ಕಟೀಲು ದೇವಸ್ಥಾನವು ಕಳೆದ ಏಳೆಂಟು ವರ್ಷಗಳಲ್ಲಿ ಅತೀ ವೇಗದ ಅಭಿವೃದ್ಧಿಯನ್ನು ಕಾಣುತ್ತಿದ್ದು, ಕ್ಷೇತ್ರದ ವಿರುದ್ಧ ಹಾಗೂ ಕ್ಷೇತ್ರಕ್ಕಾಗಿ ರಾತ್ರಿಹಗಲು ಸೇವೆ ಸಲ್ಲಿಸುತ್ತಿರುವ ಅರ್ಚಕರಾದ ಆಸ್ರಣ್ಣರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರವಾಗಿ ಹೇಳಿಕೆಗಳನ್ನು ಕೊಡುತ್ತಿದ್ದು, ಅವರಿಗೆ ಶ್ರೀ ದೇವರು ಸನ್ಮಾರ್ಗವನ್ನು ತೋರಿಸಲಿ, ಸದ್ಭುದ್ಧಿಯನ್ನು ಅನುಗ್ರಹಿಸಲಿ ಎಂದು ಕಟೀಲು ದೇಗುಲದ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರು ಹೇಳಿದರು, ಕಟೀಲಿನಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಟೀಲು ದೇವಸ್ಥಾನದಲ್ಲಿ ಎಲ್ಲ ಸೇವೆಗಳಿಗೂ ರಶೀದಿ ನೀಡುತ್ತಿದ್ದು, ಯಾವುದೇ ಅವ್ಯವಹಾರ ಆಗುತ್ತಿಲ್ಲ. ಕಟೀಲು ಕ್ಷೇತ್ರದ ಅಭಿವೃದ್ಧಿಗೆ ಸರ್ವಸ್ವವನ್ನೂ ತ್ಯಾಗಮಾಡಿದ, ರಾಷ್ಟ್ರಮಟ್ಟದಲ್ಲಿ ಕೀರ್ತಿಗೆ ಪ್ರಯತ್ನಿಸಿದ, ಎಲ್ಲರ ಪೂಜ್ಯರಾದ ಗೋಪಾಲಕೃಷ್ಣ ಆಸ್ರಣ್ನರ ಬಗ್ಗೆ ವಸಂತ ಗಿಳಿಯಾರ್ ಮಾತ್ರವಲ್ಲದೆ, ನನ್ನ ತಂದೆಯನ್ನು ಹತ್ತಿರದಿಂದ ನೋಡಿರುವ ಸಂಜೀವ ಮಡಿವಾಳ, ಅನಂತರಾಜ ರಾವ್, ಚಂದ್ರಕಾಂತ ನಾಯಕರಂತಹವರು ಹೀನಾಯವಾಗಿ ಮಾತನಾಡಿರುವುದಕ್ಕೆ ನಮಗೆಲ್ಲರಿಗೂ ಅತ್ಯಂತ ನೋವಾಗಿದೆ. ಚಂಡಿಕಾಹೋಮವು ಜಿಲ್ಲಾಧಿಕಾರಿಗಳ ಅನುಮೋದಿತ ಸೇವಾದರದಂತೆಯೇ ನಡೆಯುತ್ತಿದೆ ಎಂದರು.
ಅರ್ಚಕ ವೆಂಕರಮಣ ಆಸ್ರಣ್ಣ ಮಾತನಾಡಿ, ಚಿನ್ನದ ರಥೋತ್ಸವ, ಚಿನ್ನದ ಪಲ್ಲಕಿ ಉತ್ಸವಗಳಿಗೆ ದೇವಸ್ಥಾನದಿಂದಲೇ ರಶೀದಿ ಮಾಡಲಾಗುತ್ತಿದ್ದು, ಕಳೆದ ವರ್ಷ ೧೧ ಚಿನ್ನದ ರಥದ ಸೇವೆ ನಡೆದಿದೆ ಎಂದರು.
ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಮಾತನಾಡಿ, ಭಕ್ತರ ಬೇಡಿಕೆ ಹೆಚ್ಚಿದ್ದು, ಹನ್ನೆರಡು ರಂಗಪೂಜೆಗಳು ದಿನಂಪ್ರತಿ ನಡೆಯುತ್ತಿದ್ದು, ಭಕ್ತರು ರೂ. ೩೦೦೦ವನ್ನು ದೇವಳಕ್ಕೇ ಪಾವತಿಸುತ್ತಾರೆ. ೨೦೧೭ರ ಅಷ್ಟಮಂಗಲ ಪ್ರಶ್ನೆಯಂತೆ ಮಧ್ಯಾಹ್ನ ೧೫ಸೇರು ನೈವೇದ್ಯ ಸಮರ್ಪಣೆಯಾಗುತ್ತಿದೆ. ಆದರೂ ಸುಳ್ಳು ಆಪಾದನೆಗಳನ್ನು ಹೊರಿಸಿದ್ದಾರೆ ಎಂದರು.
ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, "ಮಾನಹಾನಿಯಾಗಿ ಆರೋಪಗಳನ್ನು ಮಾಡುತ್ತಿರುವವರು ನಾನು ಯಕ್ಷಗಾನ ಮೇಳಗಳಿಂದ ಕಮಿಷನ್ ಪಡೆಯುತ್ತೇನೆ ಎಂದೆಲ್ಲ ಹೇಳಿದ್ದು, ಒಂದು ರೂಪಾಯಿಯನ್ನೂ ಪಡೆದಿಲ್ಲ ಎಂದು ಯಾವ ಕ್ಷೇತ್ರದಲ್ಲೂ ಆಣೆ ಮಾಡಲು ಸಿದ್ಧನಿದ್ದೇನೆ. ಯಕ್ಷಗಾನ ಮೇಳಗಳ ಏಲಂ ಕುರಿತಾಗಿ ಹೋರಾಟ ನಡೆಸುತ್ತಿರುವವರು, ಕಟೀಲಿನಲ್ಲಿ ನ್ಯಾಯಾಲಯದ ಆದೇಶದಂತೆ ಅಂಗಡಿಗಳನ್ನು ತೆರವುಗೊಳಿಸಿದವರು, ದೇವಳದ ಭೂಮಿಯನ್ನು ಒಳಹಾಕಿದವರು, ಜಾಗದ ತಕರಾರು ಇರುವವರು, ಬ್ರಹ್ಮಕಲಶ ಸಮಿತಿಯಲ್ಲಿ ಹೆಚ್ಚಿನ ಸ್ಥಾನಮಾನ ಸಿಗದವರು ಎಲ್ಲರೂ ಸೇರಿ ನನ್ನನ್ನು ಗುರಿಯಾಗಿಸಿ ಮಾನಹಾನಿಕರವಾಗಿ ಆಪಾದನೆಗಳನ್ನು ಮಾಡುತ್ತಿದ್ದಾರೆ. ಸೇವಾರಶೀದಿಗಳನ್ನು ಕಂಪ್ಯೂಟರೀಕರಣಗೊಳಿಸಿದ ರಾಜ್ಯದಲ್ಲೇ ಮೊದಲ ದೇವಸ್ಥಾನ ಕಟೀಲು ಆಗಿದ್ದು, 2001 ರಿಂದಲೇ ಈ ವ್ಯವಸ್ಥೆ ಆರಂಭವಾಗಿದ್ದು, ದೇವಸ್ಥಾನದಲ್ಲಿ ಚೆಕ್ ಮುಖಾಂತರವೇ ವ್ಯವಹಾರ ನಡೆಯುತ್ತಿದೆ. ದೇವಸ್ಥಾನದಲ್ಲಿ ನಿರ್ಣಯ ತೆಗೆದುಕೊಳ್ಳುವವ ನಾನಲ್ಲ, ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಕೊಡೆತ್ತೂರುಗುತ್ತು ಮನೆತನದ ಸನತ್ ಕುಮಾರ ಶೆಟ್ಟರು ಇಬ್ಬರೂ ನಿರ್ಣಯ ತೆಗೆದುಕೊಳ್ಳುವವರು".
"2019-20 ರಲ್ಲಿ ದೇವಸ್ಥಾನದ ಆದಾಯ ರೂ. 25.42 ಕೋಟಿ ಆಗಿದ್ದು, ಅರ್ಚಕರ ವಾರ್ಷಿಕ ಬಟವಾಡೆಯ ಮೊತ್ತ ರೂ. 53 ಲಕ್ಷ ಆಗಿದೆ. ಇದರಲ್ಲಿ ಪ್ರಸಾದ ತಯಾರಿಕೆ, ಸೀಯಾಳ ವಿಲೇವಾರಿ ಇತ್ಯಾದಿ ಕೆಲಸಗಾರರಿಗೆ ನೀಡಿ, ಸುಮಾರು 30 ರಿಂದ 40 ಶೇಕಡಾ ಮಾತ್ರ ಅರ್ಚಕರಿಗೆ ಉಳಿಯುತ್ತದೆಯೇ ಹೊರತು ಕೋಟಿ ಕೋಟಿ ಸಿಗುವುದಿಲ್ಲ ಎಂದ ಅವರು ಭಕ್ತರು ಭೂದಾನಕ್ಕೆ ನೀಡಿರುವ ರೂ. ಎರಡು ಕೋಟಿ ಮೂರು ಲಕ್ಷದಷ್ಟು ಮೊತ್ತ ಬ್ಯಾಂಕಿನ ಭೂದಾನ ನಿಧಿಯಲ್ಲಿದೆ ಎಂದರು. ಆಸ್ರಣ್ಣರ ವಿರುದ್ಧ ಮಾನಹಾನಿಕರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿರುವವರ ವಿರುದ್ಧ ಒಂದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದು, ಮತ್ತೂ ವಾಟ್ಸಪ್, ಫೇಸ್ ಬುಕ್, ಯ್ಯೂಟ್ಯೂಬ್ ಇತ್ಯಾದಿಗಳಲ್ಲಿ ಮಾನಹಾನಿಕರವಾಗಿ ಬರೆಯುತ್ತಿದ್ದಾರೆ. ಅವರೆಲ್ಲರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುತ್ತೇವೆ" ಎಂದರು.
ಕ್ಷೇತ್ರದ ಬಗ್ಗೆ ಸುಳ್ಳು ಸುದ್ದಿ ಹರಡಿಸಿದ್ದರಿಂದ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಚ್ಯುತಿಯಾಗಿದೆ ಎಂದು ಭಕ್ತರಾದ ಚಿನ್ನದ ರಥೋತ್ಸವ ಹಾಗೂ ಯಕ್ಷಗಾನ ಸೇವಾದಾರ ಐಕಳ ಗಣೇಶ ಶೆಟ್ಟರು ಎರಡು ಪೋಲೀಸು ಕೇಸು ದಾಖಲಿಸಿದ್ದಾರೆ ಎಂದು ಹರಿ ಆಸ್ರಣ್ಣ ತಿಳಿಸಿದರು.
ಶಿಬರೂರು : ಚ್ಯುತಿ ಬಂದಿಲ್ಲ:-
ಕಟೀಲು ಕ್ಷೇತ್ರದಲ್ಲಿ ಶಿಬರೂರು ಕೊಡಮಣಿತ್ತಾಯ ದೈವಕ್ಕೆ ಯಾವುದೇ ಅವಮಾನ ಆಗಿಲ್ಲ. ಈ ಬಗ್ಗೆ ಸುಳ್ಳು ಆರೋಪಿಸಿದ್ದಾರೆ. ಕಟೀಲು ಹಾಗೂ ಶಿಬರೂರು ಕ್ಷೇತ್ರಗಳ ಸಂಬಂಧ ಚೆನ್ನಾಗಿದೆ ಎಂದು ಕ್ಷೇತ್ರದ ಗುತ್ತಿನಾರ್ ಉಮೇಶ್ ಎನ್. ಶೆಟ್ಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.