ಬಂಟ್ವಾಳ: ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ 5 ಗ್ರಾ.ಪಂ. ವ್ಯಾಪ್ತಿಯ 38 ಜನ ವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಯನ್ನು ಮಾಜಿ ಸಚಿವ ಬಿ. ರಮಾನಾಥ ರೈ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸಾಮಾಜಿಕ ಬದುಕಿನಲ್ಲಿ ಅತ್ಯಂತ ಹೆಚ್ಚು ಮನಸ್ಸಿಗೆ ಖುಷಿ ಕೊಟ್ಟ ಕಾರ್ಯಕ್ರಮ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಲೂಕಿಗೆ ಐದು ಕುಡಿಯುವ ನೀರಿನ ಕಾಮಗಾರಿ ಯೋಜನೆ ಮಂಜೂರಾಗಿದ್ದು, 4 ಯೋಜನೆಗಳು ಪೂರ್ಣಪ್ರಮಾಣದಲ್ಲಿ ಜನತೆಯ ಉಪಯೋಗಕ್ಕೆ ಲಭ್ಯವಾಗಿರುವುದು ನನಗೆ ಅತೀವ ಸಂತಸ ತಂದಿದೆ.

ನನ್ನ ಅಧಿಕಾರವಧಿಯಲ್ಲಿ ಕಾರ್ಯಗಳನ್ನು ಯೋಜನೆಗಳನ್ನು ಕ್ಷೇತ್ರದಲ್ಲಿ ಮಂಜೂರು ಮಾಡಲು ಸಹಕರಿಸಿದಂತಹ ಹಿಂದಿನ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಧಿಕಾರಿ ವರ್ಗಕ್ಕೆ ಅವರು ಈ ಸಂದರ್ಭ ಕೃತಜ್ಞತೆ ಸಲ್ಲಿಸಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ 50 ವರ್ಷಗಳ ದೀರ್ಘಕಾಲಿಕ ದೂರದೃಷ್ಟಿ ಇರಿಸಿಕೊಂಡು ನಡೆಸಲಾಗಿದ್ದು, ಆಸುಪಾಸಿನ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸಲಿದೆ ಎಂದವರು ಹೇಳಿದರು.

ಬಂಟ್ವಾಳ ತಾಲೂಕಿನಲ್ಲಿ ಬಿಟ್ಟು ಹೋಗಿರುವ ಸಜೀಪಮುನ್ನೂರು ಗ್ರಾಮ ಪಂಚಾಯತ್ ಆಸುಪಾಸಿನ ಐದು ಗ್ರಾಮಗಳನ್ನು ಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ ಮುಂದಿನ ಹಂತದಲ್ಲಿ ಜಾರಿಯಾಗುವುದರಿಂದ ತಾಲೂಕಿನ ಎಲ್ಲಾ ಗ್ರಾಮಗಳೂ ಕುಡಿಯುವ ನೀರಿನ ಯೋಜನೆಗೆ ಒಳಪಡಲಿದೆ ಎಂದರು.

ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಪದ್ಮನಾಭ ರೈ,ತಾಲೂಕು ಪಂಚಾಯತ್ ಸದಸ್ಯರಾದ ಗಾಯತ್ರಿ ರವೀಂದ್ರ ಸಪಲ್ಯ, ಚಂದ್ರಶೇಖರ್ ಪೂಜಾರಿ ಕೊರ್ಯಾ, ಪ್ರಮುಖರಾದ ಉಮೇಶ್ ನರಿಕೊಂಬು, ಮಾಧವ ಕರ್ಬೆಟ್ಟು, ಅಲ್ಬರ್ಟ್ ಮೆನೆಜಸ್, ಪ್ರಕಾಶ್ ಕಾರಂತ್, ಉಮೇಶ್ ನಾಯಿಲ, ಕೃಷ್ಣಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.