ಬಂಟ್ವಾಳ: ಸಜಿಪನಡು ಗ್ರಾಮವನ್ನು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಉಳ್ಳಾಲ ತಾಲೂಕಿಗೆ ಸೇರ್ಪಡೆ ವಿರೋಧ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಸಜಿಪನಡು ಗ್ರಾಮವನ್ನು ನಿರ್ಲಕ್ಷಿಸಿದ ಬಗ್ಗೆ ಎಸ್ಡಿಪಿಐ ಸಜೀಪನಡು ಗ್ರಾಮ ಸಮಿತಿ ವತಿಯಿಂದ ಸಜಿಪನಡು ಜಂಕ್ಷನ್‍ನಲ್ಲಿ ಸೋಮವಾರ ಪತಿಭಟನಾ ಸಭೆ ನಡೆಯಿತು.

ಸಜಿಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ನಾಸಿರ್ ಸಜಿಪ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಉಳ್ಳಾಲ ತಾಲೂಕು ರಚನೆಗೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಆದರೆ, ಸಜಿಪನಡು ಗ್ರಾಮವನ್ನು ಉಳ್ಳಾಲ ತಾಲೂಕಿಗೆ ಸೇರ್ಪಡೆ ನಮ್ಮ ವಿರೋಧವಿದೆ. ಸಜಿಪನಡು ಗ್ರಾಮಸ್ಥರಿಗೆ ಎಲ್ಲ ವಿಷಯಗಳಲ್ಲಿ ಬಂಟ್ವಾಳ ತಾಲೂಕು ಸೂಕ್ತವಾಗಿದ್ದಲ್ಲದೆ, ಕೇಂದ್ರ ಸ್ಥಾನವೂ ಆಗಿದೆ. ಈಗಾಗಲೇ ಬಂಟ್ವಾಳ ತಾಲೂಕು ಕಚೇರಿಯಲ್ಲಿ ದಾಖಲೆಗಳನ್ನು ತಿದ್ದುಪಡಿ ಮಾಡುವಲ್ಲಿ ಸಮಸ್ಯೆಗಳು ತಲೆದೋರಿದ್ದು ನೂತನವಾಗಿ ನಿರ್ಮಾಣಗೊಳ್ಳಲಿರುವ ತಾಲೂಕಿನಲ್ಲಿ ಮತ್ತಷ್ಟು ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.

ಎಸ್ಡಿಪಿಐ ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್. , ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಐಎಂಆರ್, ಸಜಿಪನಡು ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮನ್ ಎಸ್.ಎನ್, ಇಕ್ಬಾಲ್ ಬೈಲುಗುತ್ತು, ಅಬ್ದುಲ್ ರಶೀದ್, ಗ್ರಾಮ ಸಮಿತಿ ಅಧ್ಯಕ್ಷ ಮಹಮ್ಮದ್ ನವಾಝ್ ಹಾಜರಿದ್ದರು. ಸದಕತುಲ್ಲಾ ಸ್ವಾಗತಿಸಿ, ವಂದಿಸಿದರು.