ಹಲವಾರು ವರ್ಷಗಳ ಚಾತಕತನದ ತರುವಾಯ ಇದೀಗ ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಪಣತೊಟ್ಟಿದೆ. ರಾಜ್ಯ ಸರಕಾರ ಕೂಡಾ ಅದಕ್ಕೆ ಪೂರಕ ಮಾತನ್ನು ಆಡಿದೆ. ನೂತನ ಶಿಕ್ಷಣ ನೀತಿಯನ್ನು ಪರಿಗಣಿಸಿದರೆ ಬಹಳ ಉತ್ತಮ ಅಂಶಗಳೇ ಕಂಡುಬರುತ್ತದೆ. ಆದರೆ ಅದನ್ನು ಕಾರ್ಯರೂಪಕ್ಕೆ ಅಳವಡಿಸುವಲ್ಲಿ ಸರಿಯಾದ ಸಿದ್ಧತೆಯ ಅಗತ್ಯವೂ ಇದೆಎಂದು ಸಮಯ ಸಾರಿ ಹೇಳುತ್ತಿದೆ.
ಶಿಕ್ಷಣ ಹಂತದಲ್ಲಿದ್ದ ಇದುವರೆಗಿನ 10+2 ಹಂತವನ್ನು 5+3+3+4 ನ್ನಾಗಿ ಬದಲಾಯಿಸಿದ್ದು ಬಹಳ ಶ್ರೇಯಸ್ಕರ. ಈ ಪ್ರಕಾರ ನಿಂತ ನೀರಿನಂತಿದ್ದ ಶಿಕ್ಷಣದ ಹಂತ ಸ್ವಲ್ಪ ಮಾರ್ಪಾಡಾಗಿ ಪೂರ್ವ ಪ್ರಾಥಮಿಕದ ಮೂರು ವರ್ಷಗಳು ಸೇರಿ ಎಂಟನೇ ತರಗತಿ ತನಕ ಮಾತೃ ಭಾಷೆಯಲ್ಲೇ ಶಿಕ್ಷಣ ಎಂದೂ ಸಾರಿದೆ. ಇದನ್ನು ಕಡ್ಡಾಯಗೊಳಿಸಬೇಕಾದ ಅನಿವಾರ್ಯತೆಯೂ ಇದೆ. ಇದು ನಿಜಕ್ಕೂ ಮೆಚ್ಚತಕ್ಕದ್ದೇ. ಇದು ಸಾರ್ವತ್ರಿಕವಾಗಿ ಜಾರಿಗೆ ಬರಬೇಕು. ಭಾರತದ ಸಂವಿಧಾನ, ಅಂತರಾಷ್ಟ್ರೀಯ ಸಂಸ್ಥೆಗಳು, ಶಿಕ್ಷಣ ತಜ್ಞರು, ಇತ್ಯಾದಿ ಎಲ್ಲರ ಅಭಿಪ್ರಾಯದಂತೆ ಮಕ್ಕಳಿಗೆ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡಬೇಕು ಎಂದಿರುವುದು ಈ ಪ್ರಕಾರ ಕೈಗೂಡಲಿದೆ ಎಂದು ಆಶಿಸಬಹುದಾಗಿದೆ.
ಪೂರ್ವ ಪ್ರಾಥಮಿಕದಿಂದ ಎರಡನೇ ತರಗತಿ ತನಕದ ಕಲಿಕೆಯಲ್ಲಿ ಆಟೋಟ, ನಲಿಕಲಿಯಂತಹ ಕ್ರಮದಲ್ಲಿಯೇ ಶಿಕ್ಷಣ ಅಗತ್ಯ ಎಂದೂ ಸಾರಿರುವುದು ವಿದ್ಯಾರ್ಥಿಯ ಸಾಮರ್ಥ್ಯಕ್ಕನುಗುಣವಾಗಿದ್ದು, ಮಗು ಸಂತೋಷದಿಂದ ಕಲಿಯಲು ಪೂರಕವಾಗಿದೆ. ಆ ನಂತರದ ಮೂರು ವರ್ಷದ ಶಿಕ್ಷಣದಲ್ಲಿ ಮಾತೃಭಾಷೆಯೇ ಪ್ರಧಾನವಾಗಿದ್ದರೂ ಪ್ರಾಥಮಿಕ ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳನ್ನೂ ಅದೇ ಭಾಷೆಯಲ್ಲೇ ಕಲಿಸುವುದು ಕಡ್ಡಾಯ ಮಾಡುವದರೊಂದಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಭಾಷಾ ಕಲಿಕೆಯ ಅಕ್ಷರಾಭ್ಯಾಸಕ್ಕೆ ಮಾತ್ರ ಆಸ್ಪದವನ್ನು ಕೊಡಬಹುದು. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಎಲ್ಲಾ ವಿಧದ ಶಾಲೆಗಳಲ್ಲೂ ಈಗಿನ ಕ್ರಮಕ್ಕೆ ಬದಲಾಗಿ ಕೇವಲ ಮಾತೃಭಾಷೆಯಲ್ಲೇ ಶಿಕ್ಷಣ ದೊರಕುವಂತಾಗ ಬೇಕು. ಈ ಪ್ರಕಾರ ಮಾತೃಭಾಷೆಯಲ್ಲೇ ಪೂರ್ವ ಪ್ರಾಥಮಿಕ, ಪ್ರಾಥಮಿಕದ 5+3+3 ಹಂತದ ಶಿಕ್ಷಣ ದೊರಕಿದರೆ ಮಗುವಿಗೆ ತನ್ನ ಪರಿಸರದ, ಊರಿನ, ಜಿಲ್ಲೆಯಎಲ್ಲ ಮಾಹಿತಿಗಳು, ಪರಿಜ್ಞಾನ ದೊರಕಿ ಸಾಕಷ್ಟು ತಿಳುವಳಿಕೆಯನ್ನು ಪಡೆಯಲು ಸಾಧ್ಯವಿದೆ. ತನ್ನ ಬದುಕಿಗೆ ಪ್ರಧಾನವಾಗಿ ಬೇಕಿದ್ದ ಪ್ರಾಥಮಿಕ ತಿಳುವಳಿಕೆ ತನ್ನ ಮಾತೃಭಾಷೆಯಲ್ಲೇ ದೊರಕಿ ಹೆಚ್ಚಿನ ಆಲೋಚನೆ, ಚಿಂತನೆಗಳಿಗೆ ದಾರಿ-ತೋರಿ ಮಾರ್ಗದರ್ಶಕವಾಗಲಿದೆ. ಈ ಹಂತದ ಕೊನೇಯ 5ನೇ ತರಗತಿಯಲ್ಲಿ ನಡೆಯುವ ಪರೀಕ್ಷೆಯಿಂದ ಆತ ಅದುವರೆಗೆ ಪಡೆದ ಜ್ಞಾನದ ಅವಲೋಕನ ಸಾಧ್ಯವಾಗಿ ಮುಂದಿನ ಹಂತಕ್ಕೆ ಕಾಲಿಡ ಬಹುದಾಗಿರುತ್ತದೆ.
ಮೂರನೇ ಹಂತದ 6 ನೇ ತರಗತಿಗೆ, ತಾನು ಹಿಂದೆ ಕಲಿತ ಸಾಮಾನ್ಯ ವರ್ಗದ ಶಾಲೆಗಳನ್ನು ಬಿಟ್ಟು ಮಗು ಬೇಕಿದ್ದರೆ ಕೇಂದ್ರೀಯ, ನವೋದಯ, ಮುರಾರ್ಜಿ, ರಾಣಿ ಚೆನ್ನಮ್ಮ, ಮಿಲಿಟರಿ, ಇತ್ಯಾದಿ ಯಾವುದೇ ವಿದ್ಯಾಲಯಕ್ಕೂ ಸೇರಿ ತನ್ನ ಪ್ರೌಢಿಮೆಯನ್ನು ಒರೆಗೆ ಹಚ್ಚಬಹುದು. ಅಥವಾ ಸಾಮಾನ್ಯ ವರ್ಗದ ಶಾಲೆಯಲ್ಲಿಯೇ ವಿದ್ಯಾರ್ಜನೆ ಮುಂದುವರೆಸ ಬಹುದಾಗಿದೆ. ಇಲ್ಲಿ ಎಲ್ಲಾ ಕಡೆ ತ್ರಿಭಾಷಾ ಸೂತ್ರಜಾರಿಯಲ್ಲಿದ್ದು ಪ್ರಾದೇಶಿಕ/ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಭಾಷೆಗಳಲ್ಲಿ ಕಲಿಕೆಗೆ ಅವಕಾಶವನ್ನು ನೀಡಲಾಗಿದೆ. ಮಗು ತನ್ನ ಆಯ್ಕೆಗೆ ಅನುಸರಿಸಿ ಭಾಷೆಗಳನ್ನು ಆಯ್ದು ಕೊಳ್ಳಲು ಈ ವಿದ್ಯಾಲಯಗಳಲ್ಲಿ ಅವಕಾಶ ನೀಡಲಾಗಿದೆ ಹೇರಿದೆ. ಈ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಾಧ್ಯಾಯಕ್ಕೆ ಹೆಚ್ಚಿನ ಅವಕಾಶಗಳಿದ್ದು ವಿದ್ಯಾರ್ಥಿತನ್ನ ಮನಸೋ ಇಚ್ಛೆ ಹೆಚ್ಚುವರಿ ಜ್ಞಾನವನ್ನು ಪಡೆಯಲೂ, ಅಧ್ಯಯನ ಮಾಡಲೂ, ಅವಕಾಶಗಳನ್ನು ಒದಗಿಸಲಾಗಿದೆ.ಇಲ್ಲಿಶಿಕ್ಷಕರಿದ್ದರೂ ಅವರುಕೇವಲ ಮಾರ್ಗದರ್ಶಕರಾಗಿದ್ದು ಮಾಮೂಲಿ ತರಗತಿ ಪಾಠಕ್ಕಿಂತ ಸಮಗ್ರ ದಾರಿತೋರುವ ಗುರುವಿನಂತೆ ವರ್ತಿಸುತ್ತಾರೆ, ಭಾರತದ ಹಳೆಯ ಪದ್ಧತಿಯಾದ ಗುರುಕುಲ ಶಿಕ್ಷಣದಂತೆ ಒಟ್ಟಾರೆ ಸಮಗ್ರ ಅಭಿವೃದ್ಧಿಯೇ ಶಿಕ್ಷಣದ ಮೂಲ ಉದ್ದೇಶವಾಗಿರುತ್ತದೆ. ಅದಕ್ಕೆ ಪೂರಕವಾಗಿ ಅಲ್ಲಿರುವ ಶಿಕ್ಷಕರ ಸುಪರ್ದಿಯಲ್ಲಿ ವಿದ್ಯಾರ್ಥಿ 24 ಗಂಟೆಯೂ ಇರುವುದರಿಂದ ಸಮಗ್ರ ಮಾರ್ಗದರ್ಶನ ವಿದ್ಯಾರ್ಥಿಗೆ ಸದಾದೊರಕುತ್ತಿರುತ್ತದೆ. ಆದರೆ ಇಂತಹ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಯಂತೆಯೇ ಶಿಕ್ಷಕರಿಗೂ ಉಳಿದುಕೊಳ್ಳಲು, ವಿದ್ಯಾರ್ಥಿ ಬಯಸಿದಾಗ ಮಾರ್ಗದರ್ಶನ ನೀಡಲು, ಸಹಕಾರಿಯಾಗುವ ವ್ಯವಸ್ಥೆ ಹೊಂದಿರುವದೂ ಅಗತ್ಯವಾಗಿರುತ್ತದೆ.
ಮೇಲ್ಕಂಡ ವಿದ್ಯಾಲಯಗಳಲ್ಲಿ ಒಮ್ಮೆ ಪ್ರವೇಶ ಪಡೆದ ವಿದ್ಯಾರ್ಥಿ 6 ರಿಂದ 12ನೇ ತರಗತಿ ತನಕ ಕಲಿಯುತ್ತ ಮುಂದುವರೆಯ ಬಹುದಾಗಿರುತ್ತದೆ. ವಿದ್ಯಾರ್ಥಿ ತನ್ನ ಕೆಲಸವೆಲ್ಲವನ್ನೂ ತಾನೇ ಮಾಡಿಕೊಳ್ಳುವುದರಿಂದ ಸ್ವ-ಸಾಮಥ್ರ್ಯವನ್ನು ಕಲಿತುಕೊಳ್ಳುತ್ತಾನೆ. ಅದರೊಂದಿಗೆ ಜ್ಞಾನದ ಹಲವು ಮಜಲುಗಳ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ಆದರೆ ಇಲ್ಲಿರುವ ಒಂದೇ ಒಂದು ಕೊರತೆ ಏನೆಂದರೆ ಸಮಾಜದ ವ್ಯಕ್ತಿಗಳೊಂದಿಗೆ ಒಡನಾಟ ಅಸಾಧ್ಯ. ತನ್ನಕಾರ್ಯ, ಕಾಯಕದಲ್ಲಿ ನಿಷ್ಣಾತರಾಗಿರುವ ಮಹಾನ್ ವ್ಯಕ್ತಿಗಳೊಂದಿಗೆ ಸೇರಿ ಆ ಕಾಯಕವನ್ನು ಕಲಿಯುವ ಅವಕಾಶ ಇಲ್ಲಿ ಅಸಾಧ್ಯ. ಹೀಗಾಗಿ ಮನಸ್ಸಿದ್ದರೂ ಕಾರ್ಯತ: ನಿಷ್ಣಾತತೆ ಕೈಗೂಡದು. ಇದರಿಂದಾಗಿ ಗುಡಿ ಕೈಗಾರಿಕೆ, ಕುಶಲ ಕಲೆಗಾರಿಕೆಗಳು ಬೆಳೆಯದೇ ಅವೆಲ್ಲವೂ ಮುಂದುವರಿಕೆ ಇಲ್ಲದೇ ಕ್ರಮೇಣ ಕಣ್ಮರೆಯಾಗಿಬಹುದು.
ವಿದ್ಯಾರ್ಥಿ ಯಾವುದೇ ವಿದ್ಯಾಲಯದಲ್ಲಿ ಕಲಿಯುತ್ತಿದ್ದರೂ ಕೂಡಾ ಕನಿಷ್ಠ ಪಕ್ಷ ವಾರಕ್ಕೆ ಒಂದು/ಎರಡು ದಿನ ಗರಿಷ್ಠ 10 ಮಕ್ಕಳೊಂದಿಗೆ ಸ್ಥಳೀಯವಾಗಿ ಲಭ್ಯರಿರುವ ಕುಶಲ ಕರ್ಮಿಗಳ ಮನೆ/ಗುಡಿ ಕೈಗಾರಿಕೆಗೆ ಭೇಟಿಯನ್ನು ಆಯೋಜಿಸಬೇಕು. ಇದು 6ನೇ ತರಗತಿಯ ತರುವಾಯದ ಶಿಕ್ಷಣದಲ್ಲಿ ಅತೀ ಅಗತ್ಯ. ಏಕೆಂದರೆ ಕೇವಲ ತರಗತಿಯ ಪಾಠಕ್ಕಿಂತ ಸ್ವತ: ನೋಡಿ, ಕಲಿತು, ಪರ್ಯಾಲೋಕಿಸಿ ಪಡೆಯುವ ತಿಳಿವಳಿಕೆಯ ಜ್ಞಾನ ಹೆಚ್ಚು ಪರಿಣಾಮಕಾರಿ ಹಾಗೂ ಸದಾಕಾಲ ಮನಸ್ಸಿನಲ್ಲಿ ಉಳಿಯುವಂತಹುದು. ಆದುದರಿಂದ ಸ್ಥಳೀಯವಾಗಿ ಲಭ್ಯರಿರುವ ರೈತ/ಬಡಗಿ/ಅರ್ಚಕ/ಕಮ್ಮಾರ/ಕುಂಬಾರ/ಸಾಹಿತಿ/ಕವಿ/ಉದ್ಯಮಿ/ಪೊಲೀಸ್/ಅಧಿಕಾರಿ ಇತ್ಯಾದಿ ಸಮಾಜದ ಎಲ್ಲಾ ವಿಧದ ಜನರ ಬಗೆಗೆ ಪ್ರಾಥಮಿಕ ಮಾಹಿತಿಯನ್ನು ವಿದ್ಯಾರ್ಥಿ ಹೊಂದುವಂತಾಗಬೇಕು. ಅಲ್ಲಿಯ ಪರಿಸರ, ಆಗುಹೋಗು, ಕಾರ್ಯ ವಿಧಾನ ಎಲ್ಲವನ್ನೂ ಆತ ತಿಳಿಯುವಂತಾಗಬೇಕು. ಆಗ ತನ್ನಿಂದ ತಾನಾಗಿ ತನಗಾವುದಿಷ್ಟವೋ ಅದನ್ನು ಆಯ್ಕೆ ಮಾಡಿಕೊಳ್ಳುವ ಜ್ಞಾನವು ಬೆಳೆಯಲು ಸಾಧ್ಯ. ಇದು 6,7,8ನೇ ತರಗತಿಗಳಲ್ಲಿ ಮುಂದುವರೆದು ವಿದ್ಯಾರ್ಥಿ ಸಮಾಜದ ಎಲ್ಲಾ ಸ್ಥಳೀಯ ಮಹಾನ್ ವ್ಯಕ್ತಿಗಳ ಪರಿಚಯ ಹೊಂದಲು, ಜ್ಞಾನದ ಕಿಂಡಿಯಂತೆ ಕೆಲಸ ಮಾಡಲಿದೆ.
8ನೇ ತರಗತಿಯ ಶಿಕ್ಷಣ ಪೂರೈಸುವದರೊಂದಿಗೆ ಮಾಧ್ಯಮಿಕ ಶಾಲಾ ಹಂತದ ಪರೀಕ್ಷೆ ಎದುರುಗೊಳ್ಳುವುದರಿಂದ ಅದರಲ್ಲೂ ಯಶಸ್ವಿಯಾದ ವಿದ್ಯಾರ್ಥಿ 9ನೇ ತರಗತಿಯ ಪ್ರೌಢಶಾಲಾ ಹಂತಕ್ಕೆ ಕಾಲಿಡುತ್ತಾನೆ. ಈಗ ವಿದ್ಯಾರ್ಥಿ ಶಾಲಾ ಪಾಠ, ಪಾಠೇತರ, ಸ್ಥಳೀಯ ಪ್ರಾಪಂಚಿಕ ಜ್ಞಾನಗಳೆಲ್ಲವನ್ನೂ ಹೊಂದಿರುವುದರಿಂದ ಸ್ವಲ್ಪ ದೂರದ ಊರು, ನಗರ, ಪಟ್ಟಣದ ಜನ ಜೀವನ, ಬದುಕು ಇತ್ಯಾದಿಗಳನ್ನು ಪರಿಚಯಿಸುವ ಕೆಲಸವನ್ನು ಅದೇ ರೀತಿ ವಾರ ಒಂದಾವರ್ತಿ ಅಥವಾ ಎರಡು ಸಲ ಮಾಡಬಹುದು. 9, 10ನೇ ತರಗತಿಗಳಲ್ಲಿ ಇದೆಲ್ಲದರ ಪರಿಚಯವನ್ನು ಶಾಲೆಯ ಪಾಠ-ಪಠೇತರದೊಂದಿಗೆ ಪಡೆದು ವಿದ್ಯಾರ್ಥಿ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯನ್ನೂ ಸಮರ್ಥವಾಗಿ ಎದುರಿಸುತ್ತಾನೆ. ಈ ಸಂದರ್ಭದಲ್ಲಿ ಕೇಳಲಾಗುವ ಪ್ರಶ್ನೆಗಳೂ ಕೂಡಾ ತಾನು ಕಂಡು ಕೇಳಿದ್ದನ್ನು, ವೀಕ್ಷಿಸಿದ್ದನ್ನು ವಿಮರ್ಶಿಸಿ ಬರೆಯುವುದಕ್ಕೆ ಪೂರಕವಾಗಿರಬೇಕು.
5, 8ನೇ ತರಗತಿಗಳಲ್ಲಿ ನಡೆದ ಶಾಲಾ/ಜಿಲ್ಲಾ ಮಟ್ಟದ ಪರೀಕ್ಷೆಯಿಂದ ಪರೀಕ್ಷೆಯ ಬಗೆಗೆ ತಿಳುವಳಿಕೆ ಹೊಂದಿರುವ ವಿದ್ಯಾರ್ಥಿ ರಾಜ್ಯ/ ರಾಷ್ಟ್ರ ಮಟ್ಟದ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯಿಂದ ಪರೀಕ್ಷೆಯ ನೈಜತೆಯ ಪರಿಚಯವನ್ನು ಹೊಂದುತ್ತಾನೆ. ಈ ಪರೀಕ್ಷೆಯಲ್ಲಿ ಆತ ಈ ತನಕ ಕಲಿತ {ಪಾಠ, ಪಾಠೇತರ, ಸ್ವತ: ನೋಡಿ ಕಲಿ-ಮಾಡಿ ತಿಳಿ} ಎಲ್ಲದರ ಬಗೆಗೂ ವಿಮರ್ಶಾತ್ಮಕ ಪ್ರಶ್ನೆಗಳಿರುವದು ಅವಶ್ಯಕ. ಅಥವಾ ಕನಿಷ್ಠ ಪಕ್ಷ 9-10ನೇ ತರಗತಿಗಳಲ್ಲಿ ಕಲಿತ, ತಿಳಿದ ಎಲ್ಲದರ ಬಗೆಗಾದರೂ ವಿಮರ್ಶಾ ಪ್ರಶ್ನೆ ಇರುವದು ಅತ್ಯವಶ್ಯ. ಇದು ಪ್ರತೀ ಜಿಲ್ಲಾ ಮಟ್ಟಕ್ಕೂ ವಿಭಿನ್ನವಾಗಿರುವದರಿಂದ ಏಕ ರೂಪದ ಉತ್ತರ ಎಲ್ಲೂ ದೊರಕಲು ಅಸಾಧ್ಯ. ಹೀಗಾಗಿ ನಿರ್ದಿಷ್ಟ ಉತ್ತರಕ್ಕೆ ಬದಲು ವಿದ್ಯಾರ್ಥಿ ಬಳಸಿದ ಭಾಷೆ, ಜ್ಞಾನ, ತಿಳುವಳಿಕೆ, ವಿಷಯ ಇತ್ಯಾದಿಗಳ ಆಧಾರದಲ್ಲಿ ಗ್ರೇಡ್ ನೀಡುವ ಪದ್ಧತಿಯನ್ನು ಮೌಲ್ಯ ಮಾಪನದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.
ವಿದ್ಯಾರ್ಥಿಗಳಲ್ಲಿ ಕೌಶಲ ವೃದ್ಧಿಯ ಅವಶ್ಯಕತೆಯಿಂದ ಈ ರೀತಿಯ ವಿವಿಧ ಜ್ಞಾನವಂತರಿಂದ ನೋಡಿ ಕಲಿ-ಮಾಡಿ ತಿಳಿ ಕಲಿಕೆಯ ಅಗತ್ಯತೆ ಬಹಳಷ್ಟಿದೆ. 11, 12 ನೇ ತರಗತಿಯ ಪ್ರೌಢ ಹಂತದಲ್ಲಿ ರಾಜ್ಯ ಮಟ್ಟದ ಪರಿಣತರು, ಜ್ಞಾನವಂತರುಗಳೊಂದಿಗೆ ಬೆರೆಯಲು, ತಿಳಿಯಲು, ಪ್ರಬಂಧ ರಚಿಸಲು ಪ್ರಯೋಗಾತ್ಮಕ ಅವಕಾಶ ನೀಡಿ ಅಂತಹ ರಚನೆಗಳಿಗೆ ಸೂಕ್ತ ಗ್ರೇಡ್ ನೀಡುವುದರ ಮೂಲಕ
ವಿದ್ಯಾರ್ಥಿಯರಚನಾತ್ಮಕ ಹಾಗೂ ಆಲೋಚನಾತ್ಮಕ ವಿಚಾರಗಳಿಗೆ ಉತ್ತಮ ಪ್ರೋತ್ಸಾಹವನ್ನು ನೀಡಬಹುದಾಗಿದೆ. 11, 12ನೇ ತರಗತಿಯ ಹಂತದಲ್ಲಿ ಉದ್ಯೋಗಗಳಿಗೆ ಅನುಕೂಲಿಸುವ ಕೌಶಲ್ಯಾಧಾರಿತ ವಿಷಯಗಳನ್ನೇ ಆಯ್ಕೆಗೆ ಇಡುವದರಿಂದ ಮತ್ತು ಪ್ರಾಯೋಗಿಕ “ನೋಡಿ ಕಲಿ- ಮಾಡಿ ತಿಳಿ”ಗೆ ಸಂಬಂಧಪಟ್ಟ ವಿಷಯಗಳೇ ಪ್ರಧಾನವಾಗಿರುವುದರಿಂದ ಈಗಿನ ಮಾಮೂಲಿ ಕಲೆ, ವಿಜ್ಞಾನ, ವಾಣಿಜ್ಯ ವಿಷಯದ ಪುಸ್ತಕದ ಜ್ಞಾನದೊಂದಿಗೆ ಸ್ವತ: ಆಯಾಕ್ಷೇತ್ರದ ವಿಶೇಷ ಪರಿಣತರೊಂದಿಗೇ ಇದ್ದು, ತಿಳಿದು, ತತ್ಕಾಲದ ಅಧ್ಯಯನ ಮಾಡಲು ಅವಕಾಶವನ್ನು ನೀಡಬಹುದಾಗಿದೆ.
ವಿದ್ಯಾರ್ಥಿ ಒಂದು ವೇಳೆ ಚರಿತ್ರೆಯಲ್ಲಿ ಆಸಕ್ತಿ ಹೊಂದಿದ್ದರೆ ವಾರಕ್ಕೊಮ್ಮೆ ನಿರ್ದಿಷ್ಟ ಸ್ಥಳದ ಮಾಹಿತಿಗಳೆಲ್ಲವನ್ನೂ ಸಂಗ್ರಹಿಸಿ ಸ್ವತ: ಅಲ್ಲಿಗೆ ಭೇಟಿ ಇತ್ತು, ಅಲ್ಲೇ ಕೆಲವಾರು ದಿನ ಕಾಲ ನೆಲೆನಿಂತು ಅಧ್ಯಯನ ಗೈದು ತನ್ನ ಪ್ರಬಂಧವನ್ನು ರಚಿಸಬಹುದು. ಸಹಕಾರಿ ಕ್ಷೇತ್ರದ ಬಗೆಗೆ ಆಸಕ್ತಿ ಹೊಂದಿದ್ದರೆ ಕೆಲವಾರು ಸಹಕಾರಿ ಸಂಘ, ಸಂಸ್ಥೆಗಳಿಗೆ ಭೇಟಿ ನೀಡಿ ಅದರ ರಚನೆ, ಕಾರ್ಯ, ವಿಧಾನ, ಎಲ್ಲವನ್ನೂ ಅಧ್ಯಯನ ಗೈದು ತನ್ನ ಅಭಿಪ್ರಾಯವನ್ನೂ ಪ್ರಸ್ತುತ ಪಡಿಸಿ ಉತ್ತಮ ಸಹಕಾರ ಸಂಸ್ಥೆಯ ರೂಪು ರೇಷೆಗಳನ್ನು ತಯಾರಿಸಬಹುದಾಗಿದೆ. ವಿದ್ಯ-ಕಲಿಸುವ ಬಗ್ಗೆ ಆಸಕ್ತಿ ಇದ್ದರೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪ್ರತಿಯೊಂದೂ ಸಂಸ್ಥೆಯ ಕುರಿತು ಅಧ್ಯಯನ ಮಾಡುತ್ತಾ ಅಲ್ಲಿರುವ ಸಾಧಕ-ಬಾಧಕ, ಒಳಿತು-ಕೆಡುಕುಗಳನ್ನು ತಿಳಿದು ಸಮಗ್ರ ಪ್ರಬಂಧ ರಚಿಸಿ ಯೋಗ್ಯ-ಯುಕ್ತ ಶಿಕ್ಷಣ ಸಂಸ್ಥೆಗಳ ಪ್ರಾರೂಪವನ್ನು ತನ್ನ ಅಭಿಪ್ರಾಯದೊಂದಿಗೆ ರೂಪಿಸಬಹುದು. ಹೀಗೆ ಪ್ರತೀ ವಿದ್ಯಾರ್ಥಿ ತಿಂಗಳಿಗೊಂದಾ ವರ್ತಿ ಒಂದೊಂದು ವಿಷಯದ/ ಕ್ಷೇತ್ರ ನೈಜ, ಪ್ರಯೋಗಾತ್ಮಕ ಅಧ್ಯಯನ ಮಾಡುವದರಿಂದ ವಿದ್ಯಾರ್ಥಿಗೆ ಅತ್ಯುತ್ತಮ ಸ್ವ-ಕಲಿಕೆ ಸಾಧ್ಯವಾಗಿ ಪ್ರಥಮ ಮಾಹಿತಿ ಲಭಿಸುವದರಿಂದ ಸ್ವಾಧ್ಯಾಯಕ್ಕೆ ಅತ್ಯುತ್ತಮ ಸಂದರ್ಭ ಒದಗಿಸುತ್ತದೆ. ಇಂತಹ ಕಾರ್ಯದಿಂದ ವಿದ್ಯಾರ್ಥಿಗೆ ಆತನ ಆಸಕ್ತಿಯ ಕ್ಷೇತ್ರದ ಸಂಪೂರ್ಣ ಪರಿಚಯವಾಗಿ ಅಲ್ಲಿರುವ ಸಾಧಕ-ಬಾಧಕ, ಪರಿಣತರು, ತಜ್ಞರು, ಜ್ಞಾನವಂತರು, ಇತ್ಯಾದಿಗಳ ಸಮಗ್ರ ಮಾಹಿತಿ, ಅಭಿಪ್ರಾಯಗಳು, ಲಭ್ಯವಾಗಿ ಕುಶಲತೆ ವೃದ್ಧಿಸಿಕೊಳ್ಳಲು ಅತ್ಯುತ್ತಮ ಸಂದರ್ಭ, ಅವಕಾಶವನ್ನು ಒದಗಿಸಲಿದೆ. ತನ್ನ ಆಯ್ಕೆ ಒಂದು ವೇಳೆ ಸೂಕ್ತವಲ್ಲವೆಂದಾದಲ್ಲಿ ಬೇರೆ ವಿಷಯಕ್ಕೆ ಹೊರಳಲೂ ಇಲ್ಲಿ ಸಂಪೂರ್ಣ ಅವಕಾಶ ಇರುವದರಿಂದ ವಿದ್ಯಾರ್ಥಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ಇಲ್ಲಿ ನೀಡಲಾಗಿದೆ.
ವೈವಿಧ್ಯಮಯವಾದ ಪ್ರಯೋಗಿಕ ಕಲಿಕೆಯಿಂದ ಸಾಕಷ್ಟು ಪ್ರೌಢಿಮೆ ಪಡೆದ ವಿದ್ಯಾರ್ಥಿ 12ನೇ ತರಗತಿಯ ತರುವಾಯದ ಕಾಲೇಜು ವಿದ್ಯಾಭ್ಯಾಸದ ಸಂದರ್ಭ ತನ್ನ ಆಯ್ದ ವಿಷಯದಲ್ಲಿ ಒಂದು ವರ್ಷದ ಸರ್ಟಿಫಿಕೇಟ್, ಎರಡು ವರ್ಷದ ಡಿಪ್ಲೊಮಾ, ಮೂರು ವರ್ಷದ ಪದವಿ, ನಾಲ್ಕು-ಐದು ವರ್ಷದ ಸ್ನಾತಕೋತ್ತರ ಪದವಿ ಇತ್ಯಾದಿ ಯಾವುದನ್ನಾದರೂ ಹೊಂದಿ ಸ್ವತ: ಹೆಚ್ಚು ಕೌಶಲ ಭರಿತನಾಗಿ ಉದ್ಯೋಗದ ಕ್ಷೇತ್ರಕ್ಕೆ ಕಾಲಿಡಬಹುದಾಗಿದೆ. ಈ ಪ್ರಕಾರ ನೂತನ ಶಿಕ್ಷಣ ಪದ್ಧತಿ ಬಹಳ ಉತ್ತಮ ಅವಕಾಶಗಳನ್ನು ವಿದ್ಯಾರ್ಥಿಗೆ ಕರುಣಿಸಿ ಸ್ವತಂತ್ರ ಆಯ್ಕೆಗೆ ಪ್ರಾಧಾನ್ಯತೆ ನೀಡಿರುವದು ಬಹು ಯುಕ್ತವಾಗಿದೆ.
ಇಷ್ಟೆಲ್ಲಾ ಉತ್ತಮ ಅಂಶಗಳಿರುವ ನೂತನ ಶಿಕ್ಷಣ ನೀತಿಯನ್ನು ಆಯಾ ರಾಜ್ಯ ಸರಕಾರಗಳು ಜಾರಿಗೆ ತರುವಾಗ ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನೇ ಮಾತೃಭಾಷೆಯನ್ನಾಗಿ ಕಡ್ಡಾಯವಾಗಿ ಜಾರಿಗೊಳಿಸಬೇಕು. ಇದು 8ನೇ ತರಗತಿಯ ಪ್ರಥಮಿಕ ಶಿಕ್ಷಣದ ತನಕವಂತೂ ಕಡ್ಡಾಯವಾಗಿರಬೇಕು. ಇಲ್ಲದಿದ್ದಲ್ಲಿ ಮಾತೃಭಾಷೆಗೆ ಪ್ರಾಧಾನ್ಯತೆ ದೊರಕದೆ ಸಂಬಂಧಿತ ಭಾಷೆಯೇ ನಶಿಸಿ ಹೋಗಬಹುದು. ಮಾಮೂಲಿ ಶಾಲೆಗಳಾಗಲಿ ಅಥವಾ ಹೆಸರಿಸಲಾದ ಯಾವುದೇ ವಿದ್ಯಾಲಯುಗಳಾಗಲೀ ಯಾವ್ಯಾವ ಪ್ರದೇಶದ/ ರಾಜ್ಯದಲ್ಲಿಕಾರ್ಯ ನಿರ್ವಹಿಸುತ್ತಿವೆಯೋ ಅಲ್ಲಲ್ಲಿಯ ಭಾಷೆ, ರಾಷ್ಟ್ರ ಭಾಷೆ, ಅಂತರಾಷ್ಟ್ರೀಯ ಭಾಷೆಗಳನ್ನು ಕಲಿಯುವತ್ರಿ ಭಾಷಾ ಸೂತ್ರ ರಾಷ್ಟ್ರದೆಲ್ಲೆಡೆ ಎಲ್ಲಾ ಹಂತದ ಶಿಕ್ಷಣದಲ್ಲೂ ಸಮಾನವಾಗಿ ಜಾರಿಗೆ ಬರಬೇಕು. ಅದೇರೀತಿ ಸಂವಿಧಾನದ ಆಶಯದ ಪ್ರಕಾರ 12ನೇ ತರಗತಿ ತನಕದ ಎಂದರೆ 18 ವರ್ಷದ ತನಕದ ಶಿಕ್ಷಣ ಕಡ್ಡಾಯವಾಗಿ ಎಲ್ಲ ಮಗುವಿಗೂ ದೊರಕಿ ಪ್ರತಿಶತ ಮುಂದುವರಿಯಬೇಕು. ಅಂತೆಯೇ ಬಿಸಿ ಊಟ ಇತ್ಯಾದಿ ಸೌಲಭ್ಯಗಳು ಕೂಡಾ ಕಡ್ಡಾಯ ಶಿಕ್ಷಣದ ಕೊನೇ ತನಕ ಯಥಾವತ್ ಮುಂದುವರೆದು ಎಲ್ಲರೂ ಕಡ್ಡಾಯ ಪ್ರೌಢ ಶಿಕ್ಷಣವಂತರಾಗಿ ಹೊರ ಹೊಮ್ಮುವುದು ದೇಶದ ಒಳಿತಿನ ದೃಷ್ಟಿಯಿಂದ ಅತ್ಯಂತ ಯುಕ್ತ, ಶ್ರೇಯಸ್ಕರ ಹಾಗೂ ಅನಿವಾರ್ಯವಾಗಿದೆ.
ಲೇಖನ: ರಾಯೀರಾಜಕುಮಾರ್, ಮೂಡುಬಿದಿರೆ.
ಲೇಖಕರು: ಹಿರಿಯ ಶಿಕ್ಷಕರು, ಜಿಲ್ಲಾಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು