಗಿ ಭಾರತ ಮೂಲದ ಸಾವಿರಾರು ಜನರು ಕೊಲ್ಲಿ ದೇಶಗಳಲ್ಲೊಂದಾದ ಕತಾರಿನಲ್ಲಿ ವಿವಿಧ ಕಾರಣಗಳಿಂದ ಸಲುಕಿ ಸಂಕಷ್ಠದಲ್ಲಿರುವರು. ಕೆಲವರು ಕೆಲಸ ಕಳೆದುಕೊಂಡಿರುವರು, ಇನ್ನೂ ಕೆಲವರು ಅತೀವ ಅನಾರೋಗ್ಯದಿಂದ ನರಳುತ್ತಿರುವರು, ಮತ್ತೂ ಕೆಲವರು ಅನ್ನಾಹಾರಗಳಿಗೂ ಪರದಾಡುತ್ತಿರುವರು. ಇಂತಹವರಲ್ಲಿ 177 ಜನರಿಗೆ ಫ್ರಥಮ ಆದ್ಯತೆ ನೀಡಿ, ದಿನಾಂಕ 22 ಮೇ 2020 ರಂದು ’ವಂದೇ ಭಾರತ ನಿಯೋಗ’ದ ಸೇವೆಯಲ್ಲಿ ಬಂದ ವಿಮಾನದ ಮೂಲಕ ಮಾತೃಭೂಮಿಗೆ ಕಳುಹಿಸಿಕೊಡಲಾಗಿತ್ತು. ಇನ್ನೂ ಉಳಿದ ಸಾವಿರಾರು ಜನರಿಗೆ ಸಾಮಾನ್ಯ ವಿಮಾನ ಸೇವೆ ಇಲ್ಲದ ಕಾರಣ ತುರ್ತು ಪರಿಸ್ಥಿತಿಯಲ್ಲಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತಿತ್ತು.
ಈ ಜನರ ಕರೆಗೆ ಓಗೊಟ್ಟು, ಕತಾರಿನಲ್ಲಿರುವ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು ಬಾಗಿಲಿನಿಂದ ಬಾಗಿಲಿಗೆ ಓಡಾಡಿ, ಕದವನ್ನು ತಟ್ಟಿ, ತೆಗೆಸಿ, ಸಮರ್ಪಕವಾಗಿ ದ್ವಿತೀಯ ವಿಮಾನ ಸೇವೆಯನ್ನು ವಾಸ್ತವ್ಯಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸುಬ್ರಮಣ್ಯ ಅವರು ಕತಾರಿನ ಭಾರತೀಯ ರಾಯಭಾರಿ ಕಾರ್ಯಾಲಯ, ಭಾರತ ಸರಕಾರದ ವಿದೇಶಿ ಮಂತ್ರಾಲಯ, ಕರ್ನಾಟಕ ಸರಕಾರ ಮುಖ್ಯ ಮಂತ್ರಿಗಳ ಕಾರ್ಯಾಲಯ, ನಾಗರೀಕ ವಿಮಾನಯಾನ ಮಂತ್ರಾಲಯ, ಕೇಂದ್ರ ಹಾಗೂ ರಾಜ್ಯ ಸರಕಾರದ ಆರೋಗ್ಯ ಮಂತ್ರಾಲಯಗಳು ಮತ್ತು ಕೋವಿಡ್ ತುರ್ತು ಕಚೇರಿಗಳು, ಇವೆಲ್ಲದರೊಂದಿಗೆ ಯಾಚಿಸಿ, ಕಾಡಿ-ಬೇಡಿ, ಅಭಯ ಹಸ್ತವನ್ನು ಕೋರಿದುದರ ಪರಿಣಾಮ ಈ ಎರಡನೆಯ ವಿಮಾನ ಸಾಕಾರವಾಯಿತು.
ಶ್ರೀ ಸುಬ್ರಮಣ್ಯ ಹೆಬ್ಬಾಗಿಲು, ಜಂತಿ ಕಾರ್ಯದರ್ಶಿ, ಐ.ಸಿ ಬಿ.ಎಫ಼್, ಶ್ರೀ ಮಹೇಶ್ ಗೌಡ, ಉಪಾಧ್ಯಕ್ಷರು, ಐ.ಸಿ.ಬಿ.ಎಫ಼್ ಮತ್ತು ಶ್ರೀ ನಾಗೇಶ್ ರಾಯರು, ಅಧ್ಯಕ್ಷರು, ಕರ್ನಾಟಕ ಸಂಘ ಕತಾರ್, ಮತ್ತಿತರ ಸೇವಾಕರ್ತರ ಅವಿರತ ಪರಿಶ್ರಮದಿಂದ ನೂರಾರು ಜನರ ಕೂಗಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿ, ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಲು ಸಾಧ್ಯವಾಯಿತು.
