"ನಾ"ನ್ ಎನ್ನುವುದು ಗರ್ವದ ಮಾತು. ಅದರಲ್ಲೂ ನಾನೆ(ವೆ)ಣಿಸಿದಂತೆ ಆಗಬೇಕು ಎಂದಾಗ ಅದು ಅಹಂಕಾರದ ಪರಮಾವಧಿಯೇ ಆಗುವುದು. "ನಾನು" ಬಿಟ್ಟರೆ ಸ್ವರ್ಗಕ್ಕೆ ಹೋದೇನು! ಎಂಬ ವಾಕ್ಯವೇ ಪರಮಸತ್ಯವಾಗಿರುವಾಗ ಅದನ್ನೇ ಬಿಟ್ಟು ಬಿಟ್ಟರೆ ಬಾಳು ಬದುಕಬಹುದು, ಬೆಳಕಾಗಬಹುದು.

ದುಃಖ ಓಡಿಹೋಗಬಹುದು ಬಂಧನ ಸಡಿಲಗೊಂಡು ಬಾಂಧವ್ಯ ಬೆಸೆಯಬಹುದು. ಆದರೆ ಅದಕ್ಕೆ "ನಾ" ಅನ್ನುವುದು ಬಿಡಲೇಬೇಕು. ತ್ಯಾಗಮಯಿಯಾಗಿ ಉಕಾರ ಬಂದರೆ "ನಾವು" ಅಂದಾಗ "ನಿ"ಸ್ವಾರ್ಥವೇರ್ಪಡುವ ಕಾಲ ಸನ್ನಿಹಿತವಾಗಿದೆಯೆಂದರ್ಥ.

   ಹೌದು ಈ ಬಾಳೆಂಬುದು ನಾವೆಣಿಸಿದ ರೀತಿಯಲ್ಲಿ ಮುಂದೆ ಸಾಗುವುದಿಲ್ಲ. ಬೇಕು ಬೇಡಗಳ ನಿರ್ಧಾರ ಕೆಲವೊಮ್ಮೆ ಜ್ವಾಲಾಮುಖಿಯಂತೆ ಆವರಿಸಿ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿ ಬಿಡುತ್ತದೆ. ಹಿಡಿತಕ್ಕೆ ಸಿಗದ ವಸ್ತುವೆಂದರೆ ಈ ಬದುಕೇ ಒಂದು ಉದಾಹರಣೆಯೆನ್ನಬಹುದು. ವಾಯುವನ್ನು 

ನೋಡಲು, ಹಿಡಿಯಲು ಹೇಗೆ ಸಾಧ್ಯವಿಲ್ಲವೋ ಹಾಗೆ. ಆದರೆ ಉಸಿರಾಡುವ ಮೂಲಕ ನಾವು ಅನುಭವಿಸುತ್ತೇವೆ. ಗಿಡಮರಗಳ ಅಲುಗಾಡುವಿಕೆಯಿಂದಲೂ ಅನುಭವ ಪಡೆಯುತ್ತೇವೆ. ಈ ಅನುಭವಗಳೇ ನಮಗೆ ಕಲಿಯುವ ಪಾಠಗಳಾಗುತ್ತವೆ. ಇಲ್ಲಿ ನಾವು ವಿದ್ಯಾರ್ಥಿಗಳೇ. ದಿನವೂ ಹೊಸ ಹೊಸ ಪಾಠ 

ಕಲಿಯುವ ಮೂಲಕ ಬದುಕಿನ ಒಂದೊಂದೇ ಹೆಜ್ಜೆಯನ್ನಿಡುತ್ತ ಮುಂದೆ ಸಾಗುತ್ತಿರುತ್ತೇವೆ. ಕಹಿ ಅನುಭವಗಳೊಂದಿಗೆ ಸಿಹಿ ಹೂರಣವನ್ನು ಜೋಡಿಸುತ್ತ ಪಥ ಮುಂದಮುಂದಕ್ಕೆ ಸಾಗುತ್ತ ಲಿರುತ್ತದೆ .  ಕಾಲದ ಗಣನೆ ಅರಿವಿಗೆ ಬಾರದಂತೆ ಜೀವನ ಪಾಠ ಕಲಿಸುತ್ತ, ಕಲಿಯುತ್ತ ಮುಂದೆ ಸಾಗುತ್ತಿರುತ್ತೇವೆ. 

-ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು.