ಬಂಟ್ವಾಳ: ಪ್ರತೀ ವರ್ಷದಂತೆ ಕಾಡಬೆಟ್ಟುಗುತ್ತು ಮನೆಯಲ್ಲಿ ಭಾನುವಾರ ಮಧ್ಯಾಹ್ನ ಪಂಜುರ್ಲಿ ದೈವಕ್ಕೆ ಹಗಲು ನೇಮೋತ್ಸವ ಮತ್ತು ಇಲ್ಲಿನ ಪಿಲಿಂಗಾಲು ಮೂರು ಎಕರೆ ಗದ್ದೆಯಲ್ಲಿ ಸಾಂಪ್ರದಾಯಿಕ 'ಕಂಬಳ ಕೋರಿ ಪೂಕರೆ' ಅಳವಡಿಸಿ ನೇಜಿ ನೆಡುವ  ಸಂಭ್ರಮದಲ್ಲಿ ನೂರಾರು ಮಂದಿ  ಪಾಲ್ಗೊಂಡರು.   

 ಇಲ್ಲಿರುವ ನಾಲ್ಕು ಜೈನ ಮನೆತನಕ್ಕೆ ಸಂಬಂಧಿಸಿದಂತೆ ಕಾಡಬೆಟ್ಟುಗುತ್ತಿನ ಮನೆಯಲ್ಲಿ ಪ್ರತೀ ವರ್ಷ ಮಧ್ಯಾಹ್ನ ಪಂಜುರ್ಲಿ ದೈವಕ್ಕೆ ವಾರ್ಷಿಕ ನೇಮೋತ್ಸವ ಮತ್ತು ಈ ದೈವಕ್ಕೆ ಸಂಬಂಧಿಸಿದ ಕಂಬಳಗದ್ದೆಯಲ್ಲಿ ಸಂಪ್ರದಾಯದಂತೆ ಕಂಬಳ ಕೋಣಗಳನ್ನು ಇಳಿಸಿ, ಎತ್ತರದ ರಥದ ಮಾದರಿ ರಚಿಸಿದ ಕೆಂಪು ಹೂವಿನಿಂದ ಅಲಂಕಾರಗೊಂಡ ಪೂಕರೆಯನ್ನು ಎಳೆದು ಗದ್ದೆಯ ಮಧ್ಯೆ ಭಾಗದಲ್ಲಿ ಅಳವಡಿಸುವ ದೃಶ್ಯ ವೀಕ್ಷಿಸಲು ಅಪಾರ ಮಂದಿ ಗದ್ದೆಯ ಸುತ್ತಲೂ ನೆರೆಯುತ್ತಾರೆ.  ಇದೇ ವೇಳೆ 'ನಾಗಬೆಮ್ಮೆರ್' ವೇಷಧಾರಿ ಗದ್ದೆಯ ಪೈರನ್ನು ಸಂರಕ್ಷಿಸುವ ಭರವಸೆ ನೀಡುತ್ತಾ ತೆಂಗಿನ ಹಸಿ ಮಡಲಿನಿಂದ ತಯಾರಿಸಿದ ಕುದುರೆ ಮತ್ತು ತೆಂಬರೆ ಶಬ್ಧದೊಂದಿಗೆ ಅರ್ಚಕ ವೇಷಧಾರಿ ಸಹಿತ ಗದ್ದೆಯ ಸುತ್ತು ಬಂದು ನಾಗಬನಕ್ಕೆ ತೆರಳುವುದು ಇಲ್ಲಿನ ರೂಢಿ.    

       

ಈ ಸಾಂಪ್ರದಾಯಿಕ ಪದ್ಧತಿ ಹಲವು ತಲೆಮಾರಿನಿಂದ ನಡೆದುಕೊಂಡು ಬಂದಿದ್ದು, ಇದರಲ್ಲಿ ಸ್ಥಳೀಯವಾಗಿ ಎಲ್ಲಾ ಜಾತಿ ಸಮುದಾಯಗಳ ಪಾಲ್ಗೊಳ್ಳುವಿಕೆ ಇದೆ.  ಈ ಪೈಕಿ, ಗದ್ದೆ ನಾಟಿಗೆ ಸಿದ್ಧಗೊಳಿಸುವುದು, ಪೂಕರೆ ನಿರ್ಮಾಣ, ದೈವ ದರ್ಶನ ಮತ್ತು ನಾಗಬೆಮ್ಮೆರ್ ತಂಡ, ಬ್ಯಾಂಡು, ವಾದ್ಯ ಸೇವೆ ಮತ್ತು ಗದ್ದೆಯಲ್ಲಿ ಪೂಕರೆ ಅಳವಡಿಸುವುದು ಹೀಗೆ ಪ್ರತಿಯೊಂದು ಕೆಲಸಗಳನ್ನು ಆಯಾಯ ವ್ಯಕ್ತಿಗಳು ಭಕ್ತಿ ಮತ್ತು ನಿಷ್ಠೆಯಿಂದ  ನಿರ್ವಹಿಸುತ್ತಿದ್ದಾರೆ ಎಂದು ಕಾಡಬೆಟ್ಟುಗುತ್ತು ಸತೀಶ್ ಕುಮಾರ್ ಜೈನ್ ಪಿಲಿಂಗಾಲು ತಿಳಿಸಿದ್ದಾರೆ. ಇದೇ ವೇಳೆ ಸುಡ್ಡುಮದ್ದು ಪ್ರದರ್ಶನ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ವಂಶೀಯ ಆಡಳಿತದಾರ ಕೆ.ರಾಜವರ್ಮ ಅಜ್ರಿ ಮತ್ತಿತರರು ಇದ್ದರು.