ದಿನಾಂಕ 15 ಜೂನ್,2020 ಸೋಮವಾರ ಮುಂಜಾನೆ 11:45 ಕ್ಕೆ, 180 ಜನರು ಹಾಗು 6 ಶಿಶುಗಳನ್ನು ಕತಾರಿನ ’ಹಮಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ದಿಂದ ಸಕಲ ಸಿದ್ಧತೆಗಳೊಂದಿಗೆ, ಅಂದರೆ ಕೈಗೆ ರಕ್ಷಣೆ, ಮುಖಕ್ಕೆ ಅಡ್ಡಲಾಗಿ ಪಾರದರ್ಶಕ ಕವಚ, ಇವುಗಳೊಂದಿಗೆ ಬೀಲ್ಕೊಡುಗೆ ನೀಡಲಾಯಿತು. ಪ್ರಯಾಣಿಕರು ಕರೋನಾ ಮಹಾಮಾರಿಯನ್ನು ತಡೆಗಟ್ಟಲು ಕೈಗವಸು ಹಾಗೂ ಮುಖ ಕವಚಗಳನ್ನು ಧರಿಸಿದ್ಧರು. ’ಗೋ ಏರ್’ ಸಂಸ್ಥೆಯ ವಿಮಾನವನ್ನು ಬಾಡಿಗೆಗೆ ಪಡೆದ ಕತಾರ್ ಕರ್ನಾಟಕ ಸಂಘವು, ಕತಾರಿನ ಇತರೆ ಕರ್ನಾಟಕ ಮೂಲದ ಸಂಸ್ಥೆಗಳ ಸಹಕಾರದೊಂದಿಗೆ, ಹಾಗೂ ಐ.ಸಿ.ಬಿ.ಎಫ಼್ (ಭಾರತೀಯ ಸಮುದಾಯ ಹಿತೈಷಿ ವೇದಿಕೆ) ಮತ್ತು ಕತಾರಿನ ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ, ಈ ಮಹತ್ತರ ಕಾರ್ಯವನ್ನು ಕೈಗೊಳ್ಳಲಾಯಿತು.
ಕತಾರಿನಿಂದ ಪ್ರಯಾಣಿಸುವ ಮುನ್ನಾ, ಬೆಂಗಳೂರಿಗೆ ತಲುಪಿದ ಮೇಲೆ ಪಾಲಿಸಬೇಕಾದ ಸೂಚನೆಗಳನ್ನು ನಿರ್ದೇಶಾನುಸಾರ ಒಪ್ಪಿಕೊಂಡು, ಸೂಕ್ತ ಪತ್ರಗಳಿಗೆ ಯಾವುದೇ ಆಕ್ಷೇಪವಿಲ್ಲದೆ, ಹಸ್ತಾಕ್ಷರ ನೀಡಿ ಅನುಮೋದಿಸಿದ್ದರು. ಬೇರ್ಪಡಿಸುವ ಕಾಯ್ದೆ, ಕಾಲಾವಕಾಶ, ಅದರ ಸ್ಥಳ ಸವಲತ್ತುಗಳೆಲ್ಲವನ್ನು ಮುಂಚಿತವಾಗಿ ಅಂಗೀಕರಿಸಿದ್ದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿಯಮಾನುಸಾರ ಎಲ್ಲಾ ಕಾಗದ ಪತ್ರಗಳಿಗೆ ಸಹಿ ಹಾಕಿ ಕತಾರಿನ ಕನ್ನಡಿಗರು ಸ್ವೀಕರಿಸಿದ್ದರು.
ಈ ಪ್ರತ್ಯೇಕ ವಿಶೇಷ ವಿಮಾನವನ್ನು ನನಸಾಗಿಸಲು ತಮ್ಮ ಅಮೂಲ್ಯವಾದ ಸಮಯ, ಪರಿಶ್ರಮ ಹಾಗೂ ಬೆಲೆಕಟ್ಟಲಾಗದ ಕೊಡುಗೆಯನ್ನು ನೀಡಿರುವವರನ್ನು ಈ ಮೂಲಕ ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳಲಾಗುತ್ತಿದೆ,
> ರವಿಕುಮಾರ್, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು,
> ಕಾರ್ತಿಕ್. ಕೆ.ಆರ್. ವಿಶೇಷ ಅಧಿಕಾರಿ, ಕರ್ನಾಟಕ ರಾಜ್ಯ ಸರಕಾರ
> ಮೀನಾ ನಾಗರಾಜ್, ಐ.ಎ.ಎಸ್ ಅಧಿಕಾರಿ, ಪ್ರತ್ಯಾವರ್ತನ ಚಟುವಟಿಕೆಗಳ ನೋಡಲ್ ಅಧಿಕಾರಿಣಿ,
> ದೀಪ್ತಿ, ವಿದೇಶಿ ಮಂತ್ರಾಲಯ, ನವ ದೆಹಲಿ ಹಾಗೂ ಕತಾರಿನ ಪ್ರಧಾನ ವಾಣಿಜ್ಯ ದೂತರು
>ಯು.ಟಿ.ಖಾದರ್, ಎಂ.ಎಲ್.ಎ,
> ನಿರ್ದೇಶಕರು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ,
> ಬೆಂಗಳೂರು ನಗರ ಜಿಲ್ಲಾ ಆಯುಕ್ತರು
ಮತ್ತು ಇವರುಗಳಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಲಾಗುತ್ತಿದೆ,
> ಮಾನ್ಯ ಪಿ. ಕುಮರನ್, ಕತಾರ್ ದೇಶಕ್ಕೆ ಭಾರತೀಯ ರಾಯಭಾರಿಗಳು
> ಬಾಬುರಾಜನ್, ಅಧ್ಯಕ್ಷರು, ಐ.ಸಿ.ಬಿ.ಎಫ಼್
> ಬಿ.ವೈ. ರಾಘವೇಂದ್ರ, ಸಂಸತ್ತಿನ ಸದಸ್ಯರು, ಶಿವಮೊಗ್ಗ ಕ್ಷೇತ್ರ
ಇವರೆಲ್ಲರೂ ಅರ್ಪಿಸಿದ ಮಾನವೀಯತೆ, ಹಾಗೂ ಮನುಷ್ಯತ್ವದ ಮೌಲ್ಯಕ್ಕೆ ತೋರಿದ ಗೌರವಕ್ಕೆ ಅನಂತಾನಂತ ವಂದನೆಗಳು.