ಪುತ್ತೂರು: ಶಿಕ್ಷಕ ತನ್ನ ಜೀವನ ಪರ್ಯಂತ ವಿದ್ಯಾರ್ಥಿಯಾಗಿಯೇ ಮುಂದುವರಿಯಬೇಕು. ಕಿಪ್ರಗತಿಯಲ್ಲಿ ಬದಲಾಗುತ್ತಿರುವ ಈ ತಾಂತ್ರಿಕ ಯುಗದಲ್ಲಿ ನಿನ್ನೆ ಪಡೆದ ಪದವಿಯು ಈ ದಿನ ಅಪ್ರಸ್ತುತವಾಗಿ ಪರಿಗಣಿಸಲ್ಪಡುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಸ್ನಾತತೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಆಶ್ರಯದಲ್ಲಿ ಎಪ್ರಿಲ್ 12ರಂದು ಸ್ನಾತಕೋತ್ತರ ಗ್ರಂಥಾಲಯದಲ್ಲಿ ‘ಬೋಧನೆ ಮತ್ತು ಕಲಿಕೆಯಲ್ಲಿ ಇ-ಸಂಪನ್ಮೂಲಗಳು’ ಕುರಿತು ಅಯೋಜಿಸಲಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ, ಮಾತನಾಡಿದರು. ಗ್ರಂಥಪಾಲಕರು ಕೇವಲ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ವ್ಯವಸ್ಥೆಗೊಳಿಸಿ, ವರ್ಗೀಕರಿಸುವ ಕೆಲಸಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಪುಸ್ತಕಗಳ ಕಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಗಂಥಪಾಲಕರು ಪ್ರಮುಖ ಪ್ರೇರಕರಾಗಿರಬೇಕು. ಶಿಕ್ಷಕರು ತಮ್ಮ ವಿಷಯದ ಕುರಿತು ಜ್ಞಾನಸಂಪನ್ನರಾದಾಗ ವಿದ್ಯಾರ್ಥಿಗಳ ಮೇಲೆ ಧನಾತ್ಮಕ ಪರಿಣಾಮ ಬೀರಬಲ್ಲರು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನಿರ್ವಹಣೆ ಅಭಿವೃದ್ಧಿ ಸಂಸ್ಥೆಯ ಗ್ರಂಥಪಾಲಕರಾದ ಡಾ. ಸುನಿಲ್ ಎಮ್ ವಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇ-ಸಂಪನ್ಮೂಲಗಳು ಲಭ್ಯವಿದೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಶೋಧಕರು ಈ ಸಂಪನ್ಮೂಲಗಳ ಮೂಲವನ್ನು ಕಂಡು ಹಿಡಿಯುವ ತಂತ್ರಗಾರಿಕೆಯನ್ನು ಅರಿತಿರಬೇಕು. ಪ್ರಸ್ತುತ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಸಂಶೋಧನೆಗಳನ್ನು ಪ್ರೆರೇಪಿಸಲು ಬಹಳಷ್ಟು ಪ್ರಮಾಣದಲ್ಲಿ ಆರ್ಥಿಕ ಸಹಾಯವನ್ನು ಒದಗಿಸುತ್ತಿದ್ದು, ಶಿಕ್ಷಣ ಸಂಸ್ಥೆಗಳು ಇವುಗಳ ಸಮರ್ಪಕ ಬಳಕೆಗೆ ಉತ್ಸುಕರಾಗಬೇಕು ಎಂದರು.

ನಂತರ ಜರಗಿದ ಮೊದಲ ತಾಂತ್ರಿಕ ಗೋಷ್ಠಿಯಲ್ಲಿ ‘ಆ್ಯಕ್‍ಸೆಸ್ ಅಂಡ್ ಯೂಸ್ ಆಫ್ ಇ-ಜರ್ನಲ್ಸ್ ಫಾರ್ ಟೀಚಿಂಗ್ ಅಂಡ್ ಲರ್ನಿಂಗ್’ ಹಾಗೂ ಎರಡನೆಯ ಗೋಷ್ಠಿಯಲ್ಲಿ ‘ಡೇಟಬೇಸ್ ಫಾರ್ ರಿಸರ್ಚ್ ಅಂಡ್ ಪಬ್ಲೀಕೇಶನ್’ ಕುರಿತು ಸಂಪನ್ಮೂಲ ವ್ಯಕ್ತಿ ಡಾ. ಸುನಿಲ್ ಎಮ್ ವಿ ವಿಚಾರ ಮಂಡಿಸಿದರು.

ಈ ಕಾರ್ಯಾಗಾರದಲ್ಲಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎಲ್ಲಾ ಪ್ರಾಧ್ಯಾಪಕರು ಪ್ರತಿನಿಧಿಗಳಾಗಿ ಭಾಗವಹಿಸಿದರು. ಗ್ರಂಥಪಾಲಕಿ ನೂತನ ಕುಮಾರಿ ಮತ್ತು ಸಲಹಾ ಸಮಿತಿ ಸದಸ್ಯ ಪ್ರವೀಣ್ ಪ್ರಕಾಶ್ ಡಿ’ಸೋಜ ಸಂಯೋಜನೆಯಲ್ಲಿ ಸಹಕರಿಸಿದರು.

ಪ್ರತಿಭಾ ಎಸ್ ಜಿ ಮತ್ತು ತಂಡದವರು ಪ್ರಾರ್ಥಿಸಿದರು. ಕಾಲೇಜಿನ ಸ್ನಾತಕೋತ್ತರ ಲೈಬ್ರರಿ ಸಲಹಾ ಸಮಿತಿಯ ಸಂಯೋಜಕ ವಂ. ರಿತೇಶ್ ರೋಡ್ರಿಗಸ್ ಸ್ವಾಗತಿಸಿದರು. ಗ್ರಂಥಪಾಲಕ ಮನೋಹರ್ ಎಸ್ ಜಿ ವಂದಿಸಿದರು.  ಸ್ನಾತಕೋತ್ತರ ವಿದ್ಯಾರ್ಥಿನಿ ಐವಿ ಅಂಜಲಿ ಕಾರ್ಯಕ್ರಮ ನಿರೂಪಿಸಿದರು.