ಪುತ್ತೂರು: ಶಿಕ್ಷಣ ಸಂಸ್ತೆಗಳು ವಿದ್ಯಾರ್ಥಿಗಳ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಸ್ತುತ ವಿದ್ಯಾರ್ಥಿಗಳು ತಮ್ಮ ಪಠ್ಯಾಧ್ಯಯನದೊಂದಿಗೆ ವೃತ್ತಿ ಕೌಶಲ್ಯಗಳನ್ನು ಸಂಪಾದಿಸಿಕೊಳ್ಳುವ ಅನಿವಾರ್ಯತೆಯಿದೆ ಎಂದು ಬಿಎಎಸ್‍ಎಫ್‍ನ ನಿವೃತ್ತ ಸೈಟ್ ಡೈರೆಕ್ಟರ್ ಪುರಂದರ ಶೆಟ್ಟಿ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಮತ್ತು ರಕ್ಷಕ ಶಿಕ್ಷಕ ಸಂಘವು ಜಂಟಿಯಾಗಿ ಮಾರ್ಚ್ 2 ರಂದು ಕಾಲೇಜು ಪ್ರಾಂಗಣದಲ್ಲಿ ಆಯೋಜಿಸಿದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು. ಹಿರಿಯ ವಿದ್ಯಾರ್ಥಿ ಸಂಘವು ಶಿಕ್ಷಣ ಸಂಸ್ಥೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರಬೇಕು. ಪ್ರಸ್ತುತ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನಗೈಯುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಮುನ್ನಡೆಸುವ ಮಹತ್ತರ ಜವಾಬ್ದಾರಿಯನ್ನು ಹಿರಿಯ ವಿದ್ಯಾರ್ಥಿಗಳು ನಿರ್ವಹಿಸಬೇಕು ಎಂದರು.

ಗೌರವ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಈ ಸಂಸ್ಥೆಯಲ್ಲಿ ಅಧ್ಯಯನಗೈದ ವಿದ್ಯಾರ್ಥಿಗಳು ಸದಾ ಧನ್ಯತಾ ಭಾವವನ್ನು ಹೊಂದಿರಬೇಕು. ಹಿರಿಯ ವಿದ್ಯಾರ್ಥಿಗಳೆಲ್ಲರೂ  ಉತ್ತಮ ಸಹಕಾರ ನೀಡುವ ಮೂಲಕ ಸಂಸ್ಥೆ ಇನ್ನೂ ಹೆಚ್ಚಿನ ಸಾಧನೆ ಗೈಯುವಂತೆ ಕಂಕಣಬದ್ದರಾಗಬೇಕು ಎಂದರು.

ಇನ್ನೋರ್ವ ಗೌರವ ಅತಿಥಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ. ವಿಜಯ್ ಲೋಬೊ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಹಾಗೆಯೇ ಸಂಸ್ಥೆಯ ಎಲ್ಲಾ ಸವಲತ್ತುಗಳನ್ನು ಹೊರ ಜಗತ್ತಿಗೆ ಪ್ರಚುರ ಪಡಿಸುವ ಪ್ರಧಾನ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ಅತಿ ವಂ. ಆಲ್ಫ್ರೆಡ್ ಜೆ ಪಿಂಟೊ ಮಾತನಾಡಿ, ಕಳೆದ 62 ವರ್ಷಗಳಲ್ಲಿ ಈ ಸಂಸ್ಥೆಯು ಮೌಲ್ಯಯುತ ಮಾನವ ಸಂಪನ್ಮೂಲವನ್ನು ಸೃಷ್ಠಿ ಮಾಡುವ ಮಹತ್ತರ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದೆ. ಇಲ್ಲಿ ರೂಪಗೊಳ್ಳುವ ಮಾನವ ಶಕ್ತಿ ವಿಶ್ವದ ವಿವಿಧ ಸ್ತರಗಳಲ್ಲಿ ರಚನಾತ್ಮಕ ಚಟುವಟಿಕೆಗಳಲ್ಲಿ ಕಾರ್ಯೋನ್ಮುಖರಾಗುತ್ತಿರುವುದು ಅತ್ಯಂತ ಹರುಷವನ್ನೀಯುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ವಯೋನಿವೃತ್ತ ಸಿಬ್ಬಂದಿಗಳು, ರ್ಯಾಂಕ್ ವಿಜೇತರು, ವಿಶೇಷ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಸ್ಪಂದನ ಸಭಾಭವನಕ್ಕೆ ಅಗತ್ಯವಿರುವ ಇನ್‍ವರ್ಟರ್‍ನ್ನು ಕೊಡುಗೆಯಾಗಿ ಪ್ರಾಚಾರ್ಯರಿಗೆ ಹಸ್ತಾಂತರಿಸಲಾಯಿತು.

ಸಭಾ ಕಾರ್ಯಕ್ರಮದ ಮೊದಲಿಗೆ ಸ್ಪಂದನ ಸಭಾವನದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯು ಜರಗಿತು.


ಶಶಿಕಲಾ ಕುಂಬ್ರ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ. ಜಗಜೀವನ್‍ದಾಸ್  ರೈ ಸ್ವಾಗತಿಸಿ,  ಕಾರ್ಯದರ್ಶಿ ಡಾ| ಕೆ.  ಚಂದ್ರಶೇಖರ್ ವರದಿ ಮಂಡಿಸಿದರು.  ಖಜಾಂಜಿ ತೇಜಸ್ವಿ ಭಟ್ ಕೆ ಪ್ರತಿಭಾನ್ವಿತರ ವಿವರ ನೀಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಣ್ಣ ರೈ ವಂದನಾರ್ಪಣೆಗೈದರೆ, ಕಾರ್ಯದರ್ಶಿ ಪ್ರಶಾಂತ್ ರೈ ಪಿಟಿಎ ವರದಿ ಮಂಡಿಸಿದರೆ, ಖಜಾಂಜಿ ಪ್ರೇಮಲತಾ ಕೆ ಸನ್ಮಾನಿತರನ್ನು ಪರಿಚಯಿಸಿದರು. ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.


ಕೊನೆಯಲ್ಲಿ ಹಿರಿಯ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಕೂಡುವಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮವು ಪ್ರಸ್ತುತಗೊಂಡಿತು